ಶ್ರೀರಂಗಪಟ್ಟಣ: ಕೆಆರ್‌ಎಸ್ ಜಲಾಶಯದಿಂದ ಕಾವೇರಿ ನದಿ ಮೂಲಕ ತಮಿಳುನಾಡಿಗೆ ನೀರು ಹರಿಸಿರುವ ಕ್ರಮ ಖಂಡಿಸಿ ಕರವೇ ಕಾರ್ಯಕರ್ತರು ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡರ ಬಣ)ತಾಲೂಕು ಅಧ್ಯಕ್ಷ ಚಂದಗಾಲು ಶಂಕರ್ ನೇತೃತ್ವದಲ್ಲಿ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಸರ್ಕಾರ ಹಾಗೂ ನೀರಾವರಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕುಡಿವ ನೀರು ಕೊಡಿ: ಕಳೆದ ಮೂರು ದಿನಗಳಿಂದ ತಮಿಳುನಾಡಿಗೆ 5 ಸಾವಿರ ಕ್ಯೂಸೆಕ್‌ಗೂ ಹೆಚ್ಚಿನ ನೀರನ್ನು ಹರಿಸಲಾಗುತ್ತಿದೆ. ಜನವರಿ ಹಾಗೂ ಫೆಬ್ರವರಿ ತಿಂಗಳಲ್ಲಿ ತಮಿಳುನಾಡಿಗೆ ನೀರು ಕೊಟ್ಟಿಲ್ಲ ಎಂದು ಬೇಜವಾಬ್ದಾರಿಯಿಂದ ಅಧಿಕಾರಿಗಳು ಇಲ್ಲಿನ ರೈತರ ಸಂಕಷ್ಟಕ್ಕೆ ಸ್ಪಂದಿಸದೆ, ನದಿ ಮೂಲಕ ನೀರು ಹರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಜನ ಜಾನು ವಾರುಗಳಿಗೆ ಕುಡಿಯಲು ಹಾಗೂ ಕಟಾವಿಗೆ ಬಂದ ಬೆಳೆಗಳಿಗೆ ನಾಲೆ ಮೂಲಕ ನೀರು ಹರಿಸುವಂತೆ ಸ್ಥಳೀಯ ರೈತರು ಅಧಿಕಾರಿಗಳಿಗೆ ಮನವಿ ಮಾಡಿದರೂ ಗಮನ ಹರಿಸದೆ ತಮಿಳುನಾಡಿನ ಹಿತ ಕಾಯಲು ಹೊರಟಿದ್ದಾರೆ ಎಂದು ಶಂಕರ್ ಆರೋಪ ಮಾಡಿದರು.
ಉಗ್ರ ಪ್ರತಿಭಟನೆ: ಸರ್ಕಾರ ಇದೇ ರೀತಿ ನೀರು ಹರಿಸುವುದಾದರೇ ನಾಲೆಗಳ ಮೂಲಕ ಇಲ್ಲಿನ ರೈತರಿಗೆ ಕಟ್ಟು ಪದ್ಧತಿ ಯಲ್ಲಿ ನೀರು ಹರಿಸಬೇಕು. ಇಲ್ಲದಿದ್ದರೆ ಜಲಾಶಯದ ಮುಂಭಾಗ ದಲ್ಲಿ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಸಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ವೇದಿಕೆಯ ಉಪಾ ಧ್ಯಕ್ಷ ರಾಜಶೇಖರ್, ಲೋಕೇಶ್, ದೊಡ್ಡಪಾಳ್ಯ ಶಿವಕುಮಾರ್, ಗೋವಿಂದ ರಾಜು, ತಿಮ್ಮರಾಜು, ಪ್ರೇಮ್‌ಕುಮಾರ್, ಸೋಮಶೇಖರ್ ಕಾರ್ಯಕರ್ತರು ಉಪಸ್ಥಿತರಿದ್ದರು.