ಕುಂದಗೋಳ: ಕಾರ್ಮಿಕರು ಉದ್ಯೋಗವಿಲ್ಲವೆಂದು ಗುಳೆ ಹೋಗಬಾರದು. ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಉದ್ಯೋಗಖಾತ್ರಿ ಯೋಜನೆಯಡಿ ಕೆಲಸ ನೀಡಲಾಗುತ್ತದೆ ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕಾಧಿಕಾರಿ ಎಂ.ಎಸ್. ಮೇಟಿ ಹೇಳಿದರು.
ಅವರು ತಾಲೂಕಿನ ಚಿಕ್ಕಗುಂಜಳ ಗ್ರಾಮದ ಹೊರವಲಯದಲ್ಲಿನ 7.36 ಎಕರೆ ವಿಸ್ತಿರ್ಣದ ಪಡತಯ್ಯನ ಕೆರೆ ಹೂಳೆತ್ತುವ ಕಾಮಗಾರಿ ಗುರುವಾರ ವೀಕ್ಷಿಸಿ ಮಾತನಾಡಿದರು. ದುಡಿವ ಕೈಗಳಿಗೆ ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಒಬ್ಬರಿಗೆ 150 ದಿನಗಳ ಕಾಲ ಉದ್ಯೋಗ ನೀಡಲು ಸರ್ಕಾರ ಅನುದಾನ ನೀಡಿದೆ.
ಯಾರೂ ಕೆಲಸವಿಲ್ಲವೆಂದು ಬೇರೆಡೆ ವಲಸೆ ಹೋಗಬಾರದು. ಪುರುಷರು ಹಾಗೂ ಮಹಿಳೆಯರಿಗೆ 224 ರೂ. ಸಮಾನ ವೇತನ ನೀಡಲಾಗುತ್ತದೆ. ಕೆಲಸ ನಿರ್ವಹಿಸಿದ 9 ದಿನಗಳಲ್ಲೇ ಕಾರ್ಮಿಕರ ಖಾತೆಗೆ ನೇರವಾಗಿ ಹಣ ಜಮೆ ಮಾಡಲಾಗುವುದು ಎಂದು ಹೇಳಿದರು. ಈ ಕೆರೆ ಹೂಳೆತ್ತಲು ಈಗಾಗಲೇ 3 ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗಿದೆ.
ಕೆರೆ ವೀಕ್ಷಿಸಿ ಸಿಇಒ ಆರ್. ಸ್ನೇಹಲ್ ಅವರು ಆಗಮಿಸಿ ಕಾಮಗಾರಿ ಕಂಡು ಸಂತಸ ವ್ಯಕ್ತಪಡಿಸಿ, ಕೂಲಿಕಾರರು ಹಾಗೂ ಗ್ರಾಪಂ ಅಧ್ಯಕ್ಷೆ ಗೌರಮ್ಮ ಸಜ್ಜನ ಅವರು ಹೆಚ್ಚಿನ ಅನುದಾನ 30 ಲಕ್ಷ ರೂ. ಬಿಡುಗಡೆಗೊಳಿಸಬೇಕೆಂಬ ಮನವಿಗೆ ಸ್ಪಂದಿಸಿದ್ದಾರೆ ಎಂದರು. ತಾಪಂ ಎಡಿ ಅಜೇಯ ಎನ್. ಅವರು ಮಾತನಾಡಿ, ತಾಲೂಕಿನ ಪ್ರಸಕ್ತ ಸಾಲಿನಲ್ಲಿ ಒಟ್ಟು 16494 ಮಾನವದಿನಗಳ ಗುರಿಹೊಂದಲಾಗಿದೆ ಎಂದರು.
ಪಿಡಿಒ ಎಂ.ಎ. ಗಿರೀಶ, ಈಗಾಲೇ ಕಳೆದ 4 ದಿನಗಳಿಂದ ಕೆರೆ ಹೂಳೆತ್ತಲು 658 ಜನ ಕೂಲಿಕಾರರು ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು. ಗ್ರಾಪಂ ಉಪಾಧ್ಯಕ್ಷ ಸದಾನಂದ ಅಂಗಡಿ, ಗ್ರಾಪಂ ಸದಸ್ಯ ರಮೇಶ ದ್ಯಾವನೂರ, ಕಲ್ಲವ್ವ ಶಿರೂರ, ಫಕ್ಕೀರಗೌಡ ಗೌಡಗೇರಿ ಸೇರಿದಂತೆ ಇತರರಿದ್ದರು.