Advertisement

ಹಾಲು ಮಣ್ಣಪಾಲು ಮಾಡದಿರಿ: ಸ್ವಾಮೀಜಿ

09:24 AM Jul 29, 2017 | |

ದಾವಣಗೆರೆ: ಹಾಲು ಅಮೃತಕ್ಕೆ ಸಮಾನ ಅಂತಾರೆ, ಅಂತಹ ಹಾಲನ್ನು ನೀವು ದೇವರ ಹೆಸರಲ್ಲಿ ಮಣ್ಣು ಪಾಲು ಮಾಡಬೇಡಿ ಎಂದು ವಿರಕ್ತ ಮಠದ ಬಸವಪ್ರಭು ಸ್ವಾಮೀಜಿ ಮನವಿ ಮಾಡಿದ್ದಾರೆ.

Advertisement

ವಿರಕ್ತ ಮಠದಲ್ಲಿ ಶುಕ್ರವಾರ ಬಸವ ಕೇಂದ್ರ ನಾಗರ ಪಂಚಮಿ ಪ್ರಯುಕ್ತ ಹಮ್ಮಿಕೊಂಡಿದ್ದ ಮಕ್ಕಳಿಗೆ ಹಾಲು ಕುಡಿಸುವ ಹಬ್ಬದಲ್ಲಿ ಮಕ್ಕಳಿಗೆ ಹಾಲು ವಿತರಿಸಿ, ಮಾತನಾಡಿದ ಅವರು, ಅಪ್ಪನ ಪಾಲು, ಅಮ್ಮನ ಪಾಲು, ಅಣ್ಣನ ಪಾಲು ಎಂದು ಅಮೃತ ಸಮನಾದ ಹಾಲನ್ನು ಮಣ್ಣುಪಾಲು ಮಾಡಬೇಡಿ. ಮಕ್ಕಳು ದೇವರ ಸಮಾನ. ಅವರ ಹೃದಯದಲ್ಲಿ ದೇವರಿದ್ದಾನೆ. ಅವರಿಗೆ ಹಾಲು ಕುಡಿಸುವ ಮೂಲಕ ದೇವರನ್ನ ಸಂತೃಪ್ತಿ ಪಡಿಸಿ ಎಂದರು.

ನಾವು ಹಿಂದುಳಿಯಲು ನಮ್ಮಲ್ಲಿರುವ ಮೂಢ ನಂಬಿಕೆಗಳೇ ಕಾರಣ. ನಾವು ಎಲ್ಲವನ್ನೂ ಕುರುಡಾಗಿ ನಂಬುತ್ತೇವೆ. ಗಣಪತಿ ಹಾಲು ಕುಡಿದ ಎಂದು ಕೆಲ ದಿನಗಳ ಕಾಲ ಹಬ್ಬಿಸಿದರು. ಆಗ ಎಲ್ಲರೂ ಹಾಲು ಸುರಿದೆವು. ಇಂತಹ ಅನೇಕ ಮೌಢಾಚರಣೆ ನಮ್ಮಲ್ಲಿವೆ. ಸರ್ಕಾರ ಇಂತಹ
ನಂಬಿಕೆ, ಆಚರಣೆ ನಿರ್ಮೂಲನೆಗೆ ಕಾನೂನು ಜಾರಿ ಮಾಡಬೇಕು ಎಂದು ಅವರು ಒತ್ತಾಯಿಸಿದರು. ಶ್ರಾವಣ ಮಾಸದಿಂದ ಹಬ್ಬಗಳು ಸಾಲು ಸಾಲಾಗಿ ಬರುತ್ತವೆ. ಶ್ರಾವಣ ಶುಕ್ರವಾರ, ಮಂಗಳವಾರ, ಸೋಮವಾರ, ಪಂಚಮಿ ಎನ್ನುತ್ತಾ ಮಹಿಳೆಯರು ಉಪವಾಸ ಮಾಡುತ್ತ ದೇಹ ದಂಡಿಸಿ, ಅನಾರೋಗ್ಯಕ್ಕೆ ಒಳಗಾತ್ತಾರೆ. ಇದು ಸರಿಯಲ್ಲ. ದೇವರ ಮೇಲೆ ಶ್ರದ್ಧೆ ಭಕ್ತಿ ಇರಬೇಕೆ ವಿನಃ ಅಂಧಶ್ರದ್ಧೆ ಇರಬಾರದು ಎಂದು ಅವರು ಕಿವಿಮಾತು ಹೇಳಿದರು.

ಗದಗದ ಟಿ.ಎಂ. ಪಂಚಾಕ್ಷರಿ ಶಾಸ್ತ್ರಿಗಳು ಮಾತನಾಡಿ, ದೇವರಿಗೆ ಸಮನಾದ ಮಕ್ಕಳಿಗೆ ಹಾಲನ್ನು ಕುಡಿಸಿ, ದೇವರನ್ನು ಸಂತೃಪ್ತಿ ಪಡಿಸುವ ಈ ಕಾರ್ಯ ಶ್ಲಾಘನೀಯ. ಹಬ್ಬಗಳು ಮನಸ್ಸನ್ನು ಅರಳಿಸಬೇಕೆ ವಿನಃ, ಮನಸ್ಸನ್ನು ಅಂಧಕಾರದಲ್ಲಿ ಇಡಬಾರದು ಎಂದರು.

ಜಿಲ್ಲಾ ಬಸವ ಕೇಂದ್ರದ ಅಧ್ಯಕ್ಷ ಎಂ.ಜಯಕುಮಾರ್‌, ಬಸವಾನಂದ ಸ್ವಾಮೀಜಿ, ಜಯದೇವ ಪ್ರಸಾದ ನಿಲಯದ ಐನಳ್ಳಿ ನಾಗರಾಜ್‌, ಶಿವಯೋಗಿ ಮಂದಿರದ ಕಾರ್ಯದರ್ಶಿ ಪಲ್ಲಾಗಟ್ಟಿ ಕೊಟ್ರೇಶಪ್ಪ, ಉಪನ್ಯಾಸಕ ಎಂ.ಕೆ. ಬಕ್ಕಪ್ಪ, ವಿರಕ್ತ ಮಠದ ಧರ್ಮದರ್ಶಿ ಸಮಿತಿ ಉಪಾಧ್ಯಕ್ಷ ಹಾಸಬಾವಿ
ಕರಿಬಸಪ್ಪ, ತಿಪ್ಪಣ್ಣ, ಮುಖ್ಯೋಪಾಧ್ಯಾಯನಿ ಲತಾ ಗುರುದೇವ್‌ ಇತರರು ಈ ಸಂದರ್ಭದಲ್ಲಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next