Advertisement

ಕಾಫಿ ಕುಡಿಯೋ ಹೊತ್ತಿಗೆ ಬಾರ್‌ ಓಪನ್‌ ಮಾಡ್ಬೇಡಿ!

06:00 AM Sep 21, 2017 | |

ಬೆಂಗಳೂರು: ರಾಜ್ಯದಲ್ಲಿ ಮದ್ಯದಂಗಡಿಗಳು ಬೆಳ್ಳಂಬೆಳಗ್ಗೆ ಬಾಗಿಲು ತೆರೆದು ವ್ಯಾಪಾರ ಮಾಡುವಂತಿಲ್ಲ. ನಿಗದಿಪಡಿಸಿರುವ ಅವಧಿಗೆ ಮುಂಚೆ ಮದ್ಯದಂಗಡಿಗಳನ್ನು ತೆರೆದರೆ, ಅಂಗಡಿಗಳ ಜತೆಗೆ ಸಂಬಂಧಿಸಿದ ಅಬಕಾರಿ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಅಬಕಾರಿ ಸಚಿವ ಆರ್‌.ಬಿ.ತಿಮ್ಮಾಪುರ್‌ ಎಚ್ಚರಿಸಿದ್ದಾರೆ.

Advertisement

ಬೆಂಗಳೂರು ಸೇರಿದಂತೆ ನಗರ ಪ್ರದೇಶಗಳಲ್ಲಿ ಮದ್ಯದಂಗಡಿಗಳು ಬೆಳ್ಳಂಬೆಳಗ್ಗೆಯೇ ಬಾಗಿಲು ತೆಗೆಯುವ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಾವುದೇ ಮದ್ಯದಂಗಡಿಗಳು ಬೆಳಗ್ಗೆ 8 ಗಂಟೆಗೆ ಮುನ್ನ ತೆರೆಯಬಾರದು ಎಂಬ ನಿಯಮವಿದೆ. ಇನು °ಮುಂದೆ ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜತೆಗಿದ್ದ ಅಬಕಾರಿ ಆಯುಕ್ತರು ಮತ್ತು ಜಂಟಿ ಆಯುಕ್ತರಿಗೆ ಸೂಚಿಸಿದರು.ವೈನ್‌ಶಾಪ್‌ಗ್ಳು ಬೆಳಗ್ಗೆ 8ರ ನಂತರ ತೆರೆಯಬೇಕು. ಅದೇ ರೀತಿ ಬಾರ್‌ ಅಂಡ್‌ ರೆಸ್ಟೋರೆಂಟ್‌ಗಳನ್ನು ತೆರೆಯಲೂ ಸಮಯ ನಿಗದಿಪಡಿಸಲಾಗಿದೆ. ಈ ನಿಯಮ ಕಟ್ಟುನಿಟ್ಟಾಗಿ ಪಾಲನೆಯಾಗದಿದ್ದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧವೇ ಕ್ರಮ ಜರುಗಿಸಲಾಗುವುದು. ಈ ಬಗ್ಗೆ ಎಲ್ಲಾ ಅಧಿಕಾರಿಗಳಿಗೂ ಸೂಚನೆ ನೀಡಿ ಎಂದು ಆದೇಶಿಸಿದರು.

ಮದ್ಯ ಮಾರಾಟ ಶೇ. 1.12ರಷ್ಟು ಇಳಿಕೆ:
ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ಸಾಲಿನಲ್ಲಿ ರಾಜ್ಯದಲ್ಲಿ ಮದ್ಯ ಮಾರಾಟ ಶೇ. 1.12ರಷ್ಟು ಇಳಿಕೆಯಾಗಿದೆ. ಹೆದ್ದಾರಿ ಬದಿಯ ಬಾರ್‌ಗಳ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ಆದೇಶವೂ ಇದಕ್ಕೆ ಕಾರಣ. ಪ್ರಸ್ತುತ ಮಾರಾಟದಲ್ಲಿ ಸುಧಾರಣೆ ಕಂಡುಬಂದಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಅಬಕಾರಿ ಇಲಾಖೆ ಎಂದರೆ ಸರ್ಕಾರದ ಬೊಕ್ಕಸ ತುಂಬಿಸುವ ಮತ್ತು ಆದಾಯ ಸಂಗ್ರಹಿಸುವ ಇಲಾಖೆ ಎಂಬುದಕ್ಕೆ ಸೀಮಿತವಾಗಿತ್ತು. ಆದರೆ, ತಮಗೆ ಆದಾಯ ಸಂಗ್ರಹಕ್ಕಿಂತ ಇಲಾಖೆಯನ್ನು ಸದೃಢಗೊಳಿಸುವುದು ಮುಖ್ಯ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದ್ದು, ಅಬಕಾರಿ ಇಲಾಖೆಗೆ ಹೊಸ ಶಸ್ತ್ರಾಸ್ತ್ರಗಳನ್ನು ಒದಗಿಸುವುದರ ಜತೆಗೆ ಅಧಿಕಾರಿಗಳಿಗೆ ಹೆಚ್ಚಿನ ಅಧಿಕಾರ ಮತ್ತು ಜವಾಬ್ದಾರಿ ನೀಡಲಾಗುವುದು ಎಂದರು.

789 ಮದ್ಯದಂಗಡಿ ಸ್ಥಳಾಂತರ:
ಸುಪ್ರೀಂ ಕೋರ್ಟ್‌ ಆದೇಶದಿಂದಾಗಿ ರಾಜ್ಯದಲ್ಲಿ 3000ಕ್ಕೂ ಹೆಚ್ಚು ಮದ್ಯದಂಗಡಿಗಳನ್ನು ಮುಚ್ಚಲಾಗಿತ್ತು. ಆದರೆ, ನಗರ ಪ್ರದೇಶಗಳ ವ್ಯಾಪ್ತಿಯಲ್ಲಿ ಅವುಗಳಿಗೆ ವಿನಾಯಿತಿ ನೀಡಿರುವುದರಿಂದ ಬಹುತೇಕ ಮದ್ಯದಂಗಡಿಗಳು ಪುನಾರಂಭವಾಗಿವೆ. ಇದೀಗ ಬೆಂಗಳೂರಿನ 200 ಸೇರಿದಂತೆ ರಾಜ್ಯಾದ್ಯಂತ ಸುಮಾರು 789 ಮದ್ಯದಂಗಡಿಗಳನ್ನು ಹೆದ್ದಾರಿ ಬದಿಯಿಂದ ಸ್ಥಳಾಂತರ ಮಾಡಲೇ ಬೇಕಾಗಿದೆ. ಅವುಗಳನ್ನು ಸ್ಥಳಾಂತರ ಮಾಡುವವರೆಗೆ ತೆರೆಯಲು ಅವಕಾಶ ನೀಡುವುದಿಲ್ಲ ಎಂದು ಹೇಳಿದರು.

Advertisement

ಮಧ್ಯದಂಗಡಿ ತೆರೆಯುವ ಸಮಯ– ಬೆಳಗ್ಗೆ 8 ಗಂಟೆ ನಂತರ
ಮುಚ್ಚುವ ಸಮಯ- ಬೆಂಗಳೂರಿನಲ್ಲಿ ಮಧ್ಯರಾತ್ರಿ 1, ಇತರೆಡೆ ರಾತ್ರಿ 11

Advertisement

Udayavani is now on Telegram. Click here to join our channel and stay updated with the latest news.

Next