Advertisement

ಅಡುಗೆಯವರ ವಿರುದ್ಧ ಮಕ್ಕಳನ್ನು ಎತ್ತಿಕಟ್ಟದಿರಿ

09:20 AM May 21, 2019 | Team Udayavani |

ಕೋಲಾರ: ಜಿಲ್ಲೆಯಲ್ಲಿನ ವಸತಿ ಶಾಲೆಗಳಲ್ಲಿ ಗೊಂದಲಗಳಿಲ್ಲದಂತೆ ನೋಡಿಕೊಳ್ಳಿ, ಅಡುಗೆಯವರು-ಮಕ್ಕಳ ನಡುವೆ ವಿವಾದ ಸೃಷ್ಟಿಸಿ ಇಲ್ಲಸಲ್ಲದನ್ನು ಮಾಡದಿರಿ ಎಂದು ಪ್ರಾಂಶುಪಾಲರು, ಶಿಕ್ಷಕರು, ವಾರ್ಡನ್‌ಗಳಿಗೆ ಜಿಪಂ ಸಿಇಒ ಜಿ.ಜಗದೀಶ್‌ ಎಚ್ಚರಿಕೆ ನೀಡಿದರು.

Advertisement

ನಗರದ ಜಿಪಂ ಸಭಾಂಗಣದಲ್ಲಿ ಸೋಮವಾರ ಸಮಾಜ ಕಲ್ಯಾಣ ಇಲಾಖೆ ಹಾಗೂ ಹಾಸ್ಟೆಲ್ಗಳ ಕುರಿತು ಪ್ರಗತಿ ಪರಿಶೀಲನೆ ಸಭೆ ನಡೆಸಿದ ಅವರು, ಮಕ್ಕಳನ್ನು ಅಡುಗೆಯವರ ವಿರುದ್ಧ ಎತ್ತಿಕಟ್ಟಿ ಸಮಸ್ಯೆ ಉಲ್ಬಣಿಸುವಂತೆ ಮಾಡಿದರೆ ತಕ್ಕ ಶಾಸ್ತಿ ಮಾಡುವುದಾಗಿ ತಿಳಿಸಿದರು.

ಪ್ರಾಂಶುಪಾಲರು ತಂಡದ ನಾಯಕರು: ನಿಮ್ಮ ನಡುವಿನ ಸಮಸ್ಯೆಗಳಿಂದಾಗಿ ಮಕ್ಕಳನ್ನು ಎತ್ತಿಕಟ್ಟಿದರೆ ಮುಂದೆ ಅವರ ಮೇಲೆ ಬೀರುವ ಪರಿಣಾಮ ಕೆಟ್ಟದಾಗುತ್ತದೆ. ಒಂದು ವೇಳೆ ನನ್ನ ಗಮನಕ್ಕೇನಾದರೂ ಬಂದಿದ್ದೇ ಆದಲ್ಲಿ ಕೆಟ್ಟ ಮನುಷ್ಯ ನಾಗಬೇಕಾಗುತ್ತದೆ ಎಂದು ಎಚ್ಚರಿಸಿದ ಅವರು, ಪ್ರಾಂಶುಪಾಲರು ತಂಡದ ನಾಯಕರಂತೆ ಕೆಲಸ ಮಾಡಬೇಕು ಎಂದು ಸೂಚಿಸಿದರು.

ಶೋಕಾಸ್‌ ನೋಟಿಸ್‌: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕಡಿಮೆ ಫಲಿತಾಂಶ ಪಡೆದುಕೊಂಡಿರುವ ಹಾಸ್ಟೆಲ್ಗಳ ಕುರಿತು ಕಿಡಿಕಾರಿದ ಸಿಇಒ ಜಿ.ಜಗದೀಶ್‌, ಹಲವು ಹಾಸ್ಟೆಲ್ಗಳ ವಾರ್ಡನ್‌ಗಳಿಗೆ ಶೋಕಾಸ್‌ ನೋಟಿಸ್‌ ಜಾರಿಮಾಡುವಂತೆ ಸೂಚಿಸಿದ ಅವರು, ಸಮಾಜ ವಿಜ್ಞಾನ, ವಿಜ್ಞಾನ ಅಲ್ಲದೆ ಕನ್ನಡ ವಿಷಯದಲ್ಲಿಯೂ ಕೆಲವೆಡೆ ವಿದ್ಯಾರ್ಥಿಗಳು ಅನುತ್ತೀರ್ಣಗಿರುವುದನ್ನು ಕೇಳಿ ಆತಂಕ ವ್ಯಕ್ತಪಡಿಸಿದ ಸಿಇಒ, ಇಂಗ್ಲಿಷ್‌, ಗಣಿತಕ್ಕಿಂತಲೂ ಇವು ಕಷ್ಟವಾಗಿವೆಯೇ ಎಂದು ಪ್ರಶ್ನಿಸಿ, ಇದು ಕ್ಷಮಿಸಲಾರದ ಅಪರಾಧ ಎಂದು ಅಸಮಾಧಾನ ವ್ಯಕ್ತಪಡಿಸಿದರು.

4 ಮಂದಿ ಇರುವ ಹಾಸ್ಟೆಲ್ನಲ್ಲಿ 3 ಮಂದಿ ಅನುತ್ತೀರ್ಣ, ಬಾಲಕಿಯರ ಹಾಸ್ಟೆಲ್ನಲ್ಲಿ ಶೇ.60 ಫಲಿತಾಂಶ ಬಂದಿದ್ದರೂ ಸುಮ್ಮನಿರಲು ಸಾಧ್ಯವಿಲ್ಲ. ವಿದ್ಯಾರ್ಥಿಗಳು ಈ ಮಟ್ಟಕ್ಕೆ ಇಳಿದರೆ ಅವರ ಮುಂದಿನ ಭವಿಷ್ಯವಾದರೂ ಹೇಗೆ ಎಂದು ಪ್ರಶ್ನಿಸಿ, ಕೂಡಲೇ ಸಂಬಂಧಪಟ್ಟ ತಾಲೂಕು ಅಧಿಕಾರಿಗಳು ಅನುತ್ತೀರ್ಣರಾಗಿರುವ ಮಕ್ಕಳಿಗಾಗಿ ನುರಿತ ಶಿಕ್ಷಕರಿಂದ ಮಾರ್ಗದರ್ಶನ ಕೊಡಿಸಿ ಪೂರಕ ಪರೀಕ್ಷೆಗಳಲ್ಲಿ ಪಾಸಾಗುವ ಹಂತಕ್ಕಾದರೂ ತನ್ನಿ ಎಂದು ಸೂಚಿಸಿದರು.

Advertisement

ಜಿಲ್ಲೆಯಲ್ಲಿರುವ ಎಲ್ಲಾ ಹಾಸ್ಟೆಲ್ಗಳು, ವಸತಿ ಶಾಲೆಗಳಲ್ಲಿಯೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಪಡೆದುಕೊಳ್ಳಲೇಬೇಕಿದ್ದು, ಅದಕ್ಕಾಗಿ ಈ ಕ್ಷಣದಿಂದಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದರು.

ಉಳಿಗಾಲವಿಲ್ಲ: ಜಿಲ್ಲೆಯ ಫಲಿತಾಂಶ ಹೆಚ್ಚಳವಾಗಬೇಕಾದರೆ ನೀವೆಲ್ಲರೂ ಸಹಕರಿಸಬೇಕು. ಕಳೆದ ಬಾರಿಗಿಂತ ಈ ಬಾರಿ ಪ್ರಮಾಣ ಹೆಚ್ಚಾಗಿದೆಯಾದರೂ ಸಮಾಧಾನಕರವಾಗಿಲ್ಲ. ಸರ್ಕಾರವು ಕೋಟ್ಯಂತರ ರೂ. ಖರ್ಚು ಮಾಡಿ, ಎಲ್ಲ ಸೌಲಭ್ಯಗಳನ್ನು ಕಲ್ಪಿಸಿದರೂ ಫಲಿತಾಂಶ ಉತ್ತಮವಾಗಿಲ್ಲ ಎಂದರೆ ಅದಕ್ಕೆ ಕಾರಣರು ನೀವೇ ಆಗಿದ್ದು, ಬದಲಾವಣೆಯಾಗದಿದ್ದರೆ ಉಳಿಗಾಲವಿಲ್ಲ ಎಂದು ಎಚ್ಚರಿಸಿದರು.

ಮುಳಬಾಗಿಲಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯು ಶೇ.100 ಫಲಿತಾಂಶ ಪಡೆದುಕೊಂಡಿದೆ. ಮುಂದಿನ ವರ್ಷದ ಫಲಿತಾಂಶಕ್ಕಾಗಿ ಮಕ್ಕಳ ಸ್ಥಿತಿಗತಿಗಳ ವರದಿಯನ್ನು ಸಿದ್ಧಪಡಿಸಿಕೊಳ್ಳಬೇಕು. ಹಾಸ್ಟೆಲ್ ವಾರ್ಡನ್‌ಗಳು ಮಕ್ಕಳ ಕಡೆಗೆ ಸಂಪೂರ್ಣ ಗಮನ ನೀಡುವಂತಿದ್ದರೆ ಕಾರ್ಯನಿರ್ವಹಿಸಿ, ಇಲ್ಲವೇ ಸ್ವಯಂಪ್ರೇರಿತರಾಗಿ ನೀವೇ ಕೆಲಸ ಬಿಟ್ಟು ಹೋಗಿ ಎಂದು ಎಚ್ಚರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next