ವಿಜಯಪುರ: ನ್ಯಾಯಸಮ್ಮತ ಚುನಾವಣೆ ನಡೆಯಲು ಅನುಕೂಲವಾಗುವಂತೆ ಸಿಂದಗಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪಿ. ಸುನೀಲಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಾರ್ಯಾಲಯದಲ್ಲಿ ಇಂಡಿ, ಸಿಂದಗಿ, ದೇವರ ಹಿಪ್ಪರಗಿ ಹಾಗೂ ಸಂಬಂಧಿಸಿದ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ಸಭೆ ನಡೆಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಮಹಾನಗರ ಪಾಲಿಕೆ ಇರುವುದರಿಂದ ಮಾದರಿ ನೀತಿ ಸಂಹಿತೆ ಸಿಂದಗಿ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ಅನ್ವಯವಾಗಲಿದ್ದು, ಸಂಬಂಧಪಟ್ಟ ಅಧಿಕಾರಿಗಳು ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು.
ಈ ಉಪ ಚುನಾವಣೆ ಅಂಗವಾಗಿ ಯಾವುದೇ ರೀತಿಯ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ಕಂಡುಬಂದಲ್ಲಿ ಹಾಗೂ ದೂರು ಬಂದಲ್ಲಿ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದರು. ಫ್ಲಾಯಿಂಗ್ ಸ್ಕ್ವಾಡ್ ತಂಡ, ಸ್ಟಾಟಿಕ್ ಸವೇನಲ್ಸ್ ತಂಡಗಳು ಸನ್ನದ್ಧವಾಗಿರಬೇಕು. ಸಿಂದಗಿ ಮತಕ್ಷೇತ್ರ ವ್ಯಾಪ್ತಿಯ ಸಂಬಂಧಪಟ್ಟ ಸ್ಥಳಗಳಲ್ಲಿ ಚೆಕ್‌ಪೋಸ್ಟ್ ಸ್ಥಾಪನೆಗೂ ಕ್ರಮ ಕೈಗೊಳ್ಳಲಾಗುವುದು. ಚುನಾವಣೆ ಕಾರ್ಯಕ್ಕೆ ಸರ್ಕಾರಿ ಸಿಬ್ಬಂದಿ ಮಾತ್ರ ಬಳಸಿಕೊಳ್ಳಲಾಗುವುದು ಎಂದು ತಿಳಿಸಿದರು.
ಸಿಇಒ ಗೋವಿಂದ ರೆಡ್ಡಿ ಮಾತನಾಡಿ, ಸಿಂದಗಿ ವಿಧಾನಸಭಾ ಕ್ಷೇತ್ರದ ಗ್ರಾಪಂ ಮತ್ತು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಚುನಾವಣೆ ಘೋಷಣೆಯಾದ 24 ಗಂಟೆಯೊಳಗೆ ಪೋಸ್ಟರ್, ಬಂಟಿಗ್ಸ್ ಮತ್ತು ಕಟೌಟ್ ತಕ್ಷಣ ತೆರವುಗೊಳಿಸಿ ಸಂಬಂಧಿಸಿದ ಅಧಿಕಾರಿಗಳು ವರದಿ ಸಲ್ಲಿಸಬೇಕು ಎಂದರು. ಚೆಕ್‌ಪೋಸ್ಟ್ ತಕ್ಷಣ ಸ್ಥಾಪಿಸಲು ಕ್ರಮ ಕೈಗೊಳ್ಳಬೇಕು. ಸಿಂದಗಿ, ತಾಳಿಕೋಟೆ, ದೇವರಹಿಪ್ಪರಗಿ ಹಾಗೂ ಸಂಬಂಧಿಸಿದ ಗಡಿಭಾಗದಲ್ಲಿ ಚೆಕ್‌ಪೋಸ್ಟ್ ಸಿದ್ಧವಾಗಿಟ್ಟುಕೊಳ್ಳಬೇಕು.
ಫ್ಲಾಯಿಂಗ್ ಸ್ಕ್ವಾಡ್ ತಂಡ, ಸ್ಟಾಟಿಕ್ ಸವೇನಲ್ಸ್ ತಂಡಗಳು ತಕ್ಷಣ ಸನ್ನದ್ಧಗೊಳ್ಳಬೇಕು. ಅನ ಧಿಕೃತ ಮದ್ಯ ಮಾರಾಟ ಬಗ್ಗೆ ಅಬಕಾರಿ ಇಲಾಖೆ ನೋಡಲ್ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ವರದಿ ಸಲ್ಲಿಸಬೇಕು. ಸಿಂದಗಿ ಮತ್ತು ಆಲಮೇಲ ಮುಖ್ಯಾಧಿಕಾರಿಗಳು ತಕ್ಷಣ ನಗರ ವ್ಯಾಪ್ತಿಯಲ್ಲಿ ಪೋಸ್ಟರ್‌ಗಳ ತೆರವಿಗೆ ಕ್ರಮ ಕೈಗೊಂಡು ವರದಿ ಸಲ್ಲಿಸಬೇಕು. ನಿಗದಿತ ಅವಧಿ ಯೊಳಗೆ ಬಾರ್, ರೆಸ್ಟೋರೆಂಟ್, ದಾಬಾ ಬಂದ್ ಆಗುವಂತೆ ಸಂಬಂಧಪಟ್ಟ ಅ ಧಿಕಾರಿಗಳು
ನೋಡಿಕೊಳ್ಳಬೇಕು. ದೂರು ಬರದಂತೆ ಸೂಕ್ತ ನಿಗಾ ಇಡಬೇಕು. ಅಧಿ ಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು ಮೊಬೈಲ್ ಆನ್ ಇಡಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ರಮೇಶ ಕಳಸದ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.