Advertisement

ಮೂಡೀಸ್‌ ಮೆಚ್ಚುಗೆಗೆ ಮರುಳಾಗದಿರಿ: ಸಿಂಗ್‌

06:00 AM Nov 19, 2017 | Team Udayavani |

ಕೊಚ್ಚಿ: ಅಂತಾರಾಷ್ಟ್ರೀಯ ಆರ್ಥಿಕ ರೇಟಿಂಗ್‌ ಸಂಸ್ಥೆ ಮೂಡೀಸ್‌ ಭಾರತದ ಆರ್ಥಿಕ ಶ್ರೇಣಿಯನ್ನು ಹೆಚ್ಚಿಸಿದ್ದರಿಂದ ನರೇಂದ್ರ ಮೋದಿ ಸರಕಾರ ಅತಿಯಾದ ವಿಶ್ವಾಸ ಹೊಂದಬಾರದು. ಆರ್ಥಿಕತೆ ಚಿಂತಾಜನಕ ಸ್ಥಿತಿಯಿಂದ ಇನ್ನೂ ಹೊರಬಂದಿಲ್ಲ ಎಂದು ಮಾಜಿ ಪ್ರಧಾನಿ ಮನಮೋಹನ ಸಿಂಗ್‌ ಹೇಳಿದ್ದಾರೆ.

Advertisement

ನೋಟು ಅಮಾನ್ಯ ಹಾಗೂ ಜಿಎಸ್‌ಟಿ ಜಾರಿಯಂಥ ಕ್ರಮಗಳು ಆರ್ಥಿಕತೆಗೆ ಪ್ರೋತ್ಸಾಹ ನೀಡಲಿವೆ ಎಂದು ಮೂಡೀಸ್‌ ಹೇಳಿದ್ದಲ್ಲದೆ, ಧನಾತ್ಮಕ ಸ್ಥಿತಿಯಿಂದ ಸುಸ್ಥಿರ ಸ್ಥಿತಿಗೆ ಆರ್ಥಿಕ ಮುನ್ನೋಟವನ್ನು ಏರಿಕೆ ಮಾಡಿತ್ತು. ಶನಿವಾರ ಕೇರಳದ ಎರ್ನಾಕುಲಂನಲ್ಲಿ ಸೇಂಟ್‌ ಥೆರೆಸಾ ಕಾಲೇಜಿನಲ್ಲಿ “ಭಾರತದಲ್ಲಿ ಸೂಕ್ಷ್ಮ ಆರ್ಥಿಕತೆಯ ಅಭಿವೃದ್ಧಿ’ ವಿಚಾರ ಸಂಕಿರಣದಲ್ಲಿ ಮಾತನಾಡಿದ ಸಿಂಗ್‌, ಮೂಡೀಸ್‌ ಏನು ಮಾಡಬೇಕಿತ್ತೋ ಅದನ್ನು ಮಾಡಿದೆ. ಆದರೆ ನಾವು ಆರ್ಥಿಕ ದುಃಸ್ಥಿತಿಯಿಂದ ಹೊರಬಂದಿದ್ದೇವೆ ಎಂಬ ಭ್ರಮೆಯಲ್ಲಿ ಇರಬಾರದು. ಸರಕಾರ ಹೇಳುವಂತೆ ಶೇ.8 ರಿಂದ 10ರ ದರ ದಲ್ಲಿ ಆರ್ಥಿಕ ಪ್ರಗತಿ ಕಾಣಲು ಸದ್ಯದ ಸನ್ನಿವೇಶದಲ್ಲಿ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ. ಕಚ್ಚಾ ತೈಲದ ಬೆಲೆ ಏರಿಕೆಯಾ ಗುತ್ತಿರುವುದೂ ಆರ್ಥಿಕ ಪ್ರಗತಿಯ ಮೇಲೆ ಗಂಭೀರ ಪರಿ ಣಾಮ ಬೀರಲಿದೆ. ಕೆಲವು ತಿಂಗಳ ಹಿಂದೆ ಬ್ಯಾರೆಲ್‌ಗೆ 40- 45 ಡಾಲರ್‌ ಇದ್ದ ತೈಲ ಬೆಲೆ ಈಗ 62-64 ಡಾಲರ್‌ ಆಗಿದೆ. ಇದು ವಿದೇಶಿ ಪಾವತಿಗೆ ಹೊರೆಯಾಗಲಿದೆ ಎಂದಿದ್ದಾರೆ.

ಜಿಎಸ್‌ಟಿ ಜಾರಿಗೆ ಗಡಿಬಿಡಿ: ಜಿಎಸ್‌ಟಿ ಜಾರಿ ಮಾಡುವಲ್ಲಿ ಕೇಂದ್ರ ಸರಕಾರ ವಿಪರೀತ ಗಡಿಬಿಡಿ ಮಾಡಿದೆ. ಇದಕ್ಕೆ ಅಧಿಕಾರಿಗಳೇ ಕಾರಣ. ಅವರು ಸೂಕ್ತ ಪೂರ್ವತಯಾರಿ ಮಾಡಿಕೊಂಡಿರಲಿಲ್ಲ. ಆಡಳಿತ ಮತ್ತು ಜಾರಿಯಲ್ಲಿ ಇನ್ನಷ್ಟು ಬಿಗಿ ನಿಲುವು ಬೇಕಾಗಿತ್ತು. ಸಮಿತಿ ಹಲವು ಬಾರಿ ಸಭೆ ನಡೆಸಿದರೂ, ಕೆಲವು ದಿನಗಳ ಹಿಂದಷ್ಟೇ 211 ಸಾಮಗ್ರಿಗಳ ತೆರಿಗೆಯಲ್ಲಿ ಇಳಿಕೆ ಮಾಡಲಾಗಿರುವುದೇ ಇದಕ್ಕೆ ಸಾಕ್ಷಿ ಎಂದು ಸಿಂಗ್‌ ಕಿಡಿಕಾರಿದ್ದಾರೆ.

ಎಡಪಕ್ಷಗಳ ಬೆಂಬಲ ಬೇಕು: ಬಿಜೆಪಿ ನೇತೃತ್ವದ ಸರ್ಕಾರದ ತಪ್ಪು ನೀತಿಗಳ ವಿರುದ್ಧ ಹೋರಾಡಲು ಕಾಂಗ್ರೆಸ್‌ಗೆ ಎಡ ಪಕ್ಷಗಳು ಬೆಂಬಲ ನೀಡಬೇಕಿದೆ ಎಂದು ಸಿಂಗ್‌ ಹೇಳಿದ್ದಾರೆ. ಯುನೈಟೆಡ್‌ ಡೆಮಾಕ್ರಾಟಿಕ್‌ ಫ್ರಂಟ್‌ (ಯುಡಿಎಫ್) ಕೊಚ್ಚಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದು, ಬಿಜೆಪಿ ವಿರುದ್ಧ ಒಟ್ಟಾಗಿ ಹೋರಾಡು ತ್ತೀರೋ ಅಥವಾ ಬಿಜೆಪಿ ಮತ್ತು ಕಾಂಗ್ರೆಸ್‌ ಮಧ್ಯೆ ಸಮಾನ ಅಂತರ ಕಾಯ್ದುಕೊಳ್ಳುತ್ತೀರೋ ಎಂದು ಸಿಪಿಎಂ ಅನ್ನು ಪ್ರಶ್ನಿಸಿದ್ದಾರೆ. 

ರಾಹುಲ್‌ಗೆ ಸಿಂಗ್‌ ಮೆಚ್ಚುಗೆ: ಹಿಮಾಚಲ ಪ್ರದೇಶ, ಗುಜರಾತ್‌ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಕಠಿಣ ಪರಿಶ್ರಮ ವಹಿಸುತ್ತಿದ್ದಾರೆ. ಪಕ್ಷ ಜಯ ಸಾಧಿಸುವ ವಿಶ್ವಾಸವಿದೆ ಎಂದೂ ಸಿಂಗ್‌ ಹೇಳಿದ್ದಾರೆ. ಆದರೆ ರಾಜಕೀಯ ಎನ್ನುವುದು ಊಹಿಸಲಾಗದಂಥ ವೃತ್ತಿ. ವ್ಯಕ್ತಿ ತನ್ನ ಪ್ರಯತ್ನ ಮಾಡಬಹುದಷ್ಟೇ ಎಂದೂ ಹೇಳಿದ್ದಾರೆ.

Advertisement

ಸಿಂಗ್‌ಗಿಂತ ಮೋದಿಯೇ ಬೆಸ್ಟ್‌
ಭಾರತದ ರೇಟಿಂಗ್‌ ಕುರಿತು ಮೂಡೀಸ್‌ ನೀಡಿರುವ ವರದಿಯಂತೆ ದೇಶದ ಆರ್ಥಿಕತೆಯನ್ನು ನಿಭಾಯಿಸುವಲ್ಲಿ ಮಾಜಿ ಪ್ರಧಾನಿ ಮನಮೋಹನ್‌ಸಿಂಗ್‌ಗಿಂತ ಪ್ರಧಾನಿ ಮೋದಿಯೇ ಬೆಸ್ಟ್‌ ಎಂದು ಸಾಮಾಜಿಕ ಜಾಲತಾಣಿಗರು ಅಭಿಪ್ರಾಯಪಟ್ಟಿದ್ದಾರೆ. “ಇಕನಾಮಿಕ್‌ ಟೈಮ್ಸ್‌ ಆನ್‌ಲೈನ್‌’ ಫೇಸ್‌ಬುಕ್‌ ಹಾಗೂ ಟ್ವಿಟರ್‌ನಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಇಂಥ ತೀರ್ಪು ಹೊರಬಿದ್ದಿದೆ.

ಮೂಡೀಸ್‌ ಬಗ್ಗೆ ಸರ್ಕಾರಕ್ಕೆ ಹಠಾತ್‌ ಪ್ರೀತಿ!
ರೇಟಿಂಗ್‌ ಏರಿಸಿದ ತಕ್ಷಣ ಮೂಡೀಸ್‌ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪ್ರೀತಿ ಮೂಡಿದೆ. ಆದರೆ ಇದೇ ಸರಕರದ ಹಣಕಾಸು ಕಾರ್ಯದರ್ಶಿಯಾಗಿದ್ದ ಶಕ್ತಿಕಾಂತ ದಾಸ್‌, ಸುದೀರ್ಘ‌ ಪತ್ರ ಬರೆದು ಮೂಡೀಸ್‌ನ ಆರ್ಥಿಕ ಮಾನ ದಂಡದ ವಿಧಾನವೇ ಸರಿ ಇಲ್ಲ ಎಂದಿದ್ದರು. ಮೂಡೀಸ್‌ ತನ್ನ ಮಾನದಂಡ ಗಳನ್ನು ಬದಲಿಸಿಕೊಳ್ಳಬೇಕಾಗಿದೆ ಎಂದಿದ್ದರು ಎಂದು ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಲೇವಡಿ ಮಾಡಿದ್ದಾರೆ. ಒಟ್ಟು ಬಂಡವಾಳ ಸಂಗ್ರಹ, ಕ್ರೆಡಿಟ್‌ ಹಾಗೂ ಉದ್ಯೋಗಗಳನ್ನು ಮೂಡೀಸ್‌ ವರದಿಯು ಆಧರಿಸಿರುತ್ತದೆ. ಆದರೆ ಈ ಮೂರು ಸೂಚ್ಯಂಕಗಳು ಋಣಾತ್ಮಕವಾಗಿವೆ ಎಂದು ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next