Advertisement

ಈ ಜಾಗದಲ್ಲಿ ಬಾರ್‌ ಬೇಡವೇ ಬೇಡ

05:06 PM Aug 09, 2017 | Team Udayavani |

ತುಮಕೂರು: ಕಾನೂನು ಬಾಹಿರವಾಗಿ ಹೊನ್ನುಡಿಕೆ ಹ್ಯಾಂಡ್‌ಪೋಸ್ಟ್‌ನಲ್ಲಿ ಅಕ್ರಮವಾಗಿ ನಿರ್ಮಾಣ ಮಾಡುತ್ತಿರುವ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ ಅನ್ನು ತಕ್ಷಣ ನಿಲ್ಲಿಸಬೇಕು ಎಂದು ಆಗ್ರಹಿಸಿ ರೈತರ ಸಂಘದ ಕಾರ್ಯಕರ್ತರು ಹಾಗೂ ಹೊನ್ನುಡಿಕೆ ಹ್ಯಾಂಡ್‌ಪೋಸ್ಟ್‌ ಹಾಗೂ ಸುತ್ತಮುತ್ತಲ ಗ್ರಾಮಗಳ ಜನರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

Advertisement

ಕರ್ನಾಟಕ ರಾಜ್ಯ ರೈತ ಸಂಘದ ಹಾಗೂ ಹೊನ್ನುಡಿಕೆ ಸುತ್ತಮುತ್ತಲ ಗ್ರಾಮಗಳಾದ ಹೊಸಪಾಳ್ಯ, ವಡ್ಡರಹಳ್ಳಿ, ಚೋಳೇನಹಳ್ಳಿ, ನರುಗನಹಳ್ಳಿ, ದೊಡ್ಡ ಹೊಸೂರು ಗ್ರಾಮಗಳ ಮುಖಂಡರಾದ ಸಿ.ಎಸ್‌.ರಂಗಸ್ವಾಮಯ್ಯ, ರೈತ ಸಂಘದ ರವೀಶ್‌, ಮಯಾರಂಗಯ್ಯ, ಕೆಂಪರಂಗಯ್ಯ, ಸತೀಶ್‌, ಮಂಜು, ಸಿದ್ದಲಿಂಗಯ್ಯ, ದೀಪು ಮತ್ತಿತರರು ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.

ಕ್ರಮ ಕೈಗೊಂಡಿಲ್ಲ: ಮದ್ಯದಂಗಡಿ ರದ್ದು ಮಾಡುವಂತೆ ಆಗ್ರಹಿಸಿ ಹಲವಾರು ಬಾರಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಕಿಡಿಕಾರಿದರು.

ಭೂ ಪರಿವರ್ತನೆ: ಗೂಳೂರು ಹೋಬಳಿ ಹೊಳಕಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎ.ಕೆ.ಕಾವಲ್‌ನಲ್ಲಿ 2013-14ನೇ ಸಾಲಿನಲ್ಲಿ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ ತೆರೆಯಲು ಅನುಮತಿ ಪಡೆದು, ಈಗ ಹೊನ್ನುಡಿಕೆ ಹ್ಯಾಂಡ್‌ಪೋಸ್ಟ್‌ನಲ್ಲಿ ಬಾರ್‌ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಈ ಭೂಮಿಗೆ ಹೊಂದಿಕೊಂಡಂತೆ ಇರುವ ಸರ್ವೆ ನಂ 198/1 ಜಾಗವನ್ನು ಈಗಾಗಲೇ ಜಿಲ್ಲಾಧಿಕಾರಿಗಳು ಭೂ ಪರಿವರ್ತನೆ ಮಾಡಿ, ದಲಿತರಿಗೆ ನಿವೇಶನ ಹಂಚಿದ್ದಾರೆ.

ಮಾಹಿತಿ ನೀಡಿಲ್ಲ: ಇಲ್ಲಿ ನೆಲಸಿರುವ ದಲಿತ ಕುಟುಂಬಗಳು ಕೂಲಿ, ನಾಲಿಯಿಂದ ಬದುಕು ನಡೆಸುತ್ತಿದ್ದು, ರಾಜ್ಯ ಹೆದ್ದಾರಿಯಲ್ಲಿ ಉಂಟಾಗಿರುವ ಅಪಘಾತದಲ್ಲಿ ಮೃತಪಟ್ಟವರ ಪರಿಹಾರಕ್ಕಾಗಿ ಹಂಬಲಿಸುತ್ತಿದ್ದಾರೆ. ಬಾರ್‌ ತೆರೆಯಲು ನಿರಪೇಕ್ಷಣಾ ಪತ್ರ ಪಡೆಯುವಾಗಲು ಗ್ರಾಮ ಪಂಚಾಯಿತಿ, ಪೊಲೀಸ್‌ ಇಲಾಖೆ ಮತ್ತು ಕಂದಾಯ ಇಲಾಖೆ ಸುತ್ತಮುತ್ತಲ ಜನರಿಗೆ ಮಾಹಿತಿ ನೀಡದೆ, ಅಂಗಡಿಗೆ ಅನುಮತಿ ನೀಡುವ ಮೂಲಕ ಮೋಸ ಮಾಡಿದ್ದಾರೆ ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು.

Advertisement

ಬಾರ್‌ ಸ್ಥಳದಲ್ಲಿ ಶಾಲೆ ಇದೆ: ಅಕ್ರಮವಾಗಿ ನಿರ್ಮಾಣವಾಗುತ್ತಿರುವ ಬಾರ್‌ ಜಾಗದ ಸುತ್ತಮುತ್ತಲು ವಾಸವಾಗಿರುವ ದಲಿತ ಕುಟುಂಬಗಳ ಮಕ್ಕಳು ಶಾಲೆಗೆ ಈ ಜಾಗದ ಮೂಲಕವೇ ಹಾದು ಹೋಗಬೇಕಿದೆ. ಅಲ್ಲದೇ ಗ್ರೀಷ್ಮ ಪಬ್ಲಿಕ್‌ ಶಾಲೆ ಸಹ ಹತ್ತಿರದಲ್ಲಿದೆ. ಈಗ ನಿರ್ಮಾಣವಾಗುತ್ತಿರುವ ಬಾರ್‌ ಸುತ್ತಲು ಮನೆಗಳಿದ್ದು,ಅವರ ನೆಮ್ಮದಿಯ ಬದುಕಿಗೆ ಸಾಕಷ್ಟು ತೊಂದರೆಯಾಗಲಿದೆ. ಆದ್ದರಿಂದ ಮದ್ಯದಂಗಡಿ ತೆರೆಯಲು ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದೆಂದು ಒತ್ತಾಯಿಸಿದರು.

ಅಧಿಕಾರಿಗಳ ಭರವಸೆ ಹುಸಿ: ಈ ಹಿಂದೆ ಜುಲೈ 17 ಮತ್ತು 18 ರಂದು ಈ ಭಾಗದ ಜನರು ಬಾರ್‌ ಮತ್ತು ರೆಸ್ಟೋರೆಂಟ್‌ ತೆರೆಯುವುದನ್ನು ವಿರೋಧಿಸಿ ರಸ್ತೆ ತಡೆದು ಪ್ರತಿಭಟನೆ ನಡೆಸಿದಾಗ, ಅಬಕಾರಿ ಅಧೀಕ್ಷಕರು ಭೇಟಿ ನೀಡಿ ಪರಿಶೀಲಿಸುವ ಭರವಸೆ ನೀಡಿದ್ದರು. ಆದರೆ, ಇದುವರೆಗೂ ಅವರು ಸ್ಥಳಕ್ಕೆ ಭೇಟಿ ನೀಡಿಲ್ಲ. ಅಲ್ಲದೆ ಜುಲೈ 18 ರಂದು ರಸ್ತೆ ತಡೆ ನಡೆಸಿದಾಗ ಸ್ಥಳಕ್ಕೆ ಆಗಮಿಸಿದ್ದ ಹೆಬ್ಬೂರು ಪೊಲೀಸರು ಜನರಿಗೆ ನ್ಯಾಯ ಒದಗಿಸುವ ಭರವಸೆ ನೀಡಿ ರಸ್ತೆ ತೆಡೆ ಮಾಡುವುದನ್ನು ತೆರೆವು ಗೊಳಿಸಿದ್ದರು. ಆದರೆ ಇದುವರೆಗೂ ನಿರ್ಮಾಣ ಕಾರ್ಯವನ್ನು ರದ್ದುಗೊಳಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನೆಮ್ಮದಿ ಕಲ್ಪಿಸಿ: ಈ ಬಗ್ಗೆ  ಪ್ರತಿಭಟನೆ ನಡೆಸಿ, ಮಂಗಳವಾರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಗುತ್ತಿದ್ದು, ಜಿಲ್ಲಾಧಿಕಾರಿಗಳು ಹೊನ್ನುಡಿಕೆ ಹ್ಯಾಂಡ್‌ಪೋಸ್ಟನಲ್ಲಿ ಅಕ್ರಮವಾಗಿ ನಿರ್ಮಿಸುತ್ತಿರುವ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ ಅನ್ನು ರದ್ದು ಮಾಡಿ, ಜನರು ನೆಮ್ಮದಿಯಿಂದ ಬಾಳಲು ಅವಕಾಶ ನೀಡಬೇಕೆಂದು ಮನವಿಯಲ್ಲಿ ಕೋರಿದರು.

Advertisement

Udayavani is now on Telegram. Click here to join our channel and stay updated with the latest news.

Next