Advertisement

ರಾಷ್ಟ್ರವಿರೋಧಿ ಆಂದೋಲನಗಳಲ್ಲಿ ಪಾಲ್ಗೊಳ್ಳಬೇಡಿ: ವಿದ್ಯಾರ್ಥಿಗಳಿಗೆ ರಾಜ್ಯಪಾಲರ ಕರೆ

09:57 AM Jan 26, 2020 | Team Udayavani |

ಬೆಂಗಳೂರು: ಆಂದೋಲನ ಮಾಡುವುದು ನಮ್ಮ ಹಕ್ಕು. ಆದರೆ ಅದು ರಾಷ್ಟ್ರದ ಹಿತಾಸಕ್ತಿಗೆ ಪೂರಕವಾಗಿರಬೇಕು. ವೈಯಕ್ತಿಕ ಲಾಭಕ್ಕೆ, ರಾಜಕೀಯ ಹಿತಾಸಕ್ತಿಗಾಗಿ ಹೋರಾಟ ಮಾಡಿದರೆ ಅದು ರಾಷ್ಟ ವಿರೋಧಿ ಪ್ರವೃತ್ತಿಯ ಆಂದೋಲನವಾಗುತ್ತದೆ ಎಂದು ರಾಜ್ಯಪಾಲ ವಜುಭಾಯ್‌ ವಾಲಾ ಹೇಳಿದ್ದಾರೆ.

Advertisement

ರಾಜ್ಯ ಚುನಾವಣಾ ಆಯೋಗ ರಾಷ್ಟ್ರೀಯ ಮತದಾರರ ದಿನಾಚರಣೆ ಹಿನ್ನೆಲೆಯಲ್ಲಿ ಶನಿವಾರ ಪುರಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಷ್ಟ್ರ ವಿರೋಧಿ ಆಂದೋಲನಗಳಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳಬಾರದು ಎಂದು ಕರೆ ನೀಡಿದರು.

ರಾಷ್ಟ್ರಪಿತ ಮಹಾತ್ಮಗಾಂಧೀಜಿ ಅವರ ಚಳವಳಿಗಳನ್ನು ಸ್ಮರಿಸಿದ ಅವರು, ಆಂದೋಲನಗಳು ರಾಷ್ಟ್ರವನ್ನು ಸದೃಢ ಗೊಳಿಸುವಂತಿರಬೇಕು. ರಾಷ್ಟ ವಿರೋಧಿ ಪ್ರವೃತ್ತಿಯ ಆಂದೋಲನ ನಡೆಸುವರು ದೇಶದ್ರೋಹಿಗಳು ಎಂದು ಗಾಂಧೀಜಿ ಅವರು ಕೂಡ ಹೇಳಿದ್ದಾರೆ ಎಂದು ತಿಳಿಸಿದರು.

ಮಹಾತ್ಮಾ ಗಾಂಧಿ, ಜವಾಹರಲಾಲ್‌ ನೆಹರು, ಸರ್ದಾರ್‌ ವಲ್ಲಭಭಾಯಿ ಪಟೇಲ್‌, ಮೊರಾರ್ಜಿ ದೇಸಾಯಿ ಅವರು ಇಡೀ ಜೀವನವನ್ನು ರಾಷ್ಟ್ರಕ್ಕಾಗಿ ಮುಡಿಪಾಗಿಟ್ಟಿದ್ದರು.ಅವರಿಂದ ನಾವು ಪ್ರೇರೇಪಿತರಾಗಬೇಕಿದೆ. ಅಗತ್ಯ ಬಿದ್ದಾಗ ದೇಶಕ್ಕಾಗಿ ಪ್ರಾಣ ಕೊಡಲೂ ಸಿದ್ಧರಾಗಬೇಕು.ರಾಷ್ಟ್ರದ ಹಿತಕ್ಕಾಗಿಯೇ ಗಾಂಧೀಜಿ ಅವರು ವಕೀಲ ವೃತ್ತಿ ತೊರೆದು ಹೋರಾಟದ ಅಖಾಡಕ್ಕಿಳಿದರು. ಹೀಗಾಗಿಯೇ ಅವರು ವಿಶ್ವದಾದ್ಯಂತ ಮನೆ ಮಾತಾಗಿದ್ದಾರೆ ಎಂದು ಹೇಳಿದರು..

ರಾಜ್ಯ ಚುನಾವಣಾ ಆಯೋಗದ ಮುಖ್ಯ ಅಧಿಕಾರಿ ಸಂಜೀವ್‌ಕುಮಾರ್‌ ಮಾತನಾಡಿ, ಸದೃಢ ಭಾರತದ ನಿರ್ಮಾಣದಲ್ಲಿ ಮತದಾರರ ಪಾತ್ರ ಹಿರಿಯದಾಗಿದೆ. ಆ ನಿಟ್ಟಿನಲ್ಲಿ ತಾಲೂಕು ಮಟ್ಟದಲ್ಲಿ ಮತದಾರರ ಸಾಕ್ಷರತೆ ದಿನವನ್ನು ಹಮ್ಮಿಕೊಂಡು ಬರಲಾಗಿದೆ. ಮತದಾನದಿಂದ ಯಾರು ಕೂಡ ಹೊರಗುಳಿಯ ಬಾರದ ಎಂಬ ನಿಟ್ಟಿನಲ್ಲಿ ಕೇಂದ್ರ ಚುನಾವಣಾ ಆಯೋಗ ಹಲವು ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದರು.

Advertisement

ಮತದಾನದ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಶಾಲಾ-ಕಾಲೇಜುಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜತೆಗೆ ಮಹಿಳೆಯರನ್ನು ಮತ ಕೇಂದ್ರದತ್ತ ಸೆಳೆಯಲು ಸಖೀ ಕೇಂದ್ರ ಮತ್ತು ಆದಿವಾಸಿ ಮತ್ತು ಬಡಕಟ್ಟು ಜನಾಂಗದವರ ಅನುಕೂಲಕ್ಕಾಗಿ ಮತಗಟ್ಟೆಯನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.

ಇದೇ ವೇಳೆ ಚುನಾವಣೆ ವೇಳೆ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ ಅಧಿಕಾರಿಗಳನ್ನು, ಸಂಘ-ಸಂಸ್ಥೆಗಳನ್ನು, ಶಾಲಾ ಕಾಲೇಜು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಪಾಲಿಕೆ ಆಯುಕ್ತ ಅನಿಲ್‌ಕುಮಾರ್‌ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ನಿರೂಪಕರ ಎಡವಟ್ಟು ಅಧಿಕಾರಿಗೆ ನಿರಾಶೆ
ಮಂಗಳೂರಿನ ಹೆಸ್ಕಾಂನಲ್ಲಿ ಪ್ರಧಾನ ವ್ಯವಸ್ಥಾಪಕರಾಗಿ ಕೆಲಸ ನಿರ್ವಹಿಸುತ್ತಿರುವ ಕೃಷ್ಣಮೂರ್ತಿ ಎಚ್‌.ಕೆ.ಅವರು ಇತ್ತೀಚಿಗೆ ನಡೆದ ಉಪಚುನಾವಣೆ ಯಲ್ಲಿ ಕೆ.ಆರ್‌.ಪೇಟೆ ಕ್ಷೇತ್ರದಲ್ಲಿ ಚುನಾವಣಾಧಿಕಾರಿಯಾಗಿ ಕೆಲಸ ನಿರ್ವಹಿಸಿದ್ದರು. ಅವರ ಕಾರ್ಯ ಮೆಚ್ಚಿ ರಾಜ್ಯ ಚುನಾವಣಾ ಆಯೋಗವು ರಾಜ್ಯಮಟ್ಟದ ಪ್ರಶಸ್ತಿಗೆ ಆಯ್ಕೆ ಮಾಡಿತ್ತು. ರಾಜ್ಯಪಾಲರಿಂದ ಈ ಪ್ರಶಸ್ತಿ ಸ್ವೀಕರಿಸಲೆಂದೇ ಕೃಷ್ಣಮೂರ್ತಿ ಅವರು ಮಂಗಳೂರಿನಿಂದ ಬೆಂಗಳೂರಿಗೆ ಆಗಮಿಸಿದ್ದರು. ಪ್ರಶಸ್ತಿ ಸ್ವೀಕರಿಸುವವರ ಸಾಲಿನಲ್ಲೂ ಆಸೀನರಾಗಿದ್ದರು.ಆದರೆ ನಿರೂಪಕರು ಪ್ರಶಸ್ತಿ ಪಟ್ಟಿಯ ಮಧ್ಯದಲ್ಲಿದ್ದ ಇವರ ಹೆಸರನ್ನು ಮರೆತ ಹಿನ್ನೆಲೆಯಲ್ಲಿ ರಾಜ್ಯಪಾಲರಿಂದ ಪ್ರಶಸ್ತಿ ಪಡೆಯುವ ಸುಯೋಗದಿಂದ ವಂಚಿತರಾದರು.

ಈ ಬಗ್ಗೆ “ಉದಯವಾಣಿ’ಯೊಂದಿಗೆ ಮಾತನಾಡಿದ ಕೃಷ್ಣಮೂರ್ತಿ, ನಿರೂಪಕರ ಸಣ್ಣ ತಪ್ಪಿನಿಂದಾಗಿ ಹೀಗಾಗಿದೆ.ಹಿರಿಯ ಅಧಿಕಾರಿಗಳು ಕೂಡ ಈ ಬಗ್ಗೆ ಬೇಸರ ತೊಡಿಕೊಂಡಿದ್ದಾರೆ. ಮುಂಬರುವ ದಿನಗಳಲ್ಲಿ ಕೇಂದ್ರ ಚುನಾವಣಾ ಆಯುಕ್ತರಿಂದ ಪ್ರಶಸ್ತಿ ನೀಡುವ ಭರವಸೆ ನೀಡಿದ್ದಾರೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next