ತಿ.ನರಸೀಪುರ: ಮತದಾನ ಹಕ್ಕು ಹಾಗೂ ಜವಾಬ್ದಾರಿ ಮಹತ್ವವನ್ನು ತಿಳಿಸುವ ಸಲುವಾಗಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಜಾಗೃತಿ ಜಾಥಾ ನಡೆಸಿದರು.
ಪಟ್ಟಣದ ವಿದ್ಯೋದಯ ಕಾಲೇಜು ವೃತ್ತದಿಂದ ಆರಂಭಗೊಂಡ ಶಾಲಾ ಕಾಲೇಜು ವಿದ್ಯಾರ್ಥಿಗಳ ಜಾಗೃತಿ ಜಾಥಾ, ಕಾಲೇಜು ಜೋಡಿ ರಸ್ತೆ, ಲಿಂಕ್ ರಸ್ತೆ, ಪುರಸಭಾ ರಸ್ತೆ ಹಾಗೂ ತಾಲೂಕು ಕಚೇರಿ ರಸ್ತೆಗಳಲ್ಲಿ ಸಾಗಿತು. ಮೆರವಣಿಗೆ ಉದ್ದಕ್ಕೂ ಮತದಾನ ಮಹತ್ವ ಕುರಿತ ಫಲಕ ಹಿಡಿದು ಘೋಷಣೆ ಕೂಗಿದ ವಿದ್ಯಾರ್ಥಿಗಳು ಜನರ ಗಮನ ಸೆಳೆದರು.
ಜಾಥಾಕ್ಕೆ ಚಾಲನೆ ನೀಡಿದ ತಾಪಂ ಕಾರ್ಯನಿರ್ವಹಕ ಅಧಿಕಾರಿ ಡಾ.ಬಿ.ಎಸ್.ನಂಜೇಶ್, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಲು ಹಾಗೂ ಜವಾಬ್ದಾರಿಯುತ ಜನಪ್ರತಿನಿಧಿಯನ್ನು ಆಯ್ಕೆ ಮಾಡಲು ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡಬೇಕು. ಯಾರೂ ಕೂಡ ಮತದಾನದಿಂದ ದೂರ ಉಳಿಯಬಾರದು. ಈ ದಿಸೆಯಲ್ಲಿ ಗ್ರಾಪಂ ಗ್ರಾಮ ಸಭೆಗಳಲ್ಲಿಯೂ ಮತದಾನ ಮಹತ್ವ ತಿಳಿಸಿಕೊಡಲಾಗುತ್ತಿದೆ.
ಮಾ.11, 12 ಹಾಗೂ 13 ರಂದು ಮತದಾರರ ಜಾಗೃತಿ ಅಭಿಯಾನ ಕಾರ್ಯಕ್ರಮ ನಿಮಿತ್ತ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಪ್ರತಿ ಮನೆಗೂ ತೆರಳಿ ಮಾಹಿತಿ ನೀಡಲಿದ್ದಾರೆ. ಈ ಲೋಕಸಭಾ ಚುನಾವಣೆಯಲ್ಲಿ ಶೇ.100 ರಷ್ಟು ಮತದಾನ ಗುರಿ ಇಟ್ಟುಕೊಳ್ಳಲಾಗಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸ್ವಾಮಿ, ಸಿಡಿಪಿಒ ಬಿ.ಎನ್.ಬಸವರಾಜು, ಉದ್ಯೋಗ ಖಾತರಿ ಸಹಾಯಕ ನಿರ್ದೇಶಕ ನಿಂಗಯ್ಯ, ದೆಹಿಕ ಪರೀಕ್ಷಣಾಧಿಕಾರಿ ಮಹಾಂತಪ್ಪ ನಾಗೂರ, ಬಿಆರ್‌ಪಿ ಶಂಕರ್, ದೈಹಿಕ ಶಿಕ್ಷಕ ಬಿ.ಶಶೀಧರ ಇತರರಿದ್ದರು.