Advertisement

ಮತದಾನದಿಂದ ವಂಚಿತರಾಗಬೇಡಿ

09:43 PM Apr 09, 2019 | Lakshmi GovindaRaju |

ಆನೇಕಲ್‌: ಮತದಾನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಹತ್ವಪೂರ್ಣ ಅವಕಾಶವಾಗಿದ್ದು, ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡಬೇಕು. ಯಾರು ಕೂಡ ಮತದಾನದಿಂದ ವಂಚಿತರಾಗಬಾರದೆಂದು ಬೆಂಗಳೂರು ನಗರ ಜಿಪಂ ಉಪಕಾರ್ಯದರ್ಶಿ ಡಾ.ಸಿ.ಸಿದ್ಧರಾಮಯ್ಯ ಹೇಳಿದರು.

Advertisement

ತಾಲೂಕಿನ ಹೆಬ್ಬಗೋಡಿಯ ಎಸ್‌ಎಫ್ಎಸ್‌ ಕಾಲೇಜಿನಲ್ಲಿ ಪದವಿ ವಿದ್ಯಾರ್ಥಿಗಳಿಗೆ ತಾಲೂಕು ಸ್ವೀಪ್‌ ಸಮಿತಿ ಹಾಗೂ ಪೊಲೀಸ್‌ ಇಲಾಖೆ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಅಭಿಯಾನದಲ್ಲಿ ಇವಿಎಂ ಮತ್ತು ವಿವಿ ಪ್ಯಾಟ್‌ ಪ್ರಾತ್ಯಕ್ಷಿಕೆ ಹಾಗೂ ಅಣಕು ಮತದಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಬಲಿಷ್ಠ ಭಾರತ ನಿರ್ಮಿಸಿ: ಲೋಕಸಭಾ ಚುನಾವಣೆಗೆ ಸಂಬಂಧಿಸಿ ಸಾರ್ವಜನಿಕರು, ವಿದ್ಯಾರ್ಥಿಗಳು, ಕಾರ್ಮಿಕರಲ್ಲಿ ಮತದಾನದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.

ಚುನಾವಣೆಯಲ್ಲಿ ವಿದ್ಯಾರ್ಥಿಗಳು ಹಾಗೂ ಅವರ ಕುಟುಂಬದವರು ತಪ್ಪದೇ ಮತದಾನ ಮಾಡುವ ಮೂಲಕ ಯೋಗ್ಯ ವ್ಯಕ್ತಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ರಜೆ ಇದೆ ಎಂದು ಪ್ರವಾಸ ಕೈಗೊಳ್ಳುವುದನ್ನು ಬಿಟ್ಟು ನಿಮ್ಮ ಜವಾಬ್ದಾರಿಯನ್ನು ಅರಿತು ಮತದಾನ ಮಾಡಿ, ಬಲಿಷ್ಠ ಭಾರತ ನಿರ್ಮಾಣಕ್ಕೆ ಆದ್ಯತೆ ನೀಡಬೇಕೆಂದು ಹೇಳಿದರು.

ಚುನಾವಣೆ ಹಬ್ಬದಂತೆ ಆಚರಿಸಿ: ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಾಮ್‌ ನಿವಾಸ್‌ ಸೆಪಟ್‌ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಪ್ರಮುಖ ಅಂಶವಾಗಿದ್ದು, ನಿಮ್ಮ ನಾಯಕನ ಆಯ್ಕೆ ನಿಮ್ಮ ಕೈಯಲ್ಲಿದೆ.

Advertisement

ಪ್ರತಿಯೊಬ್ಬ ವಿದ್ಯಾರ್ಥಿ ಮತದಾರರಿಗೆ ಮತದಾನದ ಮಹತ್ವವನ್ನು ತಿಳಿಸಿಕೊಡುವ ಮೂಲಕ ಚುನಾವಣೆಯ ದಿನ ಮತ ಚಲಾಯಿಸಬೇಕು. ಪ್ರಪಂಚದಲ್ಲೇ ನಮ್ಮ ಚುನಾವಣೆ ವ್ಯವಸ್ಥೆ ಅತ್ಯುತ್ತಮವಾಗಿದೆ. ಚುನಾವಣೆಯನ್ನು ಪ್ರಜಾಪ್ರಭುತ್ವದ ಹಬ್ಬವನ್ನಾಗಿ ಆಚರಿಸಬೇಕೆಂದು ಹೇಳಿದರು.

ಇದೇ ವೇಳೆ ಲೋಕಸಭಾ ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡುತ್ತೇನೆಂದು ಸಹಿ ಸಂಗ್ರಹ ಅಭಿಯಾನ ನಡೆಯಿತು. ಅಧಿಕಾರಿಗಳು, ವಿದ್ಯಾರ್ಥಿಗಳು, ಸಾರ್ವಜನಿಕರು, ಮಾಧ್ಯಮ ಪ್ರತಿನಿಧಿಗಳು ಭಾಗವಹಿಸಿದ್ದರು.

ಸಮಾರಂಭದಲ್ಲಿ ಆನೇಕಲ್‌ ಉಪ ವಿಭಾಗದ ಡಿವೈಎಸ್‌ಪಿ ನಂಜುಂಡೇಗೌಡ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಟಿ.ಕೆ.ರಮೇಶ್‌, ಹೆಬ್ಬಗೋಡಿ ಇನ್ಸ್‌ಪೆಕ್ಟರ್‌ ಜಗದೀಶ್‌, ಸಿಐಇಡಿಎಸ್‌, ಗಮನ(ಹ್ಯೂಮನ್ಸ್‌ ಕಲೆಕ್ಟಿವ್‌)ಪ್ರತಿನಿಧಿ ಮಮತಾ, ತಾಲೂಕು ಸಂಯೋಜಕ ಕೆ.ಚಂದ್ರಶೇಖರ್‌, ನಾಗರಾಜು, ಕಾಲೇಜು ಪ್ರಾಂಶುಪಾಲರು, ಎಸ್‌ಸಿಸಿ ವಿದ್ಯಾರ್ಥಿಗಳು, ವಿವಿ ಪ್ಯಾಟ್‌ ಯಂತ್ರಗಳ ಮುಖ್ಯ ತರಬೇತುದಾರರು ಮುಂತಾದವರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next