Advertisement

ಕಾಟಾಚಾರಕ್ಕೆ ಭೂಮಿಗೆ ಕಾಳು ಚೆಲ್ಲಬೇಡಿ

04:40 PM May 08, 2017 | |

ಕಲಬುರಗಿ: ನೀವು ಒಕ್ಕಲುತನ ಮಾಡುವ ಭೂಮಿ ಯಾವುದೇ ಇರಲಿ, ಭೂಮಿಯನ್ನು ಒಪ್ಪವಾಗಿ ಸ್ವತ್ಛವಾಗಿಸಿ ತುಂಬು ಮನಸ್ಸಿನಿಂದ ಭೂಮಿ ಕಾಳು ಚೆಲ್ಲಿ. ಕಷ್ಟಪಟ್ಟು ಸಂರಕ್ಷಣೆ ಮಾಡಿ ಉತ್ತಮ ಬೆಳೆ ಪಡೆಯಬಹುದು. ಆದರೆ, ಕಾಟಾಚಾರಕ್ಕೆ ಕಾಳು ಚೆಲ್ಲಿ ಒಕ್ಕಲುತನಕ್ಕೆ ಬೈಯ್ಯಬೇಡಿ ಎಂದು ಕೃಷಿ ವಿಜ್ಞಾನಿ ಡಾ| ಎಸ್‌ .ಎ. ಪಾಟೀಲ ಮನವಿ ಮಾಡಿದರು. 

Advertisement

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ನಗರದ ಕನ್ನಡ ಭವನದಲ್ಲಿ ರವಿವಾರ ಹಮ್ಮಿಕೊಂಡಿದ್ದ ಮನದಾಳದ ಮಾತು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಒಕ್ಕಲುತನದಲ್ಲಿನ ಆಸ್ಥೆ, ಅವಸ್ಥೆ ಮತ್ತು ಏಳು ಬೀಳುಗಳ ಕುರಿತು ಬೆಳೆಕು ಚೆಲ್ಲಿದರು. ಕೃಷಿ ಕೂಡ ಒಂದು ಪರೀಕ್ಷೆ.

ತುಂಬಾ ಕಕ್ಕುಲಾತಿಯಿಂದ ವಿದ್ಯಾರ್ಥಿಗಳು ತದೇಕಚಿತ್ತದಿಂದ ಓದಿ ತಯಾರಾಗುವಂತೆ ರೈತರು ಭೂಮಿ ಹದ ಮಾಡಿ ಚೆನ್ನಾಗಿ ಇಟ್ಟುಕೊಂಡು ಕಾಳು ಬಿತ್ತಬೇಕು. ದಿನಕ್ಕೆ 14-15 ಗಂಟೆ ಹೊಲದಲ್ಲಿ ಕೆಲಸ ಮಾಡಬೇಕು. ಆಗ ಉತ್ತಮ ಬೆಳೆಗೆ ಮೊದಲ ಹೂಡಿಕೆಯಾಗುತ್ತದೆ. ಇಷ್ಟೆಲ್ಲ ಪ್ರಾಮಾಣಿಕವಾಗಿ ಮಾಡಿದವರು ಇದ್ದಾರೆ.

ಆದರೆ, ಮಳೆ ಮತ್ತು ಹವಾಮಾನದ ವೈಪರಿತ್ಯದಿಂದಾಗಿ ಕೊಂಚ ಹಿನ್ನಡೆಯಾಗಿರಬೇಕು ಎಂದು ಹೇಳಿದರು. ಎರಡು ಎಕರೆಯಲ್ಲಿ ಉತ್ತಮ ಬೆಳೆ ಬೆಳೆದು ಲಾಭ ಮಾಡಿಕೊಂಡು ಒಂದು ಕುಟುಂಬವನ್ನು ನಿಭಾಯಿಸಬಹುದು. ರೈತರು ವ್ಯವಹಾರಿಕ ಜ್ಞಾನ ಹೊಂದಬೇಕು. ಆಧುನಿಕ ಕೃಷಿ ಪದ್ಧತಿ ತಿಳಿಯಬೇಕು.

ಹವಾಮಾನಾಧಾರಿತ ಕೃಷಿಗೆ ಒಗ್ಗಬೇಕು. ನೀರು ನಿರ್ವಹಣೆ, ನೀರು ಸಂಗ್ರಹಣೆ ಮತ್ತು ಬಳಕೆ ಕಲಿಯಬೇಕು, ತಿಳಿಯಬೇಕು. ಇದೆಲ್ಲದರ ಜೊತೆ ಮಣ್ಣಿನ ಗುಣ ಅರಿತು ಬೆಳೆ ಬೆಳೆಯಲು ಮುಂದಾಗಬೇಕು.ಇದರಿಂದ ಸಾಕಷ್ಟು ಬೆಳೆ ತೆಗೆಯಲು ಸಾಧ್ಯವಾಗುತ್ತದೆ ಎಂದರು. 

Advertisement

ಭಾವನೆ ಬದಲಾಗಲಿ: ರೈತರಲ್ಲಿನ ಮನೋಭಾವ ಮತ್ತು ಭಾವನೆಗಳು ಬದಲಾಗಬೇಕು. ಕೃಷಿ ನಷ್ಟದ ಬಾಬ್ತು ಎನ್ನುವುದು ಸರಿಯಲ್ಲ. ಇವತ್ತು ಹವಾಮಾನ ವೈಪರಿತ್ಯ, ಬರಗಾಲ ಮತ್ತು ವಿವಿಧ ಹಾನಿಗಳ ಮಧ್ಯದಲ್ಲೂ ಕೆಲವು ರೈತರು ಉತ್ತಮ ಫಸಲನ್ನು ತೆಗೆಯುತ್ತಿಲ್ಲವೇ ? ನಮ್ಮ ತಪ್ಪಿಗೆ ನಾವು ಇತರರನ್ನು ಹೊಣೆ ಮಾಡುವ ಬದಲು ನಾವು ನಡೆಯುತ್ತಿರುವ ದಾರಿ ಹೇಗಿದೆ ಏನನ್ನು ಮಾಡುತ್ತಿದ್ದೇವೆ?

ಏನೆಲ್ಲ ತಪ್ಪುಗಳಿಗೆ ನಾವು ಒಕ್ಕಲುತನವನ್ನು ಬಲಿ ಕೊಟ್ಟಿದ್ಧೇವೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಇದನ್ನು ಬಿಟ್ಟು ನಾವು ನಷ್ಟವಾಗುತ್ತಿದ್ದಂತೆ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗುವುದು ಪರಿಹಾರವಂತೂ ಅಲ್ಲವೇ ಅಲ್ಲ ಎಂದರು. ಕಸಾಪ ಜಿಲ್ಲಾಧ್ಯಕ ವೀರಭದ್ರ ಸಿಂಪಿ ಮಾತನಾಡಿದರು. ಸಿ.ಎಸ್‌. ಮಾಲಿಪಾಟೀಲ ಪ್ರಾರ್ಥಿಸಿದರು. ಡಾ| ವಿಜಯಕುಮಾರ ಪರೂತೆ ನಿರೂಪಿಸಿದರು. ನಾಗಣ್ಣಗೌಡ ಕೂಡಿ ಸ್ವಾಗತಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next