ಮಂಡ್ಯ: ಬರಗಾಲದ ಸಮಯದಲ್ಲಿ ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಲು ಅಧಿಕಾರಿಗಳು ಸನ್ನದ್ಧರಾಗಿರಬೇಕು. ನೆಪ ಹೇಳದೆ, ಕಚೇರಿಯಲ್ಲಿ ಕುಳಿತು ಕೆಲಸ ಮಾಡದೆ ಸಮಸ್ಯಾತ್ಮಕ ಗ್ರಾಮಗಳಿಗೆ ಭೇಟಿ ನೀಡಿ ಪರಿಹಾರಕ್ಕೆ ತ್ವರಿತ ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಾಜು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಗ್ರಾಮಗಳನ್ನು ಗುರುತಿಸಿ: ನೀರಿನ ಸಮಸ್ಯೆ ಉಲ್ಬಣವಾಗದಂತೆ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಇರುವ ಗ್ರಾಮಗಳನ್ನು ಗುರುತಿಸಿ ಅಂತಹ ಗ್ರಾಮಗಳಿಗೆ ಪರ್ಯಾಯ ವ್ಯವಸ್ಥೆ ಮೂಲಕ ಕುಡಿಯುವ ನೀರು ಸರಬರಾಜಿಗೆ ಮುನ್ನೆಚ್ಚರಿಕೆ ವಹಿಸಬೇಕು. ಈ ವಿಷಯವಾಗಿ ಜಿಲ್ಲಾಧಿಕಾರಿಗಳು ನೀಡುವ ಸಲಹೆ-ಸೂಚನೆ ಕಟ್ಟುನಿಟ್ಟಾಗಿ ಪಾಲಿಸಬೇಕು. ಸಮಸ್ಯೆಗಳಿಗೆ ನಿಮ್ಮ ಹಂತದಲ್ಲೇ ಪರಿಹಾರ ಕಂಡುಕೊಳ್ಳಬೇಕು. ನೀರಿನ ಸಮಸ್ಯೆ ಎದುರಾಗದಂತೆ ಎಚ್ಚರ ವಹಿಸಲು ಪಿಡಿಒಗಳಿಗೆ ಸೂಚನೆ ಕೊಡಿ ಎಂದರು.
ಹಣದ ಕೊರತೆ ಇಲ್ಲ: ಬರ ಪರಿಹಾರ ಕಾಮಗಾರಿಗಳ ಅನುಷ್ಠಾನಕ್ಕಾಗಿ ಹಣಕ್ಕೆ ಯಾವುದೇ ಕೊರತೆಯಿಲ್ಲ. ಆದರೂ, ಗ್ರಾಮೀಣ ಕುಡಿಯುವ ನೀರು ಸರಬರಾಜು ವ್ಯವಸ್ಥೆ ಉತ್ತಮವಾಗಿಲ್ಲ. ನೀರಿನ ಸಮಸ್ಯೆ ಪರಿಹಾರಕ್ಕೂ ಜನರು ಅಧಿಕಾರಿಗಳನ್ನು ಗೋಗರೆಯುವ ಪರಿಸ್ಥಿತಿ ಸೃಷ್ಟಿಯಾಗಿದೆ. ಹಣದ ಕೊರತೆ ಇಲ್ಲದಿದ್ದರೂ ಕಾಮಗಾರಿಗಳ ಅನುಷ್ಠಾನದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯವೇಕೆ ಎಂದು ಜಿಪಂ ಪ್ರಭಾರ ಸಿಇಒ ಪ್ರಕಾಶ್ ಅವರನ್ನು ಪ್ರಶ್ನಿಸಿದರು.
ನೀತಿ ಸಂಹಿತೆ ಅಡ್ಡಿಯಿಲ್ಲ: ಲೋಕಸಭೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಬರ ಪರಿಹಾರ ಕಾಮಗಾರಿಗಳ ಅನುಷ್ಠಾನಕ್ಕಾಗಿ ಚುನಾವಣಾ ಆಯೋಗ ವಿಶೇಷ ಅನುಮತಿ ನೀಡಿದೆ. ಕಾಮಗಾರಿಗಳು ಸುಸೂತ್ರವಾಗಿ ನಡೆಯಲು ರಿಯಾಯಿತಿ ನೀಡಿದೆ. ಹೀಗಾಗಿ ಪ್ರತಿ ಜಿಲ್ಲೆಯಲ್ಲೂ ಆಯಾಯ ಜಿಲ್ಲಾ ಉಸ್ತುವಾರಿ ಸಚಿವರು ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ನಡೆಸಲು ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಇಂದಿನ ಸಭೆ ನಡೆಸಲಾಗುತ್ತಿದೆ. ಅಧಿಕಾರಿಗಳು ಯಾವುದೇ ನೆಪ ಹೇಳದೆ ಬರ ಪರಿಹಾರ ಕಾಮಗಾರಿಗಳ ಅನುಷ್ಠಾನಕ್ಕೆ ಮುಂದಾಗಿ ಎಂದರು.
Advertisement
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬರ ಪರಿಸ್ಥಿತಿ ನಿರ್ವಹಣೆ ಸಂಬಂಧ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಬೇಸಿಗೆ ಮುಗಿಯುವವರೆಗೂ ಕುಡಿಯುವ ನೀರಿಗೆ ತೊಂದರೆಯಾಗದಂತೆ ಕ್ರಮ ವಹಿಸಬೇಕು. ಕುಡಿಯುವ ನೀರು ಸರಬರಾಜಿಗೆ ವಿದ್ಯುತ್ ಅಡಚಣೆಯ ನೆಪ ಹೇಳಬಾರದು. ಏನೇ ಸಮಸ್ಯೆಗಳಿದ್ದರೂ ಮೊದಲೇ ಪರಿಹರಿಸಿಕೊಂಡು ಜನಸಾಮಾನ್ಯರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವಂತೆ ತಿಳಿಸಿದರು.
Related Articles
Advertisement
ನೀತಿ ಸಂಹಿತೆ ಮುಗಿದ ಬಳಿಕ ಮತ್ತೆ ಸಭೆ: ಚುನಾವಣಾ ನೀತಿ ಸಂಹಿತೆ ಮುಗಿದ ಬಳಿಕ ಜಿಲ್ಲೆಯ ಎಲ್ಲ ಶಾಸಕರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತೇನೆ. ಬರ ಪರಿಹಾರ ಕಾಮಗಾರಿಗಳ ಅನುಷ್ಠಾನ ಕುರಿತು ಎರಡನೇ ಹಂತದ ಪ್ರಗತಿ ಪರಿಶೀಲನಾ ಸಭೆ ನಡೆಸಲಾಗುವುದು. ನೀತಿ ಸಂಹಿತೆ ಮುಗಿದ ಮರು ದಿನವೇ ಜಲಧಾರೆ ಯೋಜನೆಗಳಿಗೆ ಟೆಂಡರ್ ಕರೆಯಲಾಗುವುದು. ಆ ನಿಟ್ಟಿನಲ್ಲಿ ಅಧಿಕಾರಿಗಳಾದ ನಿಮ್ಮಗಳ ಜವಾಬ್ದಾರಿ ಮುಖ್ಯ. ಎಲ್ಲರೂ ಸಮರ್ಥವಾಗಿ ಕಾರ್ಯ ನಿರ್ವಹಿಸಿ. ಏನೇ ಸಮಸ್ಯೆ ಎದುರಾದರೂ ಜಿಲ್ಲಾಧಿಕಾರಿ ಗಮನಕ್ಕೆ ತನ್ನಿ ಎಂದು ಸಲಹೆ ನೀಡಿದರು.
ಟ್ಯಾಂಕರ್ ನೀರು ಪೂರೈಕೆ: ಜಿಲ್ಲೆಯಲ್ಲಿ ಸದ್ಯಕ್ಕೆ 65 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಹಾಗೂ 23 ಗ್ರಾಮಗಳಿಗೆ ಖಾಸಗಿ ಬೋರ್‌ವೆಲ್ಗಳ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದೆ. ಇದರಲ್ಲಿ ನಾಗಮಂಗಲ ತಾಲೂಕಿನ 62 ಹಳ್ಳಿಗಳಿಗೆ ಟ್ಯಾಂಕರ್‌ನಲ್ಲಿ ನೀರು ಕೊಡಲಾಗುತ್ತಿದೆ ಎಂದು ಜಿ.ಪಂ. ಗ್ರಾಮೀಣ ಕುಡಿಯುವ ನೀರು ಸರಬರಾಜು ವಿಭಾಗದ ಕಾರ್ಯಪಾಲಕ ಎಂಜಿನಿಯರ್ ರಾಮಕೃಷ್ಣ ತಿಳಿಸಿದರು.
ಗುಜ್ಜುಗೋನಹಳ್ಳಿಗೆ ನೀರು ಕೊಡಿ: ಪಾಂಡವಪುರ ತಾಲೂಕಿನಲ್ಲಿ ಯಾವ ಹಳ್ಳಿಗೆ ಟ್ಯಾಂಕರ್ ನೀರು ಕೊಡುತ್ತಿದ್ದೀರೆಂಬ ಪ್ರಶ್ನೆಗೆ ರಾಮಕೃಷ್ಣ ಗುಜ್ಜುಗೋನಹಳ್ಳಿ ಎಂದು ತಿಳಿಸಿದಾಗ, ಆ ಗ್ರಾಮವನ್ನು ಮೇಲುಕೋಟೆ ಮತ್ತು ಇತರ ಹಳ್ಳಿಗಳಿಗೆ ತೊಣ್ಣೂರು ಕೆರೆಯಿಂದ ನೀರು ಪೂರೈಸುವ ಯೋಜನೆಯಡಿ ಸೇರಿಸಲಾಗಿದೆ ಯೆಲ್ಲಾ ಎಂದು ಸಚಿವರು ಪ್ರಶ್ನಿಸಿದರು. ತಾಂತ್ರಿಕ ಕಾರಣದಿಂದ ಆ ಗ್ರಾಮ ಕೈಬಿಟ್ಟಿದೆ ಎಂದು ರಾಮಕೃಷ್ಣ ಉತ್ತರಿಸಿದಾಗ, ಮೊದಲು ಯೋಜನೆಯಡಿ ಗುಜ್ಜುಗೋನಹಳ್ಳಿ ಯನ್ನೂ ಸೇರಿಸಿ. ಪೈಪ್‌ಲೈನ್ ಮೂಲಕವೇ ಆ ಗ್ರಾಮಕ್ಕೆ ನೀರು ಕೊಡಿ ಎಂದರು.
ಜಾನುವಾರುಗಳಿಗೆ 32 ವಾರಗಳಿಗೆ ಸಾಕಾಗುವಷ್ಟು ಮೇವಿನ ಲಭ್ಯವಿದೆ. ಮಳೆಯಿಂದ ಮನೆ ಹಾನಿ ಹಾಗೂ ಬೆಳೆ ಹಾನಿ ಸಂಬಂಧಿಸಿದಂತೆ ಸರ್ಕಾರದ ನಿಯಮದಂತೆ ಒಂದು ಪರಿಹಾರ ನೀಡಲು ಅಗತ್ಯ ಕ್ರಮವಹಿಸಬೇಕು ಎಂದರು.
ಪ್ರತಿವಾರ ಸಭೆ ನಡೆಸಿ: ಅಧಿಕಾರಿಗಳು ಪ್ರತಿವಾರ ತಮ್ಮ ಹಂತದಲ್ಲೇ ಸಭೆ ನಡೆಸಿ, ಬರ ಪರಿಹಾರ ಕಾಮಗಾರಿಗಳನ್ನು ಅನುಷ್ಠಾನಗೊಳಿಸಬೇಕು. 14ನೇ ಹಣಕಾಸು ಯೋಜನೆ ಮೂಲಕ ಕಾಮಗಾರಿ ಕೈಗೆತ್ತಿಕೊಳ್ಳಬೇಕು. ಅಗತ್ಯವಿರುವೆಡೆ ಹೊಸದಾಗಿ ಬೋರ್‌ವೆಲ್ ಕೊರೆಸಬೇಕು ಎಂದು ಜಿಲ್ಲಾಧಿಕಾರಿ ಜಾಫರ್ ಹೇಳಿದರು.
ಬೋರ್‌ವೆಲ್ ರೀಡ್ರಿಲ್ಲಿಂಗ್ ಮತ್ತು ದುರಸ್ತಿ ಕೆಲಸಗಳನ್ನು ಕೈಗೆತ್ತಿಕೊಳ್ಳಬೇಕು. 40 ಎಲ್ಪಿಸಿಡಿ ಪ್ರಕಾರ ನೀರು ಪೂರೈಕೆಗೆ ಕ್ರಮ ವಹಿಸಬೇಕು. ಮುಂದಿನ ವರ್ಷದಲ್ಲಿ ನೀರು ಸಮಸ್ಯೆ ಎದುರಾಗದಂತೆ ಹಲವು ಮುನ್ನೆಚ್ಚರಿಕಾ ಯೋಜನೆಗಳನ್ನು ರೂಪಿಸಿಟ್ಟುಕೊಳ್ಳಬೇಕು. ನೀತಿ ಸಂಹಿತೆ ಮುಗಿದ ಬಳಿಕ ಶಾಶ್ವತ ಕಾಮಗಾರಿಗಳ ಅನುಷ್ಠಾನಕ್ಕೆ ಕ್ರಮ ವಹಿಸಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ಜಿಪಂ ಉಪ ಕಾರ್ಯದರ್ಶಿ ಪ್ರಕಾಶ್, ಮಂಡ್ಯ ಉಪ ವಿಭಾಗಾಧಿಕಾರಿ ರಾಜೇಶ್, ಪಾಂಡವಪುರ ಉಪ ವಿಭಾಗಾಧಿಕಾರಿ ಶೈಲಜಾ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ನಮ್ಮ ತೋಟದ ಮನೆಗೂ ಹಾನಿ, ಪರಿಹಾರ ಕೊಡಿ:
‘ಬಿರುಗಾಳಿ ಮಳೆಯಿಂದ ನಮ್ಮ ತೋಟದ ಮನೆಯ ಮೇಲ್ಛಾವಣಿ, ಬಾಳೆ ಬೆಳೆಯೂ ಹಾನಿಯಾಗಿದೆ. ಈ ಬಗ್ಗೆ ಸ್ಥಳ ಪರಿಶೀಲನೆ ನಡೆಸಿದ್ದೀರಾ? ನಮಗೂ ಪರಿಹಾರ ಕೊಡಿ’ ಎಂದು ಸಚಿವ ಪುಟ್ಟರಾಜು ಹಾಸ್ಯ ಚಟಾಕಿ ಹಾರಿಸಿದರು. ಬಿರುಗಾಳಿ ಮಳೆಯಿಂದಾಗಿ ಪಾಂಡವಪುರ ಉಪ ವಿಭಾಗ ವ್ಯಾಪ್ತಿಯಲ್ಲಿ 156 ಮನೆಗಳಿಗೆ ಹಾನಿಯಾಗಿದ್ದು, ಈವರೆಗೆ 32 ಮನೆಗಳಿಗೆ 1.45 ಲಕ್ಷ ರೂ.ಪರಿಹಾರ ಕೊಡಲಾಗಿದೆ ಎಂದು ಪಾಂಡವಪುರ ಉಪ ವಿಭಾಗಾಧಿಕಾರಿ ಶೈಲಜಾ ತಿಳಿಸಿದರೆ, ಮಂಡ್ಯ ಉಪ ವಿಭಾಗದಲ್ಲಿ 145 ಮನೆಗಳಿಗೆ ಹಾನಿಯಾಗಿದೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ನೀಡಿರುವ ಸಮೀಕ್ಷಾ ವರದಿ ಆಧರಿಸಿ ಪರಿಹಾರ ನೀಡುವುದಾಗಿ ಮಂಡ್ಯ ಉಪ ವಿಭಾಗಾಧಿಕಾರಿ ಎಂ.ಆರ್.ರಾಜೇಶ್ ತಿಳಿಸಿದರು. ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡ ಬಳಿಕ ಸಚಿವ ಪುಟ್ಟರಾಜು ಮಾತನಾಡಿ, ಬಿರುಗಾಳಿ ಮಳೆಯಿಂದ ಮನೆಗಳಿಗೆ ಹಾನಿಯಾಗಿ ಲಕ್ಷಾಂತರ ರೂ. ನಷ್ಟವಾಗಿದೆ. ಸಂತ್ರಸ್ತರಿಗೆ 500ರಿಂದ 1000 ರೂ. ಕೊಟ್ಟರೆ ಏನು ಪ್ರಯೋಜನ? ವೈಜ್ಞಾನಿಕ ಪರಿಹಾರ ಕೊಡಿ. ಹೆಚ್ಚಿನ ಪ್ರಮಾಣದ ಹಾನಿಗೊಳ ಗಾಗಿರುವ ಮನೆಗಳನ್ನು ವಿಶೇಷ ಪ್ರಕರಣಗಳೆಂದು ಪರಿಗಣಿಸಿ ಹೆಚ್ಚುವರಿ ಪರಿಹಾರಕ್ಕಾಗಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸಲಹೆ ನೀಡಿದರು.