ಕಲಬುರಗಿ: ಸ್ವಾಮಿ ವಿವೇಕಾನಂದರು ಹೇಳಿದಂತೆ ಗುರಿ ಮುಟ್ಟುವವರೆಗೆ ಹಿಂತಿರುಗಿ ನೋಡದಿದ್ದಾಗ ಮಾತ್ರ ಯಶಸ್ಸು ಸಾಧ್ಯ ಎಂದು ಸಹಾಯಕ ಪ್ರಾಧ್ಯಾಪಕ ಡಾ| ವೀರೇಶ ಕೋರವಾರ ಹೇಳಿದರು.
ನಗರದ ದೊಡ್ಡಪ್ಪ ಅಪ್ಪಾ ವಸತಿ ಸ್ವತಂತ್ರ್ಯ ಪದವಿ ಪೂರ್ವ ವಿಜ್ಞಾನ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ವಿದ್ಯಾರ್ಥಿ ಜೀವನದಲ್ಲಿ ಯಶಸ್ಸು ಸಾಧಿಸಬೇಕಾದರೆ ಶ್ರದ್ಧೆಯಿಂದ ಕಠಿಣವಾಗಿ ಓದಬೇಕು. ಬಹು ಮುಖ್ಯವಾಗಿ ವ್ಯಕ್ತಿ ಉದ್ಯೋಗ ಮತ್ತು ಹಣ ಗಳಿಕೆ ಬೆನ್ನು ಹತ್ತಬಾರದು ಜತೆಗೆ ಕುಟುಂಬದ ಹಾಗೂ ಸಮಾಜದ ಸಂತೃಪ್ತಿಗಾಗಿ ಬದುಕಬೇಕು ಎಂದು ಮಾರ್ಮಿಕವಾಗಿ ನುಡಿದರು.
ಪಾಲಿಕೆ ಮಾಜಿ ಸದಸ್ಯ ಹಾಗೂ ವಿಕಾಸ ಅಕಾಡೆಮಿಯ ಉಮೇಶ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳು ಹಿರಿಯರಿಗೆ ಗೌರವಿಸಬೇಕು ಮತ್ತು ಹಿರಿಯರ ಆಶೀರ್ವಾದ ಪಡೆಯಬೇಕು. ಭಾರತ ದೇಶದ ಸಂಸ್ಕೃತಿ ಅರಿಯಬೇಕಾದರೆ ಗಾಂಧೀಜಿ, ವಿವೇಕಾನಂದ, ಬಸವಣ್ಣನವರನ್ನು ಅರಿಯಬೇಕು. ಮನುಷ್ಯ ಎಷ್ಟು ವರ್ಷ ಬದುಕುತ್ತಾನೆ ಎಂಬುದಕ್ಕಿಂತ ಹೇಗೆ ಬದುಕಿದ್ದಾನೆ ಎಂಬುದು ಮುಖ್ಯ. ತನಗಾಗಿ ಬದುಕುವುದಕ್ಕಿಂತ ಸಮಾಜಕ್ಕಾಗಿ ಬದುಕಬೇಕು. ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿರಬೇಕು ಎಂದು ಸಲಹೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಶರಣ ಬಸವೇಶ್ವರ ವಿಜ್ಞಾನ ಮಾಹಾವಿದ್ಯಾಲಯದ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ| ರಾಮಕೃಷ್ಣರೆಡ್ಡಿ, ವಿದ್ಯಾರ್ಥಿ ಜೀವನ ಎಂದರೆ ಕೇವಲ ಅಂಕಗಳಿಸುವುದಾಗಲಿ ಅಥವಾ ಉದ್ಯೋಗ ಮಾಡುವುದಾಗಲಿ ಅಷ್ಟೆ ಅಲ್ಲ. ಸಮಾಜದ ಸೇವೆಗಾಗಿ ಇರಬೇಕು. ವಿದ್ಯಾರ್ಥಿಗಳು ವಿವೇಕಾನಂದರಂತಹ ಮಹಾತ್ಮರನ್ನು ಮಾದರಿಯಾಗಿ ಇಟ್ಟುಕೊಳ್ಳಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ವಿಜ್ಞಾನ ಉತ್ಸವ 2018ರಲ್ಲಿ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಪೂಜಾ ಪಾಟೀಲ ಸ್ವಾಗತಿಸಿದರು. ಭಾಗ್ಯಶ್ರೀ ವಂದಿಸಿದರು. ಸಪ್ನಾ ಸೇರಿದಂತೆ ಇತರರು ಅವರು ವಿವೇಕಾನಂದರ ಕುರಿತು ಮಾತನಾಡಿದರು. ಶೃಷ್ಟಿ ಕಾರ್ಯಕ್ರಮ ನಿರ್ವಹಿಸಿದರು.