Advertisement

ಶೈಕ್ಷಣಿಕ ಕ್ಷೇತ್ರದಲ್ಲಿ ರಾಜಕೀಯದ ಹುಳಿ ಹಿಂಡಬೇಡಿ 

03:35 AM Jun 30, 2017 | |

ಬೆಂಗಳೂರು: ಆರೆಸ್ಸೆಸ್‌ ಹಾಗೂ ಎಬಿವಿಪಿ ಕುರಿತು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಹೇಳಿಕೆಯನ್ನು ಖಂಡಿಸಿರುವ ಬಿಜೆಪಿ, ಕೇರಳದ ಕೊಲೆಗಡುಕ ಸಂಸ್ಕೃತಿ ಕರ್ನಾಟಕಕ್ಕೆ ಆಮದು ಆಗುವುದನ್ನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದೆ. ವಿಧಾನಸೌಧದ ಬಿಜೆಪಿ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ರಾಜ್ಯ ವಕ್ತಾರ ಸುರೇಶ್‌ಕುಮಾರ್‌, ವಿದ್ಯಾರ್ಥಿ ಕಾಂಗ್ರೆಸ್‌ ಮತ್ತು ಯುವ ಕಾಂಗ್ರೆಸ್‌ ಪದಾಧಿಕಾರಿಗಳ ಸಭೆಯಲ್ಲಿ ಆರೆಸ್ಸೆಸ್‌ ಹಾಗೂ ಎಬಿವಿಪಿ ಪ್ರೇರಿತ ಕಾಲೇಜುಗಳು ಮತ್ತು ಪ್ರಾಂಶುಪಾಲರ ಪಟ್ಟಿ ಕೊಡಿ, ಅಂತಹವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ವೇಣುಗೋಪಾಲ್‌ ಹೇಳಿರುವುದು ಖಂಡನಾರ್ಹ ಎಂದರು.

Advertisement

ಶೈಕ್ಷಣಿಕ ಕ್ಷೇತ್ರಕ್ಕೆ ರಾಜಕೀಯ ಸಲ್ಲ: ಅದೇ ರೀತಿ ಕೇರಳಕ್ಕೆ ಬಂದು ನೋಡಿ ಅಲ್ಲಿ ನಾವು ಹೇಗೆ ಕೆಲಸ ಮಾಡುತ್ತಿದ್ದೇವೆ ಎಂದು ವೇಣುಗೋಪಾಲ್‌ ಯುವ ಕಾಂಗ್ರೆಸ್‌ ಮತ್ತು ವಿದ್ಯಾರ್ಥಿ ಕಾಂಗ್ರೆಸ್‌ ಪದಾಧಿಕಾರಿಗಳಿಗೆ ಕರೆ ನೀಡಿದ್ದಾರೆ. ಆದರೆ, ಕೇರಳದಲ್ಲಿ ನಡೆಯತ್ತಿರುವ ಹಿಂಸಾಚಾರ, ಶೈಕ್ಷಣಿಕ ಕ್ಷೇತ್ರದಲ್ಲಿ ರಾಜಕೀಯ ಬೆರೆಸುವುದು, ರಾಜಕೀಯ ಪ್ರೇರಿತ 
ಹತ್ಯೆಗಳು, ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಯುತ್ತಿರುವುದು ಇಡೀ ದೇಶಕ್ಕೆ ಗೊತ್ತು. ಅಂತಹ ಕೊಲೆಗಡುಕ ಸಂಸ್ಕೃತಿಯನ್ನು ಕರ್ನಾಟಕಕ್ಕೆ ಆಮದು ಆಗುವುದನ್ನು ಬಿಜೆಪಿ ಸಹಿಸುವುದಿಲ್ಲ. ಕೇರಳದ ಕೊಲೆಗಡುಕ ಸಂಸ್ಕೃತಿಯನ್ನು ಶಾಂತಿಯುತ ನಮ್ಮ ರಾಜ್ಯಕ್ಕೆ ತರಬೇಡಿ ಎಂದು ಸುರೇಶ್‌ಕುಮಾರ್‌ ಅವರು ವೇಣುಗೋಪಾಲ್‌ ಅವರಿಗೆ ಹೇಳಿದ್ದಾರೆ.
1ರಿಂದ ವಿಸ್ತಾರಕ ಯೋಜನೆ: ತಳಮಟ್ಟದಿಂದ ಬಿಜೆಪಿ ಪ್ರಭಾವ ವಿಸ್ತರಿಸುವ ಮತ್ತು ಶಕ್ತಿ ತುಂಬುವ ವಿನೂತನ “ವಿಸ್ತಾರಕ ಯೋಜನೆ’ಗೆ ಜುಲೈ 1ರಿಂದ ಚಾಲನೆ ನೀಡಲಾಗುವುದು. ಈ ಕಾರ್ಯಕ್ರಮದಡಿ ರಾಜ್ಯದ 54,400 ಮತಗಟ್ಟೆಗಳಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿ ಮನೆಗೆ ಭೇಟಿ ಕೊಡಲಿದ್ದಾರೆ. ಉತ್ತರ ಪ್ರದೇಶದಲ್ಲಿ ಜಾರಿಗೆ ತಂದಿದ್ದ ವಿಸ್ತಾರಕ ಯೋಜನೆಯ ಪರಿಣಾಮ ಮತ್ತು ಲಾಭ ಗಮನದಲ್ಲಿಟ್ಟುಕೊಂಡು ದೀನ್‌ದಯಾಳ್‌ ಉಪಾಧ್ಯಾಯ ಅವರ ಜನ್ಮಶತಮಾನ ವರ್ಷದಲ್ಲಿ ರಾಜ್ಯದಲ್ಲಿ ಈ ವಿಶೇಷ ಕಾರ್ಯಕ್ರಮ ನಡೆಸಲಾಗುತ್ತಿದ್ದು, ಜುಲೈ 25ರವರೆಗೆ ವಿಸ್ತಾರಕ ಯೋಜನೆ ನಡೆಯಲಿದೆ ಎಂದು ಸುರೇಶ್‌ ಕುಮಾರ್‌ ತಿಳಿಸಿದರು. ಕೇಂದ್ರ ಸರ್ಕಾರ ಜಾರಿಗೆ ತಂದಿರುವ “ರಿಯಲ್‌
ಎಸ್ಟೇಟ್‌ ಕಾಯ್ದೆ ಜಾರಿಗೆ ತರುವ ವಿಚಾರದಲ್ಲಿ ರಿಯಲ್‌ ಎಸ್ಟೇಟ್‌ ಲಾಬಿಗೆ ರಾಜ್ಯ ಸರ್ಕಾರ ಸಿಲುಕಿದೆ ಎಂದು ಆರೋಪಿಸಿದ ಸುರೇಶ್‌ ಕುಮಾರ್‌, ನಿಯಮಗಳನ್ನು ರೂಪಿಸಿ ಜುಲೈ 10ರೊಳಗೆ ಪೂರ್ಣ ಪ್ರಮಾಣದಲ್ಲಿ ರಾಜ್ಯದಲ್ಲಿ ಜಾರಿಗೆ ತರಬೇಕು. ಇಲ್ಲದಿದ್ದರೆ ವಸತಿ ಸಚಿವರ ವಿರುದ್ಧ ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next