ಸೊರಬ: ಕೋವಿಡ್ ಎರಡನೇ ಅಲೆ ನಿಯಂತ್ರಣಕ್ಕೆ ಬರುತ್ತಿದ್ದು, ಅಜಾಗರೂಕತೆ ಸಲ್ಲದು. ಜನತೆ ಎಚ್ಚರವಾಗಿರಬೇಕು ಎಂದು ಶಾಸಕ ಎಸ್. ಕುಮಾರ್ ಬಂಗಾರಪ್ಪ ತಿಳಿಸಿದರು.
ಪಟ್ಟಣದ ರಂಗ ಮಂದಿರದಲ್ಲಿ ಸೋಮವಾರ ಕೋವಿಡ್‌ಗೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಕೊರೊನಾವನ್ನು ತೊಲಗಿಸುವ ನಿಟ್ಟಿನಲ್ಲಿ ಅನೇಕ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಪ್ರತಿಯೊಬ್ಬರಿಗೂ ಕೋವಿಡ್ ಲಸಿಕೆ ದೊರೆಯಬೇಕು ಎಂಬ ಇಚ್ಛೆ ಇದ್ದು, ಇದೀಗ 45 ಮೇಲ್ಪಟ್ಟವರಿಗೆ ಮತ್ತು 18 ವರ್ಷ ಮೇಲ್ಪಟ್ಟ ಆದ್ಯತಾ ಗುಂಪಿನವರಿಗೆ ಲಸಿಕೆ ನೀಡುವ ಕಾರ್ಯ ಜರುಗುತ್ತಿದೆ. ಕೇವಲ ಲಸಿಕೆ ನೀಡುವುದು ಮಾತ್ರವಲ್ಲ, ಕೊರೊನಾ ಪರೀಕ್ಷೆಗಳನ್ನು ಸಹ ಪ್ರಗತಿಯಲ್ಲಿರಿಸಬೇಕು ಎಂದರು.
ತಾಲೂಕಿನಲ್ಲಿ ಕೋವಿಡ್ ಸೋಂಕಿನಿಂದ 158 ಜನ ಮೃತಪಟ್ಟಿರುವ ಕುರಿತು ವರದಿಯಾಗಿದೆ. ಈ ಕೂಡಲೇ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಕೋವಿಡ್ ಸೋಂಕಿನಿಂದ ಮೃತಪಟ್ಟವರ ಆರ್ಥಿಕ ಸ್ಥಿತಿಗತಿ, ಕುಟುಂಬದಲ್ಲಿ ಅವರನ್ನು ಅವಲಂಬಿಸಿದವರ ಕುರಿತು ಪ್ರತ್ಯೇಕವಾಗಿ ಮಾಹಿತಿ ಸಂಗ್ರಹಿಸಲು ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸುವಂತೆ ತಾಪಂ ಇಒ ಕೆ.ಜಿ. ಕುಮಾರ್ ಅವರಿಗೆ ಸೂಚಿಸಿದರು.
ಕೋವಿಡ್ ನಿಂದ ಮೃತಪಟ್ಟ ವ್ಯಕ್ತಿಗಳ ಕುಟುಂಬಕ್ಕೆ ದಿನಸಿ ವಸ್ತುಗಳ ಕಿಟ್ ವಿತರಿಸಲಾಗಿದೆ. ಅದು ಕೆಲ ದಿನಗಳ ಬದುಕಿಗೆ ಮಾತ್ರ. ಆದರೆ, ಅವರಿಗೆ ಶಾಶ್ವತವಾಗಿ ಅನುಕೂಲವಾಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದರು.
ಇದಕ್ಕೂ ಮೊದಲು ಶಾಸಕರ ಕ್ಷೇತ್ರಾಭಿಬವೃದ್ಧಿ ಅನುದಾನದಲ್ಲಿ ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ನೀಡಿದ ಆ್ಯಂಬುಲೆನ್ಸ್ ವಾಹನಕ್ಕೆ ಹಾಗೂ ದೂಗೂರು, ಚಿಟ್ಟೂರು, ಹರೀಶಿ, ದ್ಯಾವನಹಳ್ಳಿ, ಕಾತುವಳ್ಳಿ ಮತ್ತು ಹಂಚಿ ಗ್ರಾಪಂಗಳಿಗೆ ನೀಡಿದ ಕಸ ವಿಲೇವಾರಿ ವಾಹನಗಳನ್ನುಹಸ್ತಾಂತರಿಸಿದರು. ಕೊರೊನಾ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದರು.
ಸಭೆಯಲ್ಲಿ ತಹಶೀಲ್ದಾರ್ ಶಿವಾನಂದ ರಾಣೆ, ತಾಪಂ ಇಒ ಕೆ.ಜಿ. ಕುಮಾರ್, ತಾಲೂಕು ಆರೋಗ್ಯಾಧಿಕಾರಿ ಡಾ| ಅಕ್ಷತಾ ವಿ. ಖಾನಾಪುರ, ಸಿಪಿಐ ಆರ್.ಡಿ. ಮರುಳಸಿದ್ದಪ್ಪ, ಮುಖಂಡರಾದ ಭೋಗೇಶ್ ಶಿಗ್ಗಾ, ಶಿವಕುಮಾರ್ ಕಡಸೂರು, ದೇವೇಂದ್ರಪ್ಪ ಚನ್ನಾಪುರ, ಕೃಷ್ಣಮೂರ್ತಿ ಕೊಡಕಣಿ, ಆಶೀಕ್ ನಾಗಪ್ಪ ಇತರರಿದ್ದರು.