ಬೆಂಗಳೂರು: ಸಾಲ ಮನ್ನಾ ವಿಷಯದಲ್ಲಿ ಪ್ರತಿಪಕ್ಷ ಹಾಗೂ ಮಾಧ್ಯಮಗಳು ತಪ್ಪು ಮಾಹಿತಿ ನೀಡಿ ರೈತರನ್ನು ಆತ್ಮಹತ್ಯೆಗೆ ಪ್ರೇರೆಪಿಸಬೇಡಿ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮನವಿ ಮಾಡಿದ್ದಾರೆ.
ಕೃಷ್ಣಾದಲ್ಲಿ ಜನತಾ ದರ್ಶನ ನಡೆಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು 34 ಸಾವಿರ ಕೋಟಿ ಸಾಲ ಮನ್ನಾ ಮಾಡಿರುವುದು ದರೋಡೆಕೋರರಿಗಲ್ಲ. ನನ್ನ ಮನೆಗೂ ತೆಗೆದುಕೊಂಡು ಹೋಗುತ್ತಿಲ್ಲ. ಬಿಜೆಪಿಯವರಿಗೆ ಮಾತನಾಡಲು ನಾಲಿಗೆ ಮೇಲೆ ಹಿಡಿತ ಇರಬೇಕು ಎಂದು ಖಾರವಾಗಿ
ಮಾತನಾಡಿದ್ದಾರೆ.
ಬಜೆಟ್‌ನಲ್ಲಿ ಉತ್ತರ ಕರ್ನಾಟಕ, ಹಳೆ ಮೈಸೂರು ಎಂದು ಯಾವುದೇ ತಾರತಮ್ಯ ಮಾಡಿಲ್ಲ. ನಾನು ಒಂದು ಜಾತಿಗೆ ಸೇರಿದ ಮುಖ್ಯಮಂತ್ರಿಯಲ್ಲ. ನಾನು ಅನ್ನದಾತರ ಮುಖ್ಯಮಂತ್ರಿ.ಮಾಧ್ಯಮಗಳು ಸರ್ಕಾರವನ್ನು ಟೀಕೆ ಮಾಡಲಿ.ಯಾವ ರೈತರೂ ಆತ್ಮಹತ್ಯೆ ಮಾಡಿಕೊಳ್ಳುವುದು ಬೇಡ ಎಂದು ಮನವಿ ಮಾಡಿದರು.
ನಾನು ವೈಯಕ್ತಿಕ ಆಸೆ ಆಕಾಂಕ್ಷೆ ಇಟ್ಟುಕೊಂಡು ಯೋಜನೆ ರೂಪಿಸುತ್ತಿಲ್ಲ. ನಾನು ಎಲ್ಲಿಯೂ ಓಡಿ ಹೋಗುವುದಿಲ್ಲ. ಸಾಲ ಮನ್ನಾ ಬಗ್ಗೆ ಸದನದಲ್ಲಿ ಚರ್ಚಿಸಲು ಸಿದ್ದವಿದ್ದೇನೆ. ಇಂಧನ ದರ ಏರಿಕೆಯ ಬಗ್ಗೆ ಸಂಪುಟದಲ್ಲಿಯೇ ಚರ್ಚಿಸಿ ತೀರ್ಮಾನ ಮಾಡಲಾಗಿದೆ. ರೈತರಿಗಾಗಿ ಹತ್ತು ಪೈಸೆ ಕೊಡಲು ಜನರಿಗೆ ಕಷ್ಟವೇ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಸರ್ಕಾರದ ಯಾವ ಯೋಜನೆಗಳನ್ನೂ ನಿಲ್ಲಿಸುವುದಿಲ್ಲ. ಬಿಜೆಪಿಯವರು ನನ್ನ ಹೆಸರು ಕೆಡಿಸಬೇಕೆಂದು ಅಂದುಕೊಂಡಿದ್ದರೆ ಅದು ಸಾಧ್ಯವಿಲ್ಲ ಎಂದು ಹೇಳಿದರು.