ಮಂಗಳೂರು: ದಲಿತ ದೌರ್ಜನ್ಯ ಪ್ರಕರಣಗಳನ್ನು ಹಗುರವಾಗಿ ಪರಿಗಣಿಸ ಬಾರದು. ಕೇವಲ ಪರಿಹಾರ ನೀಡುವುದು ಮಾತ್ರ ಇಲಾಖೆಗಳ ಕಾರ್ಯ ಆಗಿರಬಾರದು. ಮುಂದೆ ಅಂಥ ಪ್ರಕರಣಗಳು ನಡೆಯದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದಲಿತ ದೌರ್ಜನ್ಯ ಪ್ರಕರಣಗಳು ದಾಖಲಾದ ಸಂದರ್ಭ ಸ್ಥಳ ಮಹಜರು, ಅಗತ್ಯ ವಿಚಾರಣೆ ನಡೆಸಿ ತತ್‌ಕ್ಷಣ ಜಾತಿ ಪ್ರಮಾಣ ಪತ್ರ ನೀಡುವ ಬಗ್ಗೆಯೂ ತಹಶೀಲ್ದಾರರು, ಸಮಾಜ ಕಲ್ಯಾಣ ಇಲಾಖೆ ಗಮನ ಹರಿಸಬೇಕು. ದೌರ್ಜನ್ಯದ ವಿಚಾರಣೆ ನಡೆಸಿ ಪ್ರಕರಣ ದಾಖಲಿಸುವಾಗ ಆಧಾರ್ ಕಾರ್ಡ್ ನಂಬರ್ ಆಧಾರದಲ್ಲಿ ಪೊಲೀಸ್ ಇಲಾಖೆ ಸಹಿತ ಸಂಬಂಧಪಟ್ಟ ಇಲಾ ಖೆಗೆ ಜಾತಿ ಸರ್ಟಿಫಿಕೆಟ್‌ಗಳನ್ನು ತಹಶೀಲ್ದಾರ್ ಒದಗಿಸಬೇಕು. ಜಾತಿ ಪ್ರಮಾಣ ಪತ್ರ ನೀಡಲು ಸಾಧ್ಯವಾಗದ ಪ್ರಕರಣಗಳನ್ನು ಜಿಲ್ಲಾಡಳಿತದ ಗಮನಕ್ಕೆ ತರಬೇಕು ಎಂದರು.
ಜಿ.ಪಂ. ಸಿಇಒ ಡಾ| ಆನಂದ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್, ಡಿಸಿಪಿ ಅಂಶು ಕುಮಾರ್, ಮನಪಾ ಆಯುಕ್ತ ಆನಂದ್, ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು. ವಿವಿಧ ತಾಲೂಕುಗಳ ತಹಶೀಲ್ದಾರ್ ಹಾಗೂ ಕಾರ್ಯನಿರ್ವಹಣಾಧಿಕಾರಿಗಳು ಆನ್‌ಲೈನ್ ವೀಡಿಯೋ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಭಾಗವಹಿಸಿದರು.
ಜನವರಿಯಿಂದ ಜೂನ್:
43 ದೌರ್ಜನ್ಯ ಪ್ರಕರಣ
2023ರ ಜನವರಿಯಿಂದ ಜೂನ್ ವರೆಗೆ ಮಂಗಳೂರು ಕಮಿಷನರೆಟ್ ಹಾಗೂ ದ.ಕ. ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಒಟ್ಟು 43 ದಲಿತ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. 39 ಪ್ರಕರಣಗಳಲ್ಲಿ ಒಟ್ಟು 26.87 ಲಕ್ಷ ರೂ. ಪರಿಹಾರ ನೀಡಲಾಗಿದೆ.
ಕಮಿಷನರೆಟ್ ವ್ಯಾಪ್ತಿಯ 18 ಪ್ರಕರಣಗಳಲ್ಲಿ 17ಕ್ಕೆ 13.50 ಲಕ್ಷ ರೂ., ಬಂಟ್ವಾಳದ 7 ಪ್ರಕರಣಗಳಲ್ಲಿ 5ಕ್ಕೆ 6.12 ಲಕ್ಷ ರೂ., ಬೆಳ್ತಂಗಡಿಯ 9 ಪ್ರಕರಣಗಳಿಗೆ 3.75 ಲಕ್ಷ ರೂ., ಪುತ್ತೂರಿನ 7 ಪ್ರಕರಣಗಳಲ್ಲಿ 6ಕ್ಕೆ 2.50 ಲಕ್ಷ ರೂ., ಸುಳ್ಯದ 2 ಪ್ರಕರಣಗಳಲ್ಲಿ 1 ಲಕ್ಷ ರೂ. ಪರಿಹಾರ ನೀಡಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಮಾಲತಿ ಮಾಹಿತಿ ನೀಡಿದರು.