Advertisement
ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ವತಿಯಿಂದ ಗುರುವಾರ ನಗರ ಟೌನ್‌ಹಾಲ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ “ನೃಪತುಂಗ ಸಾಹಿತ್ಯ ಪ್ರಶಸ್ತಿ’ ಸ್ವೀಕರಿಸಿ ಮಾತನಾಡಿದ ಅವರು, ವಿದ್ಯಾಲಯದಲ್ಲಿ ಪದ್ಯ ಬರೆಯಲು ಬಳಸಬೇಕಾದ ಭಾಷೆ, ಛಂದಸ್ಸು, ವ್ಯಾಕರಣ ಹೇಳಿಕೊಡುವ ಬದಲು ಎಡ – ಬಲ ಕುರಿತು ಯುವ ಬರಹಗಾರರಿಗೆ ತಿಳಿಸುವುದರಿಂದ ಭವಿಷ್ಯದಲ್ಲಿ ದೊಡ್ಡ ಸಾಹಿತಿಗಳಾಗಬೇಕಾದರು ದಾರಿ ತಪ್ಪುತ್ತಿದ್ದಾರೆ ಎಂದರು.
Related Articles
ಇಂದು ಸಾಹಿತ್ಯ ಸಮ್ಮೇಳನ ಎಂದರೂ ಎಡ-ಬಲ ಎಂತಾಗಿದ್ದು, ಒಂದು ಪಕ್ಷವನ್ನು ಬೆಂಬಲಿಸುವ ಮತ್ತು ಮತ್ತೂಂದನ್ನು ವಿರೋಧಿಸುವ ಕಾರ್ಯಕ್ರಮದಂತಾಗಿದೆ. ಈ ಎಲ್ಲ ಗೌಜು-ಗದ್ದಲಗಳ ನಡುವೆಯೂ ತನ್ನ ದಾರಿ ಯಾವುದು, ಏನು ಮಾಡಬೇಕು ಎಂದು ಆರಂಭದ ದೆಸೆಯಲ್ಲಿರುವ ಯುವ ಬರಹಗಾರರಿಗೆ ಗೊಂದಲವಾಗುತ್ತದೆ ಎಂದರು.
Advertisement
1999ರಲ್ಲಿ ಕನಕಪುರದಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಅತ್ಯಂತ ಉತ್ಕೃಷ್ಟವಾದ ನನ್ನ 28 ಪುಟಗಳ ಶುದ್ಧ ಸಾಹಿತ್ಯದ ಗುಣಲಕ್ಷಗಳ ಕುರಿತ ಅಧ್ಯಕ್ಷೀಯ ಭಾಷಣವನ್ನು ಮೊದಲು ಮೆಚ್ಚಿಕೊಂಡು, ನಂತರದಲ್ಲಿ ಅದನ್ನು ಸುಟ್ಟು ಪ್ರಚಾರ ಪಡೆದುಕೊಂಡಿದ್ದರು. ಸಮ್ಮೇಳನದ ಸಮಾರೋಪ ಭಾಷಣದಲ್ಲಿ ಅದಕ್ಕೆ “ಬೆಂಕಿ ಹಾಕುವುದು ಅವರ ಮಾಧ್ಯಮ, ಬರೆಯುವುದು ನನ್ನ ಮಾಧ್ಯಮ’ ಎಂದು ಉತ್ತರ ನೀಡಿದ್ದೆ ಎಂದು ಸ್ಮರಿಸಿದರು.
ನಾನು ಶುದ್ಧ ಸಾಹಿತ್ಯದಲ್ಲಿ ನಂಬಿಕೆ ಇರಿಸಿದ್ದು, ಎಲ್ಲ ಕಲಾ ಪ್ರಕಾರಗಳ ಪೈಕಿ ಸಂಗೀತದಲ್ಲಿ ಅದರಲ್ಲಿಯೂ ಶಾಸ್ತ್ರೀಯ ಸಂಗೀತದಲ್ಲಿ ಮಾತ್ರ ಇಂದಿಗೂ ಶುದ್ಧ ಭಾವನೆ ಜೀವಂತವಾಗಿದೆ. ಅದೇ ಶುದ್ಧತೆಯ ರಸ ಸಾಹಿತ್ಯದಲ್ಲಿ ಬರುವಾಗ ಜೀವನದ ಬೇರೆ ಬೇರೆ ಸಮಸ್ಯೆಗಳು ಸೇರಿ ಪರಿಶುದ್ಧವಾಗುವುದಿಲ್ಲ. ಯುವಕರು ಆ ಪರಿಶುದ್ಧತೆ ಮಟ್ಟವನ್ನು ತಲುಪಲು ಪ್ರಯತ್ನಿಸಬೇಕು ಎಂದು ಕರೆ ನೀಡಿದರು.
ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಮಾತನಾಡಿ, ಬಿಎಂಟಿಸಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಯುವ ಲೇಖಕರನ್ನು ಉತ್ತೇಜಿಸಲು ಸಾಹಿತ್ಯ ಸಮಾವೇಶಕ್ಕೆ 25 ಲಕ್ಷ ರೂ. ಹಾಗೂ ಕನ್ನಡ ಭವನ ನಿರ್ಮಾಣಕ್ಕಾಗಿ 5 ಕೋಟಿ ರೂ. ನೀಡಲಾಗುವುದು ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಯುವ ಸಾಹಿತಿಗಳಾದ ಎಸ್.ರಾಮಲಿಂಗೇಶ್ವರ, ಡಾ.ಸಿ.ನಂದಿನಿ, ಶಾಂತಿ ಕೆ.ಅಪಣ್ಣ, ಗುರಪ್ಪ ಗಾಣಿಗೇರ ಅವರಿಗೆ ತಲಾ 25 ಸಾವಿರ ರೂ. ನಗದು ಸಹಿತ “ಮಯೂರವರ್ಮ ಸಾಹಿತ್ಯ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ನೃಪತುಂಗ ಸಾಹಿತ್ಯ ಪ್ರಶಸ್ತಿಯು 7 ಲಕ್ಷದ ಒಂದು ರೂಪಾಯಿ ನಗದು ಒಳಗೊಂಡಿದೆ.
ಈ ವೇಳೆ ಪರಿಷತ್ತಿನ ಅಧ್ಯಕ್ಷ ಡಾ.ಮನು ಬಳಿಗಾರ್, ಸಾಹಿತಿ ಪ್ರಧಾನ ಗುರುದತ್, ಬಿಎಂಟಿಸಿ ಅಧ್ಯಕ್ಷ ನಾಗರಾಜ್ ಯಾದವ್, ಉಪಾಧ್ಯಕ್ಷ ಗೋವಿಂದರಾಜು, ಕೇಂದ್ರ ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ವ.ಚ.ಚನ್ನೇಗೌಡ ಹಾಜರಿದ್ದರು.