Advertisement

ಚುನಾವಣಾ ಕಾರ್ಯದಲ್ಲಿ ಲೋಪ ಬೇಡ: ಡೀಸಿ

07:10 AM Feb 05, 2019 | Team Udayavani |

ಕೋಲಾರ: ಲೋಕಸಭಾ ಚುನಾವಣಾ ಕಾರ್ಯಕ್ಕೆ ಈಗಾಗಲೇ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳುತ್ತಿದ್ದು, ನಿಮಗೆ ನೀಡಿರುವ ಹೊಣೆಗಾರಿಕೆಯನ್ನು ಸಮರ್ಪಕವಾಗಿ ನಿರ್ವಹಿಸಿ. ತಪ್ಪಿದಲ್ಲಿ ಮುಲಾಜಿಲ್ಲದೇ ಕ್ರಮ ಜರುಗಿಸಬೇಕಾಗುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಎಚ್ಚರಿಕೆ ನೀಡಿದರು.

Advertisement

ಸೋಮವಾರ ನಗರದಲ್ಲಿ ಚುನಾವಣಾ ಶಾಖೆಯಿಂದ ಸೆಕ್ಟರ್‌ ಹಾಗೂ ಪೊಲೀಸ್‌ ಅಧಿಕಾರಿಗಳಿಗಾಗಿ ಹಮ್ಮಿಕೊಂಡಿದ್ದ ಲೋಕಸಭಾ ಸಾರ್ವತ್ರಿಕ ಚುನಾವಣೆ ಕರ್ತವ್ಯ ನಿರ್ವಹಣೆ ಸಂಬಂಧ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು. ಚುನಾವಣೆ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಲೋಪ ಎಸಗಿದರೆ ಮುಲಾಜಿಲ್ಲದೆ ಶಿಸ್ತು ಕ್ರಮ ಜರುಗಿಸಲಾಗುವುದು, ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಿ ಎಂದರು.

ಸೆಕ್ಟರ್‌ ಅಧಿಕಾರಿಗಳ ನೇಮಕ: ಚುನಾವಣಾ ವೆಚ್ಚ ಪ್ರಕ್ರಿಯೆ ಹಾಗೂ ಮತದಾನ ಪರಿಷ್ಕರಣೆ ಸಿದ್ಧತೆ ನಡೆಸಬೇಕಾಗಿದೆ. ಈಗಾಗಲೇ ಕಳೆದ ಜ.16 ರಂದು ಪರಿಷ್ಕರಣಾ ಮತ ಪಟ್ಟಿ ಪ್ರಕಟಿಸಲಾಗಿದೆ. 1,593 ಮತಗಟ್ಟೆ ಗುರುತಿಸಲಾಗಿದೆ. ಗ್ರಾಮೀಣ ಭಾಗದಲ್ಲಿ 1,300 ಮತದಾರರಿಗೆ ಒಂದು ಮತಗಟ್ಟೆಯಾದರೆ, ನಗರ ಪ್ರದೇಶದಲ್ಲಿ 1,400 ಮಂದಿಗೆ ಒಂದು ಮತಗಟ್ಟೆ ಸ್ಥಾಪಿಸಲಾಗಿದೆ. 143 ಮಂದಿ ಸೆಕ್ಟರ್‌ ಆಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು.

ಸ್ಥಳ ಪರಿಶೀಲಿಸಿ: ನೀವು ಭೇಟಿ ನೀಡುವ ಮತಗಟ್ಟೆಗಳಲ್ಲಿ ನೀರು, ಶೌಚಾಲಯ, ರಸ್ತೆ ಸೇರಿದಂತೆ ಸೌಕರ್ಯ ಇರಬೇಕು. ಇಲ್ಲದಿದ್ದರೆ ಅಗತ್ಯ ಇರುವ ಸೌಕರ್ಯ ಕಲ್ಪಿಸಲು ತಹಶೀಲ್ದಾರ್‌ ಗಮನಕ್ಕೆ ತಂದು ಸರಿಪಡಿಸಿಕೊಳ್ಳಬೇಕು. ಸೆಕ್ಟರ್‌ ಅಧಿಕಾರಿಗಳು ಮುಂಜಾಗ್ರತ ಕ್ರಮವಾಗಿ ಸ್ಥಳ ಪರಿಶೀಲಿಸಿ ವರದಿ ಸಲ್ಲಿಸಬೇಕು ಎಂದು ಸೂಚಿಸಿದರು.

ಗಮನಹರಿಸಿ: ಪ್ರತಿ ಮತಗಟ್ಟೆ ವ್ಯಾಪ್ತಿಯಲ್ಲಿ 18 ವರ್ಷ ತುಂಬಿದವರು ಮತದಾರರ ಹೆಸರು ಮತದಾರರ ಪಟ್ಟಿಗೆ ಸೇರ್ಪಡೆಯಾಗಿರಬೇಕು. ಗಂಡು ಹೆಣ್ಣು ಜತೆಗೆ ತೃತೀಯ ಲಿಂಗಿಗಳು ಸೇರ್ಪಡೆಯಾಗದಿದ್ದರೆ ಕ್ರಮವಹಿಸಿ. ನಿಧನ ಹೊಂದಿದವರು, ಸ್ಥಳಾಂತರ ಮಾಡಿದವರ ಹೆಸರು ಪರಿಷ್ಕರಣೆ ಮಾಡಿರಬೇಕು. ಶೇಕಡವಾರು ಅನುಪಾತದ ಪ್ರಮಾಣ ಹೊಂದಾಣಿಕೆಗಳ ಕಡೆ ಗಮನಹರಿಸಬೇಕು ಎಂದು ಸಲಹೆ ನೀಡಿದರು.

Advertisement

ನಿಗಾವಹಿಸಿ: ಹಿಂದಿನ ಚುನಾವಣೆ ಮತದಾನದ ಪ್ರಮಾಣಕ್ಕಿಂತ ಕಡಿಮೆ ಅಥವಾ ಹೆಚ್ಚಾದರೆ ಅಧ್ಯಯನ ಮಾಡಿ ಕಾರಣ ತಿಳಿಸಬೇಕು. ಚುನಾವಣೆಯಲ್ಲಿ ಯಾವುದೇ ಪಕ್ಷ, ವ್ಯಕ್ತಿಯಾಗಲಿ ದುರ್ಬಳಕೆಗೆ ಮಾಡಿಕೊಳ್ಳಲು ಅವಕಾಶವಿಲ್ಲ. ಮತದಾರರನ್ನು ಆಮಿಷಕ್ಕೆ ಒಳಪಡಿಸಿ ಮತ ಪಡೆಯುವುದು ಕಾನೂನು ಬಾಹಿರ. ಚುನಾವಣಾ ಕಾನೂನು ಉಲ್ಲಂಘನೆಯಾದಂತೆ ಸೆಕ್ಟರ್‌ ಅಧಿಕಾರಿಗಳು ನಿಗಾವಹಿಸಬೇಕು ಎಂದು ಸೂಚಿಸಿದರು.

ಕರ್ತವ್ಯ ಲೋಪ ಬೇಡ: ಚುನಾವಣೆ ಸಂದರ್ಭದಲ್ಲಿ ಮುಕ್ತ ವಾತಾವರಣ ನಿರ್ಮಿಸಬೇಕಾದ ಜವಾಬ್ದಾರಿ ಸೆಕ್ಟರ್‌ ಅಧಿಕಾರಿಗಳ ಮೇಲಿದೆ. ಯಾವುದೇ ಅಹಿತಕರ ಘಟನೆಗಳು ಸಂಭವಿಸಿದ ಕೂಡಲೇ ಸಂಬಂಧಿಸಿದ ವ್ಯಕ್ತಿಗಳನ್ನು ಪೊಲೀಸರು ಬಂಧಿಸಬೇಕು ಎಂದು ಆಗ್ರಹಿಸಿದರು. ಸಂಪನ್ಮೂಲ ವ್ಯಕ್ತಿ ತಿಲಗಾರ್‌, ಚುನಾವಣಾ ಕರ್ತವ್ಯವನ್ನು ಅಧಿಕಾರಿಗಳು ಸಮರ್ಪಕವಾಗಿ ನಿರ್ವಹಿಸಬೇಕು. ನೀತಿನ ಸಂಹಿತೆ ಉಲ್ಲಂಘನೆಯಾದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ಮಾಹಿತಿ ಪಡೆಯಿರಿ: ಯಾವುದೇ ಒಂದು ಚುನಾವಣೆ ಸಂದರ್ಭದಲ್ಲಿ ಸಮಸ್ಯೆಗಳು ಎದುರಾಗುವುದು ಸಹಜ. ಆದರೆ ಅಧಿಕಾರಿಗಳು ಚುನಾವಣಾ ಕಾನೂನು ಬಗ್ಗೆ ಅರಿವು ಪಡೆದುಕೊಂಡರೆ ಚುನಾವಣಾ ಪ್ರಕ್ರಿಯೆಯನ್ನು ಸುಲಭವಾಗಿ ನಿರ್ವಹಿಸಬಹುದು. ಇದರಲ್ಲಿ ಪೊಲೀಸರ ಪಾತ್ರ ಮಹತ್ತರವಾದುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ರೋಹಿಣಿ ಕಟೋಚ್ಸೆಪಟ್, ಕೆಜಿಎಫ್‌ ಪೊಲೀಸ್‌ ವರಿಷ್ಠಾಧಿಕಾರಿ ಲೋಕೇಶ್‌ ಕುಮಾರ್‌, ಹೆಚ್ಚುವರಿ ವರಿಷ್ಠಾಧಿಕಾರಿ ರಾಜೇಂದ್ರ ಕುಮಾರ್‌, ಸಹಾಯಕ ಚುನಾವಣಾಧಿಕಾರಿ ಮಂಜುಳಾ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next