ಕಲಬುರಗಿ: ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರಕಾರ ಧರ್ಮ ವಿಭಜನೆಗೊಳಿಸಿ ಕೇಂದ್ರಕ್ಕೆ ಶಿಫಾರಸು ಮಾಡಿ ಕೈ ತೊಳೆದುಕೊಂಡಿದೆ. ಭಕ್ತಕೋಟಿ ಜನ ಇಂತಹ ಧರ್ಮ ವಿಭಜಕ ಶಕ್ತಿಗಳಿಗೆ ಕಿವಿಗೊಡಬಾರದು ಎಂದು ಕಾಶೀ ಜಗದ್ಗುರು ಡಾ| ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ತಾಲೂಕಿನ ಪಾಳಾ ಗ್ರಾಮದಲ್ಲಿ ಪೂಜ್ಯರಾದ ಲಿಂ. ಮಳೇಂದ್ರ ಶಿವಾಚಾರ್ಯ ಮಹಾಸ್ವಾಮೀಜಿ ಪುಣ್ಯಸ್ಮರಣೋತ್ಸವ, ಮೂಲಕಟ್ಟಿಮನಿ ಹಿರೇಮಠದ ಸಂಸ್ಥಾನದ ಒಡೆಯ ಡಾ| ಗುರುಮೂರ್ತಿ ಶಿವಾಚಾರ್ಯರ 26ನೇ ವರ್ಷದ ಪಟ್ಟಾಧಿಕಾರ ವರ್ಧಂತಿ ಮಹೋತ್ಸವದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಧರ್ಮ ಒಡೆಯುವುದು ರಾಜಕೀಯ. ಧರ್ಮವಂತರನ್ನು ಒಗ್ಗೂಡಿಸಿ, ಧರ್ಮ ದಾರಿಯಲ್ಲಿ ಕರೆದುಕೊಂಡು ಹೋಗುವುದು ಧರ್ಮ. ಧರ್ಮ ವಿಮುಖರಾಗದೆ, ಧರ್ಮದ ದಾರಿಯಲ್ಲಿ ಭಕ್ತರು ಸಾಗಬೇಕು ಎಂದು ಹೇಳಿದರು.
ಶ್ರೀ ಮಠದ ಒಡೆಯ ಡಾ| ಗುರುಮೂರ್ತಿ ಶಿವಾಚಾರ್ಯರು ನೇತೃತ್ವ ವಹಿಸಿದ್ದರು. ಪೂಜ್ಯರಾದ ಜಿಲ್ಲಾ ಶಿವಾಚಾರ್ಯರ ಘಟಕದ ಅಧ್ಯಕ್ಷರು ಆಗಿರುವ ಶ್ರೀನಿವಾಸ ಸರಡಗಿಯ ರೇವಣಸಿದ್ಧ ಶಿವಾಚಾರ್ಯರು, ಹೊನ್ನಕಿರಣಗಿಯ ಚಂದ್ರಗುಂಡ ಶಿವಾಚಾರ್ಯರು, ಓಂಕಾರ ಬೇನೂರಿನ ಸಿದ್ಧರೇಣುಕ ಶಿವಾಚಾರ್ಯರು, ಸ್ಟೇಶನ್ ಬಬಲಾದನ ರೇವಣಸಿದ್ಧ ಶಿವಾಚಾರ್ಯರು, ತೊನಸನಹಳ್ಳಿಯ ರೇವಣಸಿದ್ಧಚರಂತೇಶ್ವರ ಶಿವಾಚಾರ್ಯರು, ದಂಡಗುಂಡದ ಸಂಗನಬಸವ ಶಿವಾಚಾರ್ಯರು ಹಾಗೂ ಸೇಡಂ, ನೀಲೂರು ಸೇರಿದಂತೆ ಹರ-ಗುರು-ಚರಮೂರ್ತಿಗಳು ಹಾಜರಿದ್ದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಾದ ಶಕಾಪುರದ ಕೃಷಿ ಋಷಿ ಶಿವಾಚಾರ್ಯ ರತ್ನಶ್ರೀ ಸಿದ್ಧರಾಮ ಶಿವಾಚಾರ್ಯರು, ಹಳ್ಳಿಖೇಡದ ಜಂಗಮ ಸಮಾಜದ ಅಧ್ಯಕ್ಷ ಡಾ| ಅಶೋಕ ಬಿ. ಹಾಲಾ, ಡಾ| ಬಸವರಾಜ ಎಸ್. ಮಗಿ ಪಾಳಾ, ಪಿಎಸ್‌ಐ ಡಾ| ವೀರಣ್ಣ ಎಸ್. ಮಗಿ ಪಾಳಾ, ಶಹಾಪುರದ ಡಾ| ಶರಣು ಬಿ. ಗದ್ದುಗೆ,
ದಾಲ್‌ಮಿಲ್ ಅಸೋಸಿಯೇಶನ್ ಅಧ್ಯಕ್ಷ ಡಾ| ಚಿದಂಬರಾವ ಪಾಟೀಲ ಮರಗುತ್ತಿ, ಸುರುಪುರದ ವೀರಶೈವ ಸಮಾಜದ ಅಧ್ಯಕ್ಷ ಡಾ| ಸುರೇಶ ಆರ.ಸಜ್ಜನ್, ಜಿ.ಪಂ. ಸದಸ್ಯ ಡಾ| ಅರುಣಕುಮಾರ ಪಾಟೀಲ ಬೆಣ್ಣೆಶಿರೂರ, ಹೈ.ಕ.ಶಿ. ಸಂಸ್ಥೆ ನಿರ್ದೇಶಕ ಡಾ| ಶರಣಬಸಪ್ಪ ಕಾಮರಡ್ಡಿ ಅವರಿಗೆ ಮಳೇಂದ್ರ ಶ್ರೀ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.
ಕಾರ್ಯಕ್ರಮಕ್ಕೂ ಮುನ್ನ ಕಾಶೀ ಜಗದ್ಗುರುಗಳನ್ನು ಸಾರೋಟಾದಲ್ಲಿ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು. ಕಾರ್ಯಕ್ರಮದ ಅಂಗವಾಗಿ 11 ದಿನಗಳ ಕಾಲ ಶ್ರೀ ಗುರು ಮಳೇಂದ್ರ ಶಿವಾಚಾರ್ಯ ಪುರಾಣ ನಡೆಯಿತು. ಅಪಾರ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು ಎಂದು ಶ್ರೀ ವಿಶ್ವಾರಾಧ್ಯ ಸೇವಾ ಸಮಿತಿ ಸಂಘಟನಾ
ಕಾರ್ಯದರ್ಶಿ ಬಸವರಾಜ ಶೀಲವಂತ ಅಂಬಲಗಿ ತಿಳಿಸಿದ್ದಾರೆ.