Advertisement

ಕಲ್ಲು ಗಣಿಗಾರಿಕೆಗೆ ಪರವಾನಗಿ ಬೇಡ

11:34 AM Mar 14, 2019 | |

ಸಾಗರ: ಹೊಸನಗರ ತಾಲೂಕಿನ ಹುಂಚ ಗ್ರಾಮದ ಸ.ನಂ. 69ರಲ್ಲಿ ಖಾಸಗಿಯವರಿಗೆ ಕಲ್ಲು ಗಣಿಗಾರಿಕೆಗೆ ಪರವಾನಗಿ ನೀಡಿರುವುದನ್ನು ತಕ್ಷಣ ರದ್ದುಪಡಿಸುವಂತೆ ಒತ್ತಾಯಿಸಿ ಬುಧವಾರ ಹುಂಚ ಗ್ರಾಮಭೂಮಿ ಸಂರಕ್ಷಣಾ ಸಮಿತಿ ಮತ್ತು ವೃಕ್ಷಲಕ್ಷ ಆಂದೋಲನ ಕರ್ನಾಟಕ ವತಿಯಿಂದ ಉಪ ವಿಭಾಗಾಧಿಕಾರಿಗಳ ಕಚೇರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಪಶ್ಚಿಮ ಘಟ್ಟ ಕಾರ್ಯಪಡೆಯ ಮಾಜಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ಹುಂಚ ಕ್ಷೇತ್ರದ ಬಳಿ ಖಾಸಗಿಯವರಿಗೆ ಕಲ್ಲು ಗಣಗಾರಿಕೆಗೆ ರಾಜ್ಯ ಸರ್ಕಾರ ಪರವಾನಗಿ ನೀಡುವ ಅವೈಜ್ಞಾನಿಕ ನಿರ್ಧಾರ ಕೈಗೊಂಡಿದೆ. ಇದರಿಂದ ಕುಮದ್ವತಿ ಸೇರಿದಂತೆ ಪಂಚನದಿಗಳ ಜಲಮೂಲಕ್ಕೆ ಕುತ್ತುಂಟಾಗುವ ಜೊತೆಗೆ ವ್ಯಾಪಕ ಪರಿಸರ ನಾಶವಾಗುತ್ತದೆ. ಗಣಿಗಾರಿಕೆ ನಡೆಸಲು ಅನುಮತಿ ಪಡೆದಿರುವ ಪ್ರದೇಶದ ಸುತ್ತಮುತ್ತ ಜಲಸಮೃದ್ಧಿಯುಳ್ಳ 6 ಕೆರೆಗಳು ಇವೆ ಎಂದು ತಿಳಿಸಿದರು.

ಶರಾವತಿ ಕಣಿವೆ ಅಧ್ಯಯನ ವರದಿಯಲ್ಲಿ ನದಿಮೂಲಗಳ ಬಳಿ ಗಣಿಗಾರಿಕೆಗೆ ಅವಕಾಶ ಬೇಡ ಎಂಬ ಉಲ್ಲೇಖವಿದೆ. ಹೊಸನಗರ ತಾಲೂಕಿನಲ್ಲಿ ಭೂಕಂಪ ಪ್ರಕರಣಗಳು ಘಟಿಸಿವೆ. ಭೂಕುಸಿತಗಳಾಗಿವೆ. ನದಿಗಳು ಸಾಯುತ್ತಿವೆ. ಮಂಗನ ಕಾಯಿಲೆ ವ್ಯಾಪಕವಾಗಿದೆ. ಇನ್ನಷ್ಟು ಅರಣ್ಯ ನಾಶ ಬೇಡ ಎಂದು ಪರಿಸರ ತಜ್ಞರು ಅಭಿಪ್ರಾಯ ನೀಡಿದ್ದಾರೆ. ಜೊತೆಗೆ ಹುಂಚ ಬೆಟ್ಟದಿಂದ ಕೇವಲ 4 ಕಿಮೀ ದೂರದಲ್ಲಿ ಶೆಟ್ಟಿಹಳ್ಳಿ ಅಭಯಾರಣ್ಯವಿದೆ. 2010ರ ಹಿಂದಿನ ಸರ್ಕಾರಿ ದಾಖಲೆಯಲ್ಲಿ ಅರಣ್ಯ ಎಂದು ನಮೂದಿಸಲಾಗಿತ್ತು. ಈಗ ಆರ್‌ಟಿಸಿ ದಾಖಲೆಯಲ್ಲಿ ಅರಣ್ಯ ಎಂಬ ಶಬ್ದ ಮಾಯವಾಗಿದ್ದು, ಯಾರಧ್ದೋ ಉಪಕಾರಕ್ಕೆ ಇಂತಹ ನಿರ್ಧಾರ ಕೈಗೊಳ್ಳಲಾಗುತ್ತಿದೆ ಎಂದು ದೂರಿದರು.

ಹೊಸನಗರ ಅರಣ್ಯ ಇಲಾಖೆ ಹುಂಚ ಗಣಿಗಾರಿಕೆಗೆ ಅವಕಾಶ ಬೇಡ ಎಂದು 2017ರಲ್ಲೇ ವರದಿ ನೀಡಿತ್ತು. ಅರಣ್ಯ ಅನುಮತಿ ಇಲ್ಲದೇ ಹೇಗೆ ಗಣಿಗಾರಿಕೆಗೆ ಪರವಾನಗಿ ನೀಡಲು ಸಾಧ್ಯ ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಹುಂಚ ಕಲ್ಲು ಗಣಿಗಾರಿಕೆಗೆ ಪರವಾನಗಿ ನೀಡುವಲ್ಲಿ ಅಕ್ರಮ ನಡೆದಿದೆ. ರೆವಿನ್ಯೂ ದಾಖಲೆ ತಿದ್ದಲಾಗಿದೆ. ಇದು ಅರಣ್ಯ ಭೂಮಿ ಅಲ್ಲ ಎಂದು ತಪ್ಪು ಮಾಹಿತಿ ನೀಡಲಾಗಿದೆ ಎಂದು ಸ್ಥಾನಿಕ ಪರಿಸರ ಕಾರ್ಯಕರ್ತರು ಅಭಿಪ್ರಾಯ ಪಟ್ಟಿದ್ದಾರೆ.

ಹುಂಚ ಶ್ರೀಗಳು ಸಹ ಯೋಜನೆಗೆ ಅನುಮತಿ ನೀಡಿರುವುದನ್ನು ರದ್ದು ಮಾಡಬೇಕು ಎಂದು ಹೇಳಿದ್ದಾರೆ. ಶಾಸಕ ಆರಗ ಜ್ಞಾನೇಂದ್ರ ಅವರು ಕಲ್ಲು ಗಣಿಗಾರಿಕೆ ಬೇಡ ಎಂದು ಲಿಖೀತ ಅಭಿಪ್ರಾಯ ನೀಡಿದ್ದಾರೆ. ಇಷ್ಟಾಗ್ಯೂ ಕಲ್ಲು ಗಣಿಗಾರಿಕೆಗೆ ಅವಕಾಶ ನೀಡಿರುವ ಉದ್ದೇಶ ಏನು ಎಂದು ಪ್ರಶ್ನಿಸಿದರು. 

Advertisement

ಈ ಹಿಂದೆ ಗ್ರಾಪಂ ಅಧ್ಯಕ್ಷೆ ಚಂದ್ರಕಲಾ ನೇತೃತ್ವದಲ್ಲಿ ಗಣಿಗಾರಿಕೆ ಕೈ ಬಿಡಲು ಆಗ್ರಹಿಸಿ ಉಪ ತಹಶೀಲ್ದಾರರಿಗೆ ಜನರು ಮನವಿ ಸಲ್ಲಿಸಿದ್ದಾರೆ. ಹುಂಚ, ಹೊಂಡಲಗದ್ದೆ, ನಾಗರಹಳ್ಳಿ, ಅಳಲೆಕೊಪ್ಪ, ಈರಿನಬೈಲು, ಮಳಿಕೊಪ್ಪ, ಕುಬವಳ್ಳಿ ಈ ಹಳ್ಳಿಗಳ ರೈತರು, ಮಹಿಳೆಯರು ಪ್ರತಿಭಟನೆ ಜಾಥಾ-ಸಭೆಯಲ್ಲಿ ಗಣಿಗಾರಿಕೆ ರದ್ದುಪಡಿಸುವಂತೆ ಒತ್ತಾಯಿಸಿದ್ದಾರೆ. ಆದರೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅನುಮತಿ ನೀಡಿದೆ. ನೀಡಿರುವ ಅನುಮತಿಯನ್ನು ತಕ್ಷಣ ರದ್ದುಪಡಿಸಬೇಕು. ಇಲ್ಲವಾದಲ್ಲಿ ಪರಿಸರ ಸಂಘಟನೆಗಳು ಸ್ಥಳೀಯ ಪರಿಸರವಾದಿಗಳು, ಗ್ರಾಮಸ್ಥರ ನೇತೃತ್ವದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ವೃಕ್ಷಲಕ್ಷ ಆಂದೋಲನ ಸ್ಥಳೀಯ ಘಟಕದ ಬಿ.ಎಚ್‌. ರಾಘವೇಂದ್ರ, ಕವಲಕೋಡು ವೆಂಕಟೇಶ್‌, ಹುಂಚಾ ಗ್ರಾಮ ಭೂಮಿ ಸಂರಕ್ಷಣಾ ಸಮಿತಿ ಸಂಚಾಲಕ ನಾಗೇಂದ್ರ, ಈರನಾಯ್ಕ ಹುಂಚ, ಸತೀಶ್‌ ಈರನಬೈಲು, ಚಂದ್ರಶೇಖರ್‌ ಹೊಂಡಲಗದ್ದೆ, ಗ್ರಾಪಂ ಮಾಜಿ ಅಧ್ಯಕ್ಷೆ ಕಾಂತಾಮಣಿ, ಯುವರಾಜ ಮಳಲಿಕೊಪ್ಪ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next