Advertisement

ಬೆಂಕಿ ಜತೆ ಸರಸವಾಡದಿರಿ: ಸುಪ್ರೀಂ ಕೋರ್ಟ್‌

03:18 AM Apr 26, 2019 | Team Udayavani |

ಹೊಸದಿಲ್ಲಿ: “ನ್ಯಾಯಾಂಗಕ್ಕೆ ಕಳಂಕ ತರುವ ಉದ್ದೇಶದಿಂದ ವ್ಯವಸ್ಥಿತ ದಾಳಿ ನಡೆಸಲಾಗುತ್ತಿದೆ. ಸರ್ವೋಚ್ಚ ನ್ಯಾಯಾಲಯವು ಅಷ್ಟೊಂದು ದುರ್ಬಲವಾಗಿಲ್ಲ ಮತ್ತು ಹಣ ಅಥವಾ ರಾಜಕೀಯ ಬಲದಿಂದ ಅದನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಬೆಂಕಿಯೊಂದಿಗೆ ಯಾರೂ ಸರಸವಾಡಬೇಡಿ ಎಂಬ ಖಡಕ್‌ ಸಂದೇಶವನ್ನು ದೇಶಕ್ಕೆ ರವಾನಿಸುವ ಸಮಯ ಬಂದಿದೆ.’

Advertisement

-ಇಂಥ ಆಕ್ರೋಶಭರಿತ ಮಾತುಗಳ ಮೂಲಕ ಇತ್ತೀಚೆಗಿನ ಬೆಳವಣಿಗೆಗಳ ಕುರಿತು ಕಳವಳ ವ್ಯಕ್ತ ಪಡಿಸುತ್ತಲೇ, ಎಚ್ಚರಿಕೆ ನೀಡುವ ಕೆಲಸವನ್ನು ಮಾಡಿದೆ ಸುಪ್ರೀಂ ಕೋರ್ಟ್‌.

ಸಿಜೆಐ ರಂಜನ್‌ ಗೊಗೊಯ್‌ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿಬಂದ ಬಳಿಕ ಸುಪ್ರೀಂ ಕೋರ್ಟ್‌ ನ್ಯಾಯಪೀಠ ದಿಂದ ಇಂಥದ್ದೊಂದು ಮಾತು ಕೇಳಿ ಬಂದಿದೆ. ಸಿಜೆಐ ವಿರುದ್ಧ ಆರೋಪ ಹೊರಿಸಿ ಅವರನ್ನು ಕೆಳಗಿಳಿಸಲು ಅತೀ ದೊಡ್ಡ ಷಡ್ಯಂತ್ರ ರೂಪಿಸ ಲಾಗಿದೆ ಎಂದು ವಕೀಲ ಉತ್ಸವ್‌ ಸಿಂಗ್‌ ಬೇನ್ಸ್‌ ಆರೋಪ ಮಾಡಿದ್ದು, ಆ ಕುರಿತ ವಿಚಾರಣೆ ವೇಳೆ ನ್ಯಾ| ಅರುಣ್‌ ಮಿಶ್ರಾ ನೇತೃತ್ವದ ಮೂವರು ನ್ಯಾಯಮೂರ್ತಿಗಳನ್ನು ಒಳ ಗೊಂಡ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಸುಧಾರಿಸಲು ಯತ್ನಿಸಿದರೆ ಹತ್ಯೆ!
ಹಣ ಬಲ ಅಥವಾ ರಾಜಕೀಯ ಬಲದಿಂದ ಸುಪ್ರೀಂ ಕೋರ್ಟ್‌ ಕಾರ್ಯಾಚರಿಸುವುದಿಲ್ಲ. ನೀವು ಬೆಂಕಿಯೊಂದಿಗೆ ಆಟವಾಡುತ್ತಿದ್ದೀರಿ ಎಂದು ದೇಶದಲ್ಲಿನ ಶ್ರೀಮಂತರು ಮತ್ತು ಪ್ರಭಾವಿಗಳಿಗೆ ನಾವು ಹೇಳಲು ಬಯಸುತ್ತೇವೆ. ಕೋರ್ಟ್‌ ರಿಜಿಸ್ಟ್ರಿಯನ್ನು ಹಣ ಬಲದಿಂದ ಫಿಕ್ಸ್‌ ಮಾಡಲು ಕೆಲವರು ಯತ್ನಿಸುತ್ತಿದ್ದಾರೆ. ಇಂಥದ್ದನ್ನು ಯಾರು ಸರಿಪಡಿಸಲು ಅಥವಾ ಸುಧಾರಿಸಲು ಯತ್ನಿಸುತ್ತಾರೋ ಅವರನ್ನು “ಕೊಲ್ಲಲಾಗುತ್ತದೆ’ ಅಥವಾ “ಅವರ ಹೆಸರಿಗೆ ಕಳಂಕ ತರಲಾಗುತ್ತದೆ’. ಯಾರಿಂದಲೂ ಸುಪ್ರೀಂ ಕೋರ್ಟ್‌ ಅನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಅಲ್ಲದೆ, ಕಳೆದ 3-4 ವರ್ಷಗಳಿಂದ ಸುಪ್ರೀಂ ಕೋರ್ಟ್‌ ಅನ್ನು ನಡೆಸಿಕೊಳ್ಳು ತ್ತಿರುವ ರೀತಿ ನೋಡಿದರೆ ಬಹಳ ಆತಂಕವಾಗುತ್ತಿದೆ. ಇದು ಹೀಗೇ ಮುಂದುವ ರಿದರೆ ಈ ಸಂಸ್ಥೆಯೇ ಉಳಿಯುವುದಿಲ್ಲ ಎಂದೂ ನ್ಯಾಯಪೀಠ ಹೇಳಿತು.

Advertisement

ಸಿಜೆಐ ವಿರುದ್ಧದ ಪ್ರಕರಣದಿಂದ ಓರ್ವ ಜಡ್ಜ್ ಹೊರಕ್ಕೆ
ಮುಖ್ಯನ್ಯಾಯಮೂರ್ತಿ ರಂಜನ್‌ ಗೊಗೊಯ್‌ ವಿರುದ್ಧ ದಾಖಲಾಗಿರುವ ಲೈಂಗಿಕ ದೌರ್ಜನ್ಯ ಪ್ರಕರಣದ ವಿಚಾರಣೆ ಸಮಿತಿಯಿಂದ ನ್ಯಾಯಮೂರ್ತಿ ಎನ್‌.ವಿ ರಮಣ ಹೊರಗುಳಿಯುವ ನಿರ್ಧಾರ ಮಾಡಿದ್ದಾರೆ. ಮೂವರು ನ್ಯಾಯಮೂರ್ತಿಗಳ ಸಮಿತಿ ಇದಾಗಿದ್ದು, ಹಿರಿಯ ನ್ಯಾ| ಎಸ್‌.ಎ ಬೊಬೆx ಇದರ ನೇತೃತ್ವ ವಹಿಸಿದ್ದಾರೆ. ಸಿಜೆಐ ವಿರುದ್ಧ ಲೈಂಗಿಕ ಕಿರುಕುಳ ದೂರು ನೀಡಿದ ಮಹಿಳೆಯೇ ನ್ಯಾ| ರಮಣ ಅವರು ಸಮಿತಿಯಲ್ಲಿರುವ ಬಗ್ಗೆ ಆಕ್ಷೇಪ ಸಲ್ಲಿಸಿದ ಹಿನ್ನೆಲೆಯಲ್ಲಿ ಈ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ನ್ಯಾ| ರಮಣ ಹಾಗೂ ನ್ಯಾ| ಗೊಗೊಯ್‌ ಆತ್ಮೀಯ ಸ್ನೇಹಿತರಾಗಿದ್ದು, ನ್ಯಾ| ಗೊಗೊಯ್‌ ಮನೆಗೆ ಪದೇ ಪದೆ ನ್ಯಾ| ರಮಣ ಭೇಟಿ ನೀಡುತ್ತಾರೆ ಎನ್ನುವ ಕಾರಣಕ್ಕೆ ಸಮಿತಿಯಲ್ಲಿ ಅವರು ಇರುವುದು ಸರಿಯಲ್ಲ ಎಂಬುದಾಗಿ ಮಹಿಳೆ ಆಕ್ಷೇಪಿಸಿದ್ದಾರೆ ಎನ್ನಲಾಗಿದೆ. ಶುಕ್ರವಾರ ಪ್ರಕರಣದ ವಿಚಾರಣೆ ನಡೆಯುವ ಸಾಧ್ಯತೆಯಿದ್ದು, ಅಂದು ದೂರುದಾರ ಮಹಿಳೆಯೂ ಹಾಜರಾಗಲಿದ್ದಾರೆ.

ವಿಚಾರಣೆ ಸಮಿತಿಯಲ್ಲಿ ಕೇವಲ ಒಬ್ಬ ಮಹಿಳಾ ಸದಸ್ಯರಿದ್ದಾರೆ. ಸುಪ್ರೀಂ ಕೋರ್ಟ್‌ನ ವಿಶಾಖಾ ಮಾರ್ಗಸೂಚಿಯ ಪ್ರಕಾರ ಸಮಿತಿಯಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿರಬೇಕು ಎಂದು ಮಹಿಳೆ ದೂರಿದ್ದಾರೆ ಎನ್ನಲಾಗಿದೆ.

ವಕೀಲರ ಆರೋಪದ ತನಿಖೆಗೆ ನ್ಯಾ| ಪಾಟ್ನಾಯಕ್‌ ನೇಮಕ
ಸಿಜೆಐ ರಂಜನ್‌ ಗೊಗೊಯ್‌ ಅವರಿಂದ ರಾಜೀನಾಮೆ ಕೊಡಿಸಲು ದೊಡ್ಡ ಮಟ್ಟದಲ್ಲಿ ಸಂಚು ರೂಪಿಸಲಾಗಿದೆ ಎಂದು ವಕೀಲ ಉತ್ಸವ್‌ ಸಿಂಗ್‌ ಬೇನ್ಸ್‌ ಆರೋಪ ಮಾಡಿದ್ದು, ಇದರ ವಿಚಾರಣೆಗೆ ನಿವೃತ್ತ ನ್ಯಾಯಮೂರ್ತಿ ಎ.ಕೆ.ಪಾಟ್ನಾಯಕ್‌ರನ್ನು ನೇಮಿಸಲಾಗಿದೆ. ಈ ಸಮಿತಿಯು ಸಿಜೆಐ ವಿರುದ್ಧ ದಾಖಲಿಸಲಾದ ಲೈಂಗಿಕ ದೌರ್ಜನ್ಯ ಪ್ರಕರಣಗಳ ವಿಚಾರಣೆ ನಡೆಸುವುದಿಲ್ಲ. ಬದಲಿಗೆ ಬೇನ್ಸ್‌ ಆರೋಪ ಕುರಿತು ತನಿಖೆ ನಡೆಸಲಿದೆ. ಈ ಬಗ್ಗೆ ಅರುಣ್‌ ಮಿಶ್ರಾ ನೇತೃತ್ವದ ವಿಶೇಷ ನ್ಯಾಯಪೀಠ ಈ ಆದೇಶ ಹೊರಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next