ಯಳಂದೂರು: ಜಾತಿ, ಧರ್ಮದ ಆಧಾರದ ಮೇಲೆ ಅಲ್ಪಸಂಖ್ಯಾತರ, ದಲಿತರ, ಹಿಂದುಳಿದ ವರ್ಗಗಳನ್ನು ಗುಲಾಮರಾಗಿ ರೂಪಿಸುವ ಸರ್ಕಾರದ ಪೌರತ್ವ ತಿದ್ದುಪಡಿ ಕಾನೂನಿಗೆ ಯಾವುದೇ ಕಾರಣಕ್ಕೂ ಬೆಂಬಲ ನೀಡಬಾರದು ಎಂದು ಮೈಸೂರು ಉರಿಲಿಂಗ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದರು.
ಪಟ್ಟಣದಲ್ಲಿ ತಾಲೂಕು ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಸೋಮವಾರ ಪೌರತ್ವ ತಿದ್ದುಪಡಿ ಕಾನೂನು ಹಿಂಪಡೆಯುವಂತೆ ಒತ್ತಾಯಿಸಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿ, ನಾವು ಭಾರತೀಯರೆಂಬ ನಂಬಿಕೆ ಇಟ್ಟು ಜಾತಿ, ಧರ್ಮವನ್ನು ಬದಿಗಿಟ್ಟು ಹೋರಾಟ ನಡೆಸುವ ಅವಶ್ಯವಿದೆ.
ಅಂಬೇಡ್ಕರ್ ನೀಡಿದ್ದ ಕರೆಯನ್ನು ಪಾಲಿಸುವ ಅಗತ್ಯ ಹೆಚ್ಚಾಗಿದೆ. ಸರ್ಕಾರ ನಿರುದ್ಯೋಗ, ಬಡತನ, ಆರ್ಥಿಕ ಸಮಸ್ಯೆಗೆ ಪರಿಹಾರ ನೀಡಿಲ್ಲ. ತಮ್ಮ ಸ್ವಾರ್ಥಕ್ಕಾಗಿ ಕಾನೂನು ಜಾರಿಗೆ ತರಲು ಹೊರಟಿದ್ದಾರೆ. ಇದರಿಂದ ಅಪಾಯವಿದೆ. ಮುಂದಿನ ದಿನಗಳಲ್ಲಿ ಪ್ರಜಾಪ್ರಭುತ್ವ ಆಳಿಸುವ ಸಾಧ್ಯತೆ ಹೆಚ್ಚಾಗಿದೆ. ಯಾವುದೇ ಕಾರಣಕ್ಕೂ ಸಿಎಎಗೆ ಬೆಂಬಲ ನೀಡಬಾರದು ಎಂದು ಸಲಹೆ ನೀಡಿದರು.
ಪಾತಾಳಕ್ಕೆ ಆರ್ಥಿಕ ಪರಿಸ್ಥಿತಿ: ಮಾಜಿ ಶಾಸಕ ಎ.ಆರ್. ಕೃಷ್ಣಮೂರ್ತಿ ಮಾತನಾಡಿ, ದೇಶದ ಅಭಿವೃದ್ಧಿಯನ್ನು ಮಾಡದ ಕೇಂದ್ರ ಸರ್ಕಾರ, ಪೌರತ್ವ ತಿದ್ದುಪಡಿ ಕಾನೂನು ಜಾರಿಗೆ ತಂದು ಸಾಮರಸ್ಯ ಕದಡುತ್ತಿದ್ದಾರೆ. ದೇಶದ ಆರ್ಥಿಕ ಪರಿಸ್ಥಿತಿ ಪಾತಾಳಕ್ಕೆ ಇಳಿದಿದೆ. ಇದನ್ನು ಸರಿಪಡಿಸದೇ ಸಾರ್ವಜನಿಕರ ಗಮನವನ್ನು ಬೇರೆಡೆ ಸೆಳೆಯಲು ಇಂತಹ ಕುತಂತ್ರಗಳನ್ನು ದೇಶದಲ್ಲಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಶಿಕ್ಷಣಕ್ಕೆ ಆದ್ಯತೆ ನೀಡಿ: ವಿಚಾರವಾದಿ ಗುರುರಾಜ್ ಮಾತನಾಡಿ, ಮುಸ್ಲಿಂ ಸಮುದಾಯ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ನಮ್ಮ ಸಮಸ್ಯೆಗಳಿಗೆ ಸ್ಪಂದಿಸುವ ಎಲ್ಲರಿಗೂ ಸಹಾಯ ಮಾಡುವ ಮನೋಭಾವವನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮದ ನಂತರ ಅಂಬೇಡ್ಕರ್ ಭವನದಿಂದ ತಹಶೀಲ್ದಾರ್ ಕಚೇರಿಗೆ ಪ್ರತಿಭಟನಾ ರ್ಯಾಲಿ ನಡೆಸಲಾಯಿತು. ಈ ವೇಳೆ ತಹಶೀಲ್ದಾರ್ ಮಹೇಶ್ ಅವರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಜಿಪಂ ಸದಸ್ಯ ಜೆ.ಯೋಗೇಶ್, ಪಪಂ ಸದಸ್ಯರಾದ ಮಹೇಶ್, ವೈ.ಜಿ. ರಂಗನಾಥ, ಮಹಾದೇವ ನಾಯಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ವಿ.ಚಂದ್ರು, ಎಸ್‌ಡಿಪಿಐನ ಅಬ್ರಾರ್ ಅಹಮ್ಮದ್, ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್, ನಯಾಜ್‌ಖಾನ್, ಇರ್ಫಾನ್, ರಿಜ್ವಾನ್, ಶಬ್ಬೀರ್, ದಾವೂದ್, ದಸಂಸ ಮುಖಂಡ ಸಿ.ರಾಜಣ್ಣ, ಕಂದಹಳ್ಳಿ ನಾರಾಯಣ, ಕೆ.ಎಂ. ನಾಗರಾಜು, ಡಿ.ಪರಶಿವಮೂರ್ತಿ, ದೊಡ್ಡಿಂದವಾಡಿ ಸಿದ್ಧರಾಜು, ಮಲ್ಲು ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳ ಸದಸ್ಯರು, ಮುಸ್ಲಿಂ ಮುಖಂಡರು ಹಾಜರಿದ್ದರು.