Advertisement

ಉಪಮುಖ್ಯಮಂತ್ರಿ ಹುದ್ದೆ ವಿವಾದ ಜನರ ದೃಷ್ಟಿಯಲ್ಲಿ ಲಘುವಾಗದಿರಿ

10:04 AM Dec 18, 2019 | Team Udayavani |

ಜಾತಿಗೊಂದು, ಸಮುದಾಯಕ್ಕೊಂದು, ಊರಿಗೊಂದು ಎಂಬಂತೆ ಉಪ ಮುಖ್ಯಮಂತ್ರಿ ಹುದ್ದೆ ಹಂಚುವುದರಿಂದ ಆ ಹುದ್ದೆಗಿರುವ “ಕಲ್ಪಿತ ಮಹತ್ವ’ವೂ ಕಡಿಮೆಯಾಗುತ್ತದೆ. ಜನರ ದೃಷ್ಟಿಯಲ್ಲಿ ಈ ಹುದ್ದೆ ಲಘುವಾಗುವ ಮೊದಲು ನಾಯಕರು ಎಚ್ಚೆತ್ತುಕೊಳ್ಳುವುದು ಅಗತ್ಯ.

Advertisement

ಕರ್ನಾದಕದಲ್ಲೀಗ ಉಪ ಮುಖ್ಯಮಂತ್ರಿ ಹುದ್ದೆಯ ಕುರಿತಾದ ವಿವಾದ ಜೋರಾಗಿದೆ. ಅನರ್ಹಗೊಂಡಿದ್ದ ಶಾಸಕರ ಪೈಕಿ 12 ಮಂದಿ ಬಿಜೆಪಿ ಟಿಕೇಟಿನಲ್ಲಿ ಗೆದ್ದು ಬಂದ ಬಳಿಕ ಸರಕಾರ ಸರಳ ಬಹುಮತ ಗಳಿಸಿ ಅಧಿಕಾರದಲ್ಲಿ ಸ್ಥಿರವಾಯಿತೇನೋ ನಿಜ. ಆದರೆ ಹುದ್ದೆ ಆಕಾಂಕ್ಷಿಗಳ ಬೇಡಿಕೆಗಳು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮಾತ್ರವಲ್ಲದೆ ಬಿಜೆಪಿ ಹೈಕಮಾಂಡ್‌ಗೂ ತಲೆನೋವಾಗಿ ಪರಿಣಮಿಸಿದೆ. ಅದರಲ್ಲೂ ಉಪ ಮುಖ್ಯಮಂತ್ರಿ ಆಗಲು ತಯಾರಾಗಿ ನಿಂತಿರುವವರ ಯಾದಿ ಬಹಳ ದೊಡ್ಡದಿದ್ದು, ಒಬ್ಬರಿಗೆ ಕೊಟ್ಟರೆ ಇನ್ನೊಬ್ಬರಿಗೆ ಅಸಮಾಧಾನವಾಗುತ್ತದೆ. ಈ ಹಿನ್ನೆಲೆಯಲ್ಲಿ ಉಪ ಮುಖ್ಯಮಂತ್ರಿ ಹುದ್ದೆಯೇ ಬೇಡ ಎಂಬ ಮಾತುಗಳು ಕೇಳಿ ಬರುತ್ತಿವೆ.

ಅನರ್ಹರ ಪೈಕಿ ರಮೇಶ್‌ ಜಾರಕಿಹೊಳಿ ಈ ಹುದ್ದೆಯ ಮೇಲೆ ಕಣ್ಣಿಟ್ಟಿದ್ದರೆ, ಇನ್ನೊಂದೆಡೆ ಪ್ರಭಾವಿ ನಾಯಕ ಶ್ರೀರಾಮುಲು ಉಪ ಮುಖ್ಯಮಂತ್ರಿ ಪಟ್ಟ ದಕ್ಕದ ಹಿನ್ನೆಲೆಯಲ್ಲಿ ಮುನಿಸಿಕೊಂಡಿದ್ದಾರೆ. ಈಗಾಗಲೇ ರಾಜ್ಯದಲ್ಲಿ ಮೂವರು ಉಪಮುಖ್ಯಮಂತ್ರಿಗಳಿದ್ದಾರೆ. ಹೀಗಿರುವಾಗ ಇನ್ನೆಷ್ಟು ಉಪಮುಖ್ಯಮಂತ್ರಿಗಳನ್ನು ನೇಮಿಸಿಕೊಳ್ಳಬಹುದು ಎಂಬ ಜಿಜ್ಞಾಸೆಯೂ ನಡೆಯುತ್ತಿದೆ.

ಒಟ್ಟಾರೆಯಾಗಿ ಉಪಮುಖ್ಯಮಂತ್ರಿಗಳಾಗಲು ಹಾತೊರೆಯುತ್ತಿರುವವರ ಸಂಖ್ಯೆಯನ್ನು ನೋಡುವಾಗ ಪ್ರಚಲಿತ ರಾಜಕೀಯದಲ್ಲಿ ಈ ಹುದ್ದೆಗೆ ಇರುವ ಬೇಡಿಕೆ ಆಶ್ಚರ್ಯ ಹುಟ್ಟಿಸುತ್ತದೆ.

ಸಂವಿಧಾನದಲ್ಲಿ ಉಪ ಮುಖ್ಯಮಂತ್ರಿ ಎಂಬ ಹುದ್ದೆಯೇ ಇಲ್ಲ. ಉಪ ಮುಖ್ಯಮಂತ್ರಿ ಬಿಡಿ ಉಪ ಪ್ರಧಾನಿ ಹುದ್ದೆಯೂ ಇಲ್ಲ. ಆದರೆ ಸ್ವತಂತ್ರ ಭಾರತದ ಮೊದಲ ಸರಕಾರದಲ್ಲೇ ಉಪ ಪ್ರಧಾನಿಯನ್ನು ನೇಮಿಸಲಾಗಿತ್ತು. ಆಗ ಉಪ ಪ್ರಧಾನಿಯಾದವರು ಸರ್ದಾರ್‌ ವಲ್ಲಭಭಾಯಿ ಪಟೇಲ್‌. ಪ್ರಧಾನಿ ಪದವಿ “ವಂಚಿತ’ರಾಗಿದ್ದ ಪಟೇಲರನ್ನು ಸಮಾಧಾನಿಸುವ ಸಲುವಾಗಿ ಈ ಹುದ್ದೆಯನ್ನು ಅವರಿಗೆ ನೀಡಲಾಗಿತ್ತು. ಅನಂತರ ದೇವಿಲಾಲ್‌, ಎಲ್‌. ಕೆ. ಆಡ್ವಾಣಿ ಅವರಂಥವರು ಉಪ ಪ್ರಧಾನಿಯಾಗಿದ್ದಾರೆ.

Advertisement

ರಾಜ್ಯಗಳ ವಿಷಯಗಳಿಗೆ ಬಂದರೆ ಉಪ ಮುಖ್ಯಮಂತ್ರಿಗಳನ್ನು ನೇಮಿಸುವುದು ಈಗ ಮಾಮೂಲು ಎಂಬಂತಾಗಿದೆ. ಅದರಲ್ಲೂ ಸಮ್ಮಿಶ್ರ ಸರಕಾರ ಇದ್ದರೆ ಉಪಮುಖ್ಯಮಂತ್ರಿ ಹುದ್ದೆ ನೀಡಲೇಬೇಕಾಗುತ್ತದೆ ಎಂಬ ಪರಿಸ್ಥಿತಿಯಿದೆ.

ಆಂಧ್ರ ಪ್ರದೇಶದಲ್ಲಿ ಜಗನ್‌ಮೋಹನ್‌ ರೆಡ್ಡಿ ಪ್ರಮುಖ ಐದು ಸಮುದಾಯಗಳಿಂದ ಒಬ್ಬೊಬ್ಬರನ್ನು ಉಪಮುಖ್ಯಮಂತ್ರಿ ಮಾಡಿ ದಾಖಲೆ ಸ್ಥಾಪಿಸಿದ್ದಾರೆ. ಮಿತ್ರ ಪಕ್ಷಗಳ ಪ್ರಮುಖ ನಾಯಕರನ್ನು ಇನ್ನೂ ಸ್ಪಷ್ಟವಾಗಿ ಹೇಳಬೇಕಾದರೆ ಮುಖ್ಯಮಂತ್ರಿಯಾಗಲು ಯೋಗ್ಯತೆ ಇರುವವವರು, ಆದರೆ ಅನಿವಾರ್ಯ ಪರಿಸ್ಥಿತಿಯಲ್ಲಿ ಆ ಹುದ್ದೆಗೇರಲು ಅಸಾಧ್ಯವಾಗಿರುವವರನ್ನು ಸಮಾಧಾನಿಸುವ ಸಲುವಾಗಿ ಉಪ ಮುಖ್ಯಮಂತ್ರಿ ಮಾಡಲಾಗುತ್ತದೆ.

ಇದನ್ನು ಸಮ್ಮಿಶ್ರ ಸರಕಾರದ ಅನಿವಾರ್ಯತೆ ಎಂದು ಹೇಳಿ ಸಮರ್ಥಿಸಿಕೊಳ್ಳುಬಹುದೇನೋ? ಆದರೆ ಏಕ ಪಕ್ಷ ಸರಕಾರದಲ್ಲೂ ಜಾತಿಗೊಂದು, ಸಮುದಾಯಕ್ಕೊಂದು ಉಪ ಮುಖ್ಯಮಂತ್ರಿ ಹುದ್ದೆ ದಯಪಾಲಿಸುವುದನ್ನು ಯಾವ ರೀತಿಯಲ್ಲೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ.

ಇದು ವೋಟ್‌ಬ್ಯಾಂಕ್‌ ರಾಜಕೀಯವಲ್ಲದೆ ಬೇರೇನೂ ಅಲ್ಲ. ಎಲ್ಲ ಸಮುದಾಯಗಳಿಗೆ ಮುಖ್ಯಮಂತ್ರಿ ನಂತರದ ಸ್ಥಾನವನ್ನು ಕಲ್ಪಿಸಿ ಆ ಮೂಲಕ ಆಯಾ ಜಾತಿಯ, ಸಮುದಾಯದ/ ಪ್ರದೇಶದ ಮತಗಳನ್ನು ಖಾತರಿಪಡಿಸಿಕೊಳ್ಳುವದಷ್ಟೇ ಇದರ ಹಿಂದಿರುವ ಉದ್ದೇಶ.

ಇಷ್ಟೆಲ್ಲ ಲಾಬಿ, ಹೋರಾಟ ಮಾಡಿ ಗಳಿಸುವ ಉಪ ಮುಖ್ಯಮಂತ್ರಿ ಹುದ್ದೆಗೆ ವಿಶೇಷ ಅಧಿಕಾರವಾಗಲಿ ಸಂವಿಧಾನಾತ್ಮಕ ಮಾನ್ಯತೆಯಾಗಲಿ ಇದೆಯಾ ಅಂದರೆ ಅದೂ ಇಲ್ಲ. ಇದು ಒಂದು ರೀತಿಯಲ್ಲಿ ನಾಯಕರ “ಇಗೊ’ ತೃಪ್ತಿಪಡಿಸುವ ಹುದ್ದೆಯಷ್ಟೆ. ಒಂದನೇ ದರ್ಜೆ ನೌಕರರನ್ನು ವರ್ಗಾಯಿಸುವ ಪರಮಾಧಿಕಾರ ಇರುವುದು ಮುಖ್ಯಮಂತ್ರಿ ಕೈಯಲ್ಲಿ. ಉಪ ಮುಖ್ಯಮಂತ್ರಿಗಳಿಗೆ ಈ ವಿಚಾರದಲ್ಲಿ ಕೈಯಾಡಿಸುವ ಯಾವ ಅಧಿಕಾರವೂ ಇಲ್ಲ.

ಆಡಳಿತದಲ್ಲಿ ಯಾವ ರೀತಿಯಲ್ಲೂ ಉಳಿದ ಕ್ಯಾಬಿನೆಟ್‌ ದರ್ಜೆಯ ಸಚಿವರಿಗಿಂತ ಹೆಚ್ಚಿನ ಅಧಿಕಾರ ಉಪ ಮುಖ್ಯಮಂತ್ರಿಗಳಿಗಿಲ್ಲ. ಸಂಬಳ ಹಾಗೂ ಇತರ ಭತ್ಯೆಗಳು ಕೂಡ ಅವರಿಗೆ ಕ್ಯಾಬಿನೆಟ್‌ ಸಚಿವರಷ್ಟೇ ಸಿಗುತ್ತದೆ. ಉಪ ಮುಖ್ಯಮಂತ್ರಿಯಾದವ ತಾನು ಹೊಂದಿದ ಖಾತೆಗೆ ಸಂಬಂಧಪಟ್ಟ ಕಡತಗಳನ್ನೂ ಮಂಜೂರಾತಿಗಾಗಿ ಮುಖ್ಯಮಂತ್ರಿಗೇ ಕಳುಹಿಸಬೇಕು. ಕ್ಯಾಬಿನೆಟ್‌ ಸಭೆಯ ಅಧ್ಯಕ್ಷತೆ ವಹಿಸುವ ಅಧಿಕಾರವೂ ಉಪಮುಖ್ಯಮಂತ್ರಿಗಿಲ್ಲ.

ಉಪಮುಖ್ಯಮಂತ್ರಿಯೂ ತನ್ನ ಇಲಾಖೆಗೆ ಮಂಜೂರಾಗಿರುವ ಮೊತ್ತಕ್ಕಿಂತ ಹೆಚ್ಚಿನ ವಿನಿಯೋಗಗಳಿಗೆ ಮುಖ್ಯಮಂತ್ರಿಯ ಅನುಮತಿ ಪಡೆದಿರಬೇಕು. ಅಲ್ಲದೆ ಆಡಳಿತದಲ್ಲೂ ಉಪಮುಖ್ಯಮಂತ್ರಿಗಳಿಂದ ಸರಕಾರಕ್ಕೆ ಹೆಚ್ಚಿನ ಅನುಕೂಲಗಳು ಅಥವಾ ಲಾಭಗಳಾಗುವುದಿಲ್ಲ. ಹೀಗಿದ್ದರೂ ಎಲ್ಲರಿಗೂ ಉಪ ಮುಖ್ಯಮಂತ್ರಿ ಹುದ್ದೆ ಬೇಕು. ಆದರೆ ಹೀಗೆ ಜಾತಿಗೊಂದು, ಸಮುದಾಯಕ್ಕೊಂದು, ಊರಿಗೊಂದು ಎಂಬಂತೆ ಉಪ ಮುಖ್ಯಮಂತ್ರಿ ಹುದ್ದೆ ಹಂಚುವುದರಿಂದ ಆ ಹುದ್ದೆಗಿರುವ “ಕಲ್ಪಿತ ಮಹತ್ವ’ವೂ ಕಡಿಮೆಯಾಗುತ್ತದೆ. ಜನರ ದೃಷ್ಟಿಯಲ್ಲಿ ಈ ಹುದ್ದೆ ಲಘುವಾಗುವ ಮೊದಲು ನಾಯಕರು ಎಚ್ಚೆತ್ತುಕೊಳ್ಳುವುದು ಅಗತ್ಯ.

Advertisement

Udayavani is now on Telegram. Click here to join our channel and stay updated with the latest news.

Next