Advertisement

ಹಾಸ್ಟೆಲ್‌ ಮಕ್ಕಳನ್ನು ಊರಿಗೆ ಕಳುಹಿಸಬೇಡಿ: ಎಸಿ

11:10 PM Mar 18, 2020 | mahesh |

ಪುತ್ತೂರು: ಸರಕಾರಿ ವಸತಿ ನಿಲಯಗಳಲ್ಲಿರುವ ಬೇರೆ ಜಿಲ್ಲೆಗಳ ಎಸೆಸೆಲ್ಸಿ ಹಾಗೂ ಪಿಯುಸಿ ಮಕ್ಕಳನ್ನು ಅವರ ಊರಿಗೆ ಕಳುಹಿಸುವುದು ಬೇಡ ಎಂದು ಪುತ್ತೂರು ಸಹಾಯಕ ಆಯುಕ್ತ ಡಾ| ಯತೀಶ್‌ ಉಳ್ಳಾಲ್‌ ಇಲಾಖಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Advertisement

ಬುಧವಾರ ಪುತ್ತೂರು ಮಿನಿ ವಿಧಾನಸೌಧದ ಸಹಾಯಕ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಆರೋಗ್ಯ ಇಲಾಖೆ ವತಿಯಿಂದ ಆಯೋಜಿಸಿದ್ದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಎಸೆಸೆಲ್ಸಿ ಮತ್ತು ಪಿಯುಸಿ ತರಗತಿಗಳ ಪರೀಕ್ಷೆ ಇನ್ನಷ್ಟೇ ನಡೆಯಬೇಕಾಗಿದೆ. ಉತ್ತರ ಕರ್ನಾಟಕ ಭಾಗದ ಹೆಚ್ಚು ಮಕ್ಕಳು ವಸತಿ ನಿಲಯಗಳಲ್ಲಿದ್ದಾರೆ. ಅವರ ಹೆತ್ತವರು ಮಕ್ಕಳನ್ನು ಕರೆದೊಯ್ಯಲು ಒತ್ತಡ ತರುತ್ತಿದ್ದಾರೆ ಎಂದು ಅಧಿಕಾರಿ ಸಭೆಗೆ ಮಾಹಿತಿ ನೀಡಿದರು. ಯಾವುದೇ ಕಾರಣಕ್ಕೂ ಮಕ್ಕಳನ್ನು ಕಳುಹಿಸುವುದು ಬೇಡ. ಪರೀಕ್ಷೆ ಮುಗಿಯುವ ತನಕ ಅವರು ಇರಲಿ. ಉತ್ತರ ಕರ್ನಾಟಕ ಭಾಗಕ್ಕಿಂತ ದಕ್ಷಿಣ ಕನ್ನಡ ಜಿಲ್ಲೆಯೇ ಅವರಿಗೆ ಹೆಚ್ಚು ಸುರಕ್ಷಿತ ಎಂದು ಎಸಿ ತಿಳಿಸಿದರು.

“ವದಂತಿ’ ಬೇಡ
ಅಧಿಕಾರಿಗಳು ಕೊರೊನಾ ವಿಚಾರಕ್ಕೆ ಸಂಬಂಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ಬರುವ ವದಂತಿಗಳಿಗೆ ಕಿವಿ ಕೊಡಬೇಡಿ. ಸದಾ ಜಾಗೃತರಾಗಿರಿ. ಸತ್ಯ ವಿಚಾರಗಳನ್ನು ಹುಡುಕಿ. ಎಲ್ಲರೂ ಒಗ್ಗಟ್ಟಾಗಿ ಕೊರೊನಾ ಸಮಸ್ಯೆಯನ್ನು ಎದುರಿಸೋಣ ಎಂದು ಧೈರ್ಯ ತುಂಬಿದ ಸಹಾಯಕ ಆಯುಕ್ತರು, ಪ್ರತಿ ಇಲಾಖೆ ಕಚೇರಿಯಲ್ಲಿಯೂ ವೈಯುಕ್ತಿಕ ಸ್ವತ್ಛತೆಗೆ ಹೆಚ್ಚು ಆದ್ಯತೆ ನೀಡಬೇಕು ಎಂದರು.

ಜಾಗ್ರತೆ ವಹಿಸಿ
ಪುತ್ತೂರು ಭಾಗದಲ್ಲಿರುವ ಕಟ್ಟಡ ಕಾರ್ಮಿಕರ ಬಗ್ಗೆ ಎಚ್ಚರಿಕೆ ವಹಿಸಬೇಕು. ಆದಷ್ಟೂ ಸ್ಥಳೀಯವಾಗಿ ಕೆಲಸ ಮಾಡಲು ಅವರ ಮನವೊಲಿಸಿ. ದೂರದ ಊರುಗಳಲ್ಲಿರುವ ಕೆಲಸಗಳನ್ನು ತಾತ್ಕಾಲಿ ಕವಾಗಿ ಮುಂದೂಡುವಂತೆ ಅವರಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.

ಕೆಎಸ್ಸಾರ್ಟಿಸಿ ನಿರ್ವಾಹಕ -ಚಾಲಕರ ಕುರಿತೂ ಇಲಾಖೆ ಜಾಗರೂಕತೆ ವಹಿಸಬೇಕು. ಎಲ್ಲ ನಿರ್ವಾಹಕರಿಗೂ ಮಾಸ್ಕ್ ವ್ಯವಸ್ಥೆ ಮಾಡಬೇಕು. ವೈಯಕ್ತಿಕ ಸ್ವತ್ಛತೆಗೆ ಹೆಚ್ಚಿನ ಗಮನ ಹರಿಸುವಂತೆ ಮಾಹಿತಿ ನೀಡಿ ಎಂದರು.

Advertisement

ತಾಲೂಕು ಆರೋಗ್ಯಾಧಿಕಾರಿ ಡಾ| ಅಶೋಕ್‌ ಕುಮಾರ್‌ ರೈ ಮಾತನಾಡಿ, ಕೊರೊನಾ ವಿಚಾರವಾಗಿ ತಾಲೂಕು ಮಟ್ಟದ ಅಧಿಕಾರಿಗಳ ಗಮನಕ್ಕೆ ಯಾವುದೇ ಮಾಹಿತಿ ದೊರೆತರೂ
ತತ್‌ಕ್ಷಣ ಇಲಾಖೆಗೆ ತಿಳಿಸಬೇಕು. ಗೊಂದಲ ಉಂಟಾಗುವುದನ್ನು ತಪ್ಪಿಸಲು ಇದರಿಂದ ಸಾಧ್ಯವಾಗುತ್ತದೆ ಎಂದರು.

ಪುತ್ತೂರು ತಹಶೀಲ್ದಾರ್‌ ರಮೇಶ್‌ ಬಾಬು, ಕಡಬ ತಹಶೀಲ್ದಾರ್‌ ಜಾನ್‌ಪ್ರಕಾಶ್‌, ತಾ.ಪಂ. ಇಒ ನವೀನ್‌ ಭಂಡಾರಿ, ತಾಲೂಕು ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ| ಆಶಾ ಪುತ್ತೂರಾಯ, ಸಿಡಿಪಿಒ ಶ್ರೀಲತಾ, ಡಾ| ಪ್ರದೀಪ್‌, ಶಾಲಾ ಪರಿವೀಕ್ಷಣಾಧಿಕಾರಿ ಸುಂದರ ಗೌಡ, ನಗರಸಭೆ ಆರೋಗ್ಯ ನಿರೀಕ್ಷಕರಾದ ರಾಮಚಂದ್ರ, ಶ್ವೇತಾ ಕಿರಣ್‌ ಭಾಗವಹಿಸಿದ್ದರು. ತಾಲೂಕು ಆರೋಗ್ಯ ಇಲಾಖೆಯ ಆರೋಗ್ಯ ಶಿಕ್ಷಣಾಧಿಕಾರಿ ಪದ್ಮಾವತಿ ಸ್ವಾಗತಿಸಿ, ವಂದಿಸಿದರು.

ಸಂತೆ ರದ್ದು ವಿಚಾರ
ಸೋಮವಾರದ ಸಂತೆಯನ್ನು ಪುತ್ತೂರು ಎಪಿಎಂಸಿ ಪ್ರಾಂಗಣದಲ್ಲಿ ಮಾಡಲು ಸೂಚಿಸಲಾಗಿತ್ತು. ಆದರೆ ಸಂತೆಯನ್ನು ರದ್ದು ಮಾಡಲಾಗಿದೆ. ಮುಕ್ರಂಪಾಡಿ ಭಾಗದಲ್ಲಿ ರಸ್ತೆ ಬದಿಯಲ್ಲೇ ಸಂತೆ ವ್ಯಾಪಾರಕ್ಕೆ ಅವಕಾಶ ನೀಡಿದ್ದೀರಿ. ಉಪ ವಿಭಾಗಾಧಿಕಾರಿ ನೀಡಿದ ಸೂಚನೆಯನ್ನು “ರಾಜಕೀಯ’ಗೊಳಿಸುವ ವ್ಯಕ್ತಿಗಳು ಯಾರೆಂದು ತಿಳಿಸಿ ಅವರ ಮೇಲೆ ಕ್ರಮ ಕೈಗೊಳ್ಳುತ್ತೇನೆ ಎಂದು ನಗರಸಭೆ ಅಧಿಕಾರಿಗಳಿಗೆ “ಗರಂ’ ಆಗಿಯೇ ಎಚ್ಚರಿಕೆ ನೀಡಿದರು.

ಕುಬಲಾಡಿ: ನೇಮ ಮುಂದೂಡಿಕೆ
ಕಡಬ: ನೂಜಿಬಾಳ್ತಿಲ ಗ್ರಾಮದ ಕುಬಲಾಡಿ ಪಂಜಲದಲ್ಲಿ ಮಾ. 21ರಂದು ನಡೆಸಲು ಉದ್ದೇಶಿಸಲಾಗಿದ್ದ ಶ್ರೀ ಆದಿ ನಾಗಬ್ರಹ್ಮ ಗಡಿ ಮೊಗೇರ್ಕಳ ನೇಮವನ್ನು ಮುಂದೂಡಲಾಗಿದೆ. ಮುಂದಿನ ದಿನಾಂಕವನ್ನು ತಿಳಿಸಲಾಗುವುದು ಎಂದು ಕಡಬ ಮುಗೇರ ಯುವ ವೇದಿಕೆಯ ಅಧ್ಯಕ್ಷ ವಸಂತ ಕುಬಲಾಡಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next