Advertisement

Elephants: 60 ವರ್ಷ ಮೀರಿದ ಆನೆಗಳನ್ನು ಕಾರ್ಯಾಚರಣೆಗೆ ಬಳಸಬೇಡಿ

09:51 AM Dec 06, 2023 | Team Udayavani |

ಹಾಸನದ ಸಕಲೇಶ ಪುರ ಸಮೀಪ ಪುಂಡಾನೆ ಸೆರೆ ಹಿಡಿಯುವ ಕಾರ್ಯಾಚರಣೆ ವೇಳೆ ಕರ್ನಾಟಕ ಅರಣ್ಯ ಇಲಾಖೆಗೆ ಸೇರಿದ ಮೈಸೂರು ದಸರಾ ಅಂಬಾರಿ ಆನೆಯೆಂದೇ ಖ್ಯಾತಿ ಪಡೆದಿದ್ದ ಆನೆ ಅರ್ಜುನ ಕಾಡಾನೆ ದಾಳಿಗೆ ತುತ್ತಾಗಿ ಸಾವನ್ನಪ್ಪಿರುವುದು ದುರದೃಷ್ಟಕರ. ಮತ್ತೂಂದು ಕಡೆ ಚಿಕ್ಕಮಗಳೂರಿನಲ್ಲಿ ಕಾಡಾನೆಯೊಂದನ್ನು ಸೆರೆಹಿಡಿಯುವ ಕಾರ್ಯಾಚರಣೆಯಲ್ಲಿ ಅರಿವಳಿಕೆ ಚುಚ್ಚುಮದ್ದು ನೀಡಿದ ಮೇಲೆ ಆನೆ ಉರುಳಿ ಮೃತಪಟ್ಟ ಘಟನೆ ನಡೆದಿದೆ. ಎರಡೂ ಘಟನೆಗಳು 3-4 ದಿನಗಳ ಅಂತರದಲ್ಲಿ ಸಂಭವಿಸಿವೆ.

Advertisement

ಈ ಎರಡೂ ಘಟನೆಗಳನ್ನು ಗಂಭೀರ ವಿಷಯವೆಂದು ಪರಿಗಣಿಸಬೇಕು. ಮದವೇರಿದ ಆನೆಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆ ನಡೆಸುವಾಗ ಮುಂದಿನ ದಿನಗಳಲ್ಲಿ ಅತ್ಯಂತ ಎಚ್ಚರಿಕೆ ವಹಿಸಬೇಕೆಂಬ ಸಂದೇಶವನ್ನು ಈ ಘಟನೆಗಳು ನೀಡಿವೆ.

ಆನೆಗಳನ್ನು ಸೆರೆಹಿಡಿಯಲು, ಕಾಲರ್‌ ಅಳವಡಿಸಲು ಮತ್ತು ಓಡಿಸಲು ಪ್ರಮಾಣಿತ ಕಾರ್ಯಾಚರಣೆಯ ಕಾರ್ಯವಿಧಾನಗಳನ್ನು ಅಳವಡಿಸುವುದು ಈಗ ಅತ್ಯಂತ ಅಗತ್ಯದ ಕೆಲಸವಾಗಿದೆ. ಇಷ್ಟಲ್ಲದೇ ಆನೆಗಳ ವಯಸ್ಸನ್ನೂ ಕಾರ್ಯಾಚರಣೆ ವೇಳೆ ಪರಿಗಣನೆಗೆ ತೆಗೆದುಕೊಳ್ಳಬೇಕಾಗಿದೆ. ಸೋಮವಾರ ಮೃತಪಟ್ಟ ಅರ್ಜುನನಿಗೆ 62 ವರ್ಷ ವಯಸ್ಸಾಗಿತ್ತು. ಸಕಲೇಶಪುರದಲ್ಲಿ ಕೈಗೊಂಡಿದ್ದ ಹೆಚ್ಚಿನ ಅಪಾಯದ ಸಂಭವ ಇರುವ ಕಾರ್ಯಾಚರಣೆಗಳಿಗೆ ನಿವೃತ್ತಿ ವಯಸ್ಸನ್ನು ಮೀರಿದ ಆನೆಗಳು ಭಾಗವಹಿಸುವುದನ್ನು ತಪ್ಪಿಸಬೇಕು.

ಪ್ರಮಾಣಿತ ಮಾರ್ಗಸೂಚಿ ಅನುಸರಣೆ ಅಗತ್ಯ: ಕಾಡಾನೆಗಳು ಮತ್ತು ಮದವೇರಿದ ಆನೆಗಳನ್ನು ಸೆರೆಹಿಡಿಯುವ ಮತ್ತು ಸ್ಥಳಾಂತರ ಕಾರ್ಯಾಚರಣೆಗಳನ್ನು ಕೈಗೊಳ್ಳುವ ಬಗ್ಗೆ ರಾಷ್ಟ್ರೀಯ ಮಟ್ಟದಲ್ಲಿ ಅಸ್ತಿತ್ವದಲ್ಲಿರುವ ಮಾರ್ಗಸೂಚಿಗಳಿವೆ. ಈ ಮಾರ್ಗಸೂಚಿಗಳನ್ನು ಸ್ಥಳೀಯ ಪರಿಸ್ಥಿತಿಗಳನ್ನು ಪರಿಗಣಿಸಿ ರಾಜ್ಯ ಮಟ್ಟದಲ್ಲಿ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನಗಳನ್ನು ರೂಪಿಸುವ ಅವಶ್ಯಕತೆ ಬಹು ಮುಖ್ಯವಾಗುತ್ತದೆ.

ಸ್ಪಷ್ಟವಾದ ಪ್ರಕ್ರಿಯೆಗಳು ಮತ್ತು ವ್ಯವಸ್ಥೆಗಳು ಅಂತಹ ಕಾರ್ಯಾಚರಣೆಗಳನ್ನು ಸಮರ್ಥವಾಗಿ ನಿರ್ವಹಿಸಲು ಅರಣ್ಯ ಇಲಾಖೆಯ ಮುಂಚೂಣಿ ತಂಡಗಳಿಗೆ ಸಹಾಯ ಮಾಡುತ್ತದೆ. ಅಂತಹ ಹೆಚ್ಚಿನ ಅಪಾಯದ ಕಾರ್ಯಾಚರಣೆಗಳನ್ನು ಸುಗಮವಾಗಿ ನಿರ್ವಹಿಸಲು ಸಾಧ್ಯವಾಗುವಂತೆ ಸಿಬ್ಬಂದಿಗೆ ತರಬೇತಿ ಅತ್ಯಗತ್ಯವಾಗಿದೆ. ಕರ್ನಾಟಕ ಅರಣ್ಯ ಇಲಾಖೆಯು ಮಾನವ-ಆನೆ ಸಂಘರ್ಷವನ್ನು ನಿರ್ವಹಿಸಲು ಕ್ಷಿಪ್ರ ಕಾರ್ಯಾಚರಣೆ ತಂಡಗಳ ನಿಯೋಜನೆ ಮಾಡಿದೆ.

Advertisement

ಆದಾಗ್ಯೂ, ಕಾಡಾನೆಗಳಿಗೆ ರೇಡಿಯೋ ಕಾಲರ್‌ ಅಳವಡಿಸುವ ಮತ್ತು ಆನೆ ಸೆರೆಹಿಡಿಯುವ ಕಾರ್ಯಾಚರಣೆಗಳಲ್ಲಿ ಭಾಗವಹಿಸುವ ಸಾಕಾನೆಗಳಿಗೂ, ಅರಣ್ಯ ಇಲಾಖೆ ಸಿಬ್ಬಂದಿ ವರ್ಗದವರಿಗೂ ಹೆಚ್ಚಿನ ಅಪಾಯಗಳು ಎದುರಾಗುತ್ತವೆ. ಅಲ್ಲದೇ ಸೆರೆ ಹಿಡಿಯಲ್ಪಡುವ ಕಾಡಾನೆಗೂ ಹೆಚ್ಚಿನ ಮಟ್ಟದ ಅಪಾಯ ಸಂಭವಿಸಬಹುದಾಗಿದೆ. ಆದ್ದರಿಂದ ಅಂತಹ ಕಾರ್ಯಾಚರಣೆಗಳನ್ನು ಕೈಗೊಳ್ಳುವುದಕ್ಕೆ ಸರಿಯಾದ ಯೋಜನೆ ಮತ್ತು ಪ್ರಮಾಣಿತ ಕಾರ್ಯಾಚರಣೆಯ ಕಾರ್ಯವಿಧಾನಗಳನ್ನು ಅನುಸರಿಸಬೇಕಾಗಿದೆ. ಸಿಬ್ಬಂದಿ ವರ್ಗದವರ ಮತ್ತು ಆನೆಗಳ ಸುರಕ್ಷತೆಗೆ ಆದ್ಯತೆ ನೀಡಬೇಕಾಗಿದೆ ಮತ್ತು ಇಂತಹ ಘಟನೆಗಳು ಪುನರಾವರ್ತನೆ ಯಾಗುವುದನ್ನು ತಪ್ಪಿಸ ಬೇಕಾಗಿದೆ.

(ಲೇಖಕರು- ನ್ಯಾಚುರಲಿಸ್ಟ್‌ ಹ್ಯುಮೇನ್‌ ಸೊಸೈಟಿ ಇಂಟರ್‌ನ್ಯಾಷನಲ್‌ – ಇಂಡಿಯಾ)

-ವಿನೋದ್‌ ಕೃಷ್ಣನ್‌

Advertisement

Udayavani is now on Telegram. Click here to join our channel and stay updated with the latest news.

Next