Advertisement

ಜನರ ಭಾವನೆ ಜೊತೆ ಆಟವಾಡಬೇಡಿ

02:32 PM Aug 31, 2017 | Team Udayavani |

ಚಿಕ್ಕಮಗಳೂರು: ಭಾವನೆಗಳ ಜೊತೆ ಚೆಲ್ಲಾಟವಾಡಿ ಮನಸ್ಸುಗಳನ್ನು ಒಡೆಯುವವರ ವಿರುದ್ಧ ಯುವಜನತೆ ಎದ್ದು ನಿಲ್ಲಬೇಕು ಎಂದು ಜೆಡಿಎಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್‌.ಎಚ್‌.ದೇವರಾಜ್‌ ಹೇಳಿದರು.

Advertisement

ನಗರದ ಜೆಡಿಎಸ್‌ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ವಿವಿಧ ಪಕ್ಷಗಳನ್ನು ತೊರೆದು ಪಕ್ಷಕ್ಕೆ ಸೇರ್ಪಡೆಗೊಂಡ ಯುವಕರನ್ನು ಸ್ವಾಗತಿಸಿ ಅವರು ಮಾತನಾಡಿದರು. ದೇಶದಲ್ಲಿ ಇತ್ತೀಚಿನ ವರ್ಷಗಳಲ್ಲಿ ಕೋಮು ಭಾವನೆ ಕೆರಳಿಸಿ ಭಾವನೆಗಳ ಜೊತೆ ಚೆಲ್ಲಾಟವಾಡಿ ಮನಸ್ಸುಗಳನ್ನು ಒಡೆಯುವವರ ಸಂಖ್ಯೆ ಹೆಚ್ಚುತ್ತಿದೆ. ಅಂತವರ ಬಣ್ಣದ ಮಾತಿಗೆ ಮರುಳಾಗಿ ಯುವ ಜನತೆ ಬದುಕನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ವಿಷಾದಿಸಿದರು.

ಯುವಜನತೆ ಕೋಮು ವಿಷಬೀಜ ಬಿತ್ತುವವರ ಬಗ್ಗೆ ಎಚ್ಚರಿಕೆ ವಹಿಸಬೇಕು. ಜಾತೀಯತೆ ಮತ್ತು ಭ್ರಷ್ಟಾಚಾರವನ್ನು ತೊಡೆದು ಹಾಕಲು ಮುಂದಾಗಬೇಕು ಎಂದು ಕಿವಿಮಾತು ಹೇಳಿದರು. ಜೆಡಿಎಸ್‌ ಜಿಲ್ಲಾಧ್ಯಕ್ಷ ರಂಜನ್‌ ಅಜಿತ್‌ ಕುಮಾರ್‌ ಮಾತನಾಡಿ, ಮಾಜಿ ಮುಖ್ಯಮಂತ್ರಿ ಎಚ್‌. ಡಿ.ಕುಮಾರಸ್ವಾಮಿ ಅವರ ಆಡಳಿತಾವಧಿಯಲ್ಲಿ ಮಾಡಿರುವ ಜನಪರ ಕಾರ್ಯಕ್ರಮಗಳನ್ನು ಮನೆ ಮನೆಗೆ ಮುಟ್ಟಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು ಎಂದು ಮನವಿ ಮಾಡಿದರು. ವಿವಿಧ ಪಕ್ಷಗಳನ್ನು ತೊರೆದು ಜೆಡಿಎಸ್‌ಗೆ ಸೇಪಡೆಗೊಂಡ 50ಕ್ಕೂ ಹೆಚ್ಚು ಯುವಕರನ್ನು ಪಕ್ಷದ ಬಾವುಟ ನೀಡಿ ಸ್ವಾಗತಿಸಲಾಯಿತು. 

ಯುವಜನತಾದಳದ ಜಿಲ್ಲಾಧ್ಯಕ್ಷ ವಿನಯ್‌ ಕೋಟೆ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಾಧ್ಯಕ್ಷ ಡಿ.ಆರ್‌. ಕುಶ, ಜೆಡಿಎಸ್‌ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಡಿ.ರಮೇಶ್‌, ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಎನ್‌.ದೇವರಾಜ್‌ ಅರಸ್‌, ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ನಿಸಾರ್‌ ಅಹಮದ್‌, ಪ.ಜಾತಿ, ಪ.ವರ್ಗ ವಿಭಾಗದ ಜಿಲ್ಲಾಧ್ಯಕ್ಷ ಆರ್‌.ದೇವಿಪ್ರಸಾದ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next