ತಿ.ನರಸೀಪುರ: ಕೇಂದ್ರ ಸರ್ಕಾರ ನೆರೆ ಪರಿಹಾರ ಕುರಿತು ಮಲತಾಯಿ ಧೋರಣೆ ತೋರುತ್ತಿದ್ದು, ಕರ್ನಾಟಕದ ಜನರ ತಾಳ್ಮೆ ಪರೀಕ್ಷಿಸಬೇಡಿ ಎಂದು ವರುಣಾ ಶಾಸಕ ಡಾ.ಎಸ್.ಯತೀಂದ್ರ ಎಚ್ಚರಿಸಿದರು. ತಾಲೂಕಿನ ಪಟ್ಟೇಹುಂಡಿಯಲ್ಲಿ 75 ಲಕ್ಷ ರೂ. ವೆಚ್ಚದ ಹುನುಗನಹಳ್ಳಿ ಮುಖ್ಯ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿ ಮಾತನಾಡಿದರು.
ಕೇಂದ್ರ ಸರ್ಕಾರದಿಂದ ನಿರಂತರವಾಗಿ ಅನ್ಯಾಯವಾಗುತ್ತಿರುವುದಕ್ಕೆ ಬಿಜೆಪಿ ಬೆಂಬಲಿಸಿ ಮಾತನಾಡುತ್ತಿದ್ದವರೇ ಈಗ ಬಿಜೆಪಿ, ಕೇಂದ್ರ ಸಚಿವರು ಹಾಗೂ ಸಂಸದರ ವಿರುದ್ಧ ತಿರುಗಿಬಿದ್ದಿದ್ದಾರೆ. ಬಿಜೆಪಿ ವರಿಷ್ಠರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮೇಲಿನ ಕೋಪವನ್ನು ಜನರ ಮೇಲೆ ತೋರುತ್ತಿದ್ದಾರೋ ಅಥವಾ ನಿಜವಾಗಿ ಹಣ ಇಲ್ಲವೂ ಗೊತ್ತಿಲ್ಲ.
ಒಟ್ಟಾರೆ ರಾಜ್ಯಕ್ಕೆ ಮೋಸವಾಗುತ್ತಿದ್ದು, ಇದೇ ಧೋರಣೆ ಮುಂದುವರಿದರೆ ಜನರು ತಾಳ್ಮೆ ಕೋಪಕ್ಕೆ ತಿರುಗಲಿದೆ ಎಂದರು. ಬಿಜೆಪಿ ಸರ್ಕಾರ ಹಾಗೂ ಸಂಸದರು ತಮ್ಮ ಕರ್ತವ್ಯದಿಂದ ವಿಮುಖರಾಗಿದ್ದಾರೆ. ಅವರಿಗೆ ಮುಂದಿನ ದಿನಗಳಲ್ಲಿ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ತಿಳಿಸಿದರು.
ರಾಜ್ಯದ ಯಾವ ಸಂಸದರೂ ಸ್ವಂತ ಬಲದಿಂದ ಗೆದ್ದಿಲ್ಲ, ಪ್ರತಾಪ್ ಸಿಂಹ ನರೇಂದ್ರ ಮೋದಿ ಹೆಸರಿನಲ್ಲಿ ಗೆದ್ದಿರುವುದರಿಂದ ಪ್ರಧಾನಿಯನ್ನು ಸಮರ್ಥಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ನಮಗ್ಯಾರಿಗೂ ಮೋದಿ ಓಲೈಸಿಕೊಳ್ಳುವ ಅಗತ್ಯವಿಲ್ಲ ಎಂದು ವಾಗ್ಧಾಳಿ ನಡೆಸಿದರು.
ಈ ವೇಳೆ ಮಾದೇಗೌಡನಹುಂಡಿ ಪಿಎಸಿಸಿಎಸ್ ಅಧ್ಯಕ್ಷ ಎನ್.ಅನಿಲ್‌ಕುಮಾರ್, ರಂಗಸಮುದ್ರ ಗ್ರಾಪಂ ಅಧ್ಯಕ್ಷೆ ಎಸ್.ಎಂ.ಮೀನಾಕ್ಷಿ, ಸದಸ್ಯೆ ಕಲ್ಪನಾ, ರಾಜೇಶ್, ಮುಖಂಡರಾದ ಹುನಗನಹಳ್ಳಿ ನಟರಾಜು, ಆರ್.ಮಂಜುನಾಥ್, ರಾಜೇಶ್, ತುಂಬಲ ಮಂಜುನಾಥ್ ಇತರರಿದ್ದರು.