Advertisement

ಮನೋಸ್ಥೈರ್ಯ ಕುಗ್ಗಬಾರದು: ತಜ್ಞರ ಅಭಿಮತ

10:48 AM Apr 16, 2020 | mahesh |

ಬೆಂಗಳೂರು: ಲಾಕ್‌ಡೌನ್‌ ಅವಧಿಯಲ್ಲಿ ರಾಜಧಾನಿಯಲ್ಲಿರುವ ಅಸಂಘಟಿತ ವಲಯದ ಕಾರ್ಮಿಕರ ಮನೋಸ್ಥೈರ್ಯ ಕುಗ್ಗದಂತೆ ತಡೆಯಲು ಅಗತ್ಯವಿರುವ
ಕ್ರಮಗಳನ್ನು ಸರ್ಕಾರ ಕೈಗೊಳ್ಳಬೇಕು. ಹಾಗೆಯೇ ಎಲ್ಲರ ಆರೋಗ್ಯ ತಪಾಸಣೆ ನಡೆಸಿ ಸೋಂಕು ಕಾಣಿಸಿಕೊಳ್ಳದಿದ್ದರೆ ಸುರಕ್ಷಿತವಾಗಿ ಅವರ ಸ್ವಂತ ಊರುಗಳಿಗೆ ಕಳುಹಿಸುವ ವ್ಯವಸ್ಥೆ ಮಾಡುವುದು ಸೂಕ್ತ ಎಂಬ ಅಭಿಪ್ರಾಯ ತಜ್ಞರಿಂದ ವ್ಯಕ್ತವಾಗಿದೆ.

Advertisement

ಅಸಂಘಟಿತ ವಲಯದ ಕಾರ್ಮಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರಿಗೆ ದುಡಿಮೆ ಇಲ್ಲದೆ ಹಣ ಸಿಗುತ್ತಿಲ್ಲ. ಸರಿಯಾಗಿ ಊಟದ ವ್ಯವಸ್ಥೆಯೂ ಆಗುತ್ತಿಲ್ಲ. ಸೂಕ್ತ ವಸತಿ ಕೂಡ ಇಲ್ಲದವರು ತಮ್ಮ ಊರುಗಳಿಗೆ ತೆರಳಲು ಹಂಬಲಿಸಬಹುದು. ವಲಸೆ ಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಿ ಸೋಂಕು ಇಲ್ಲದಿರುವುದು ದೃಢಪಟ್ಟರೆ ಸಾಮಾಜಿಕ ಅಂತರ ಕಾಯ್ದುಕೊಂಡ ಸಾರಿಗೆ ವ್ಯವಸ್ಥೆಯಡಿ ಅವರನ್ನು ಸುರಕ್ಷಿತವಾಗಿ ಸ್ವಂತ ಊರುಗಳಿಗೆ ಕಳುಹಿಸಿಕೊಡುವುದು ಸೂಕ್ತವೆನಿಸಿದೆ. ಅವರು ತಮ್ಮ ಊರಿನಲ್ಲಿ ತಮಗೆ ಗೊತ್ತಿರುವ ಕೆಲಸದಲ್ಲಿ ತೊಡಗಿಸಿಕೊಂಡು ನೆಮ್ಮದಿಯ ಜೀವನ ನಡೆಸಲು ಅನುಕೂಲವಾಗಬಹುದು ಎಂದು “ಸಿವಿಕ್‌’ ಸಂಸ್ಥೆಯ ಕಾರ್ಯನಿರ್ವಾಹಕ ಟ್ರಸ್ಟಿ ಕಾತ್ಯಾಯಿನಿ ಚಾಮರಾಜ್‌ ಅಭಿಪ್ರಾಯಪಡುತ್ತಾರೆ.

ಮಾಸಿಕ ಮನೆ ಬಾಡಿಗೆಗೆ ಮಾಲೀಕರು ಒತ್ತಡ ಹಾಕಬಾರದು ಎಂದು ಸರ್ಕಾರ ಸೂಚಿಸಿದ್ದರೂ ಹಲವೆಡೆ ಕೂಲಿ ಕಾರ್ಮಿಕರು, ಅಸಂಘಟಿತ ಕಾರ್ಮಿಕರಿಗೆ ಬಾಡಿಗೆ ಹಣಕ್ಕಾಗಿ ಒತ್ತಡ ಹೇರಲಾಗುತ್ತಿದೆ. ಬಹಳಷ್ಟು ಕಡೆ ದುಡಿಮೆ ಇಲ್ಲದ ಕಾರಣ ಗುತ್ತಿಗೆದಾರರು ಕೂಲಿ ಕಾರ್ಮಿಕರಿಗೆ ವೇತನ ನೀಡುತ್ತಿಲ್ಲ. ಅಲ್ಲದೇ ನಿಯಮಿತವಾಗಿ ಈ ಕಾರ್ಮಿಕರಿಗೆ ಊಟ ಸಿಗುತ್ತಿಲ್ಲ. ಊಟ, ಹಣ, ವಸತಿ ಸೌಲಭ್ಯವಿಲ್ಲದೆ ಸಂಕಷ್ಟದಲ್ಲಿರುವ ಕಾರ್ಮಿಕರು ತಮ್ಮ ಊರುಗಳಿಗೆ ಹೋಗಲು ಇಚ್ಛಿಸಬಹುದು. ಹಾಗಾಗಿ ಅವರಿಗೆ ಇಲ್ಲೇ ತೊಂದರೆಯಿಲ್ಲದೆ ಕಾಲ ಕಳೆಯುವ ವ್ಯವಸ್ಥೆ ಕಲ್ಪಿಸುವಂತಾಗಬೇಕು ಎನ್ನುತ್ತಾರೆ.

ಆಪ್ತ ಸಮಾಲೋಚನೆ ಅಗತ್ಯ: ನಗರದಲ್ಲಿನ ವಲಸೆ ಕಾರ್ಮಿಕರಿಗೆ ಸದ್ಯದ ಲಾಕ್‌ಡೌನ್‌ ಅವಧಿ ಕಳೆಯುವುದು ಸವಾಲಾಗಿದ್ದರೆ ಮತ್ತೂಂದೆಡೆ ಲಾಕ್‌ಡೌನ್‌ ಮುಗಿದ ನಂತರ ಭವಿಷ್ಯವೇನು ಎಂಬ ಆತಂಕವಿರುತ್ತದೆ. ಅವರ ಜೀವನೋಪಾಯಕ್ಕೆ ಭದ್ರತೆ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿ ಮುಂದುವರಿಯಬೇಕು ಎಂದು ನಿವೃತ್ತ ಐಎಎಸ್‌ ಅಧಕಾರಿ ಮದನ್‌ ಗೋಪಾಲ್‌ ಹೇಳುತ್ತಾರೆ.

ಬೆಂಗಳೂರು ನಗರದಲ್ಲಿ ಬಿಹಾರ, ಒಡಿಶಾ ಸೇರಿದಂತೆ ಇತರೆ ಭಾಗದ ಕಾರ್ಮಿಕರು ನೆಲೆಸಿದ್ದಾರೆ. ಲಾಕ್‌ಡೌನ್‌ ಅವಧಿಯಲ್ಲಿ ಅವರ ಮನೋಸ್ಥೈರ್ಯ ಕುಗ್ಗದಂತೆ
ತಡೆಯಲು ಗಮನ ಹರಿಸಬೇಕು. ಮುಖ್ಯವಾಗಿ ತಮ್ಮ ಕುಟುಂಬದವರೊಂದಿಗೆ ನಿರಂತರವಾಗಿ ಆಡಿಯೋ, ವಿಡಿಯೋ ಸಂವಾದದ ಮೂಲಕ ಮಾತುಕತೆ ನಡೆಸುವ ವ್ಯವಸ್ಥೆ ಕಲ್ಪಿಸಬೇಕು. ನಗರದಲ್ಲಿರುವ ಆ ರಾಜ್ಯಗಳ ಸಂಘ- ಸಂಸ್ಥೆಗಳೊಂದಿಗೆ ಸಂಪರ್ಕಿಸಿ ವ್ಯವಹರಿಸಲು ಅವಕಾಶ ನೀಡಬೇಕು. ಇದರಿಂದ ವಲಸೆ ಕಾರ್ಮಿಕರಿಗೂ ಒಂದಿಷ್ಟು ನೆರವಾಗಲಿದೆ ಎಂದು ಅಭಿಪ್ರಾಯಪಡುತ್ತಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next