Advertisement

ಶ್‌…. ಮನೆಯೊಳಗೆ ಅನಗತ್ಯ ಸದ್ದು ಬೇಡವೇ ಬೇಡ !

04:05 PM Feb 05, 2018 | Team Udayavani |

ಎಷ್ಟೇ ಉತ್ತಮ ಹಾಡನ್ನು ಕೇಳುತ್ತಿದ್ದರೂ ಒಂದೊಂದು ಸಂದರ್ಭದಲ್ಲಿ ಮನಸ್ಥಿತಿ ಎಂಬುದು ನಿಯಂತ್ರಣ ತಪ್ಪಿ  ಒತ್ತಡ ಮುತ್ತಿಕೊಂಡಾಗ ಏನೂ ಬೇಡ, ಶಾಂತಿಯೊಂದೇ ಸಾಕು ಎನ್ನುವ ಸ್ಥಿತಿ ಎದುರಾಗುತ್ತಿರುತ್ತದೆ. ಹಾಗಾದರೆ ನಿನ್ನೆ ಉತ್ತಮವಾಗಿ ಕೇಳಿಸಿದ್ದ ಹಾಡೇ ಇಂದೇಕೆ ಕರ್ಕಶವಾಗಿ ಕೇಳಿಸಿ, ಮನದಲ್ಲಿ ರಾಡಿ ಎಬ್ಬಿಸುತ್ತದೆ ಅನ್ನಿಸದಿರದು. ಅದಕ್ಕೆ ಉತ್ತರವಿಷ್ಟೇ ; ಮನಸ್ಸಿನ ಸ್ಥಿತಿಗತಿಗಳಿಗೆ ರಕ್ತ ಪರಿಚಲನೆ ನೇರವಾಗಿ ಸಂಬಂಧವ ಹೊಂದಿದೆ. ಹೃದಯದ ಬಡಿತ ಏರಿದಾಗ ಮನುಷ್ಯನ ತೊಂದರೆ ಒಂದೇ ರೀತಿ. ರಕ್ತ ಪರಿಚಲನೆ ಏರು ಒತ್ತಡ ಮಿದುಳಿನತ್ತಲೇ ಜೋರಾಗಿ ಏರಿಕೊಳ್ಳುತ್ತಿರುವಾಗ ಮಿದುಳು ತಾನು ಹೊರುವ ಮಿತಿಯನ್ನು ದಾಟಿ ಹೆಚ್ಚಿನ ಒತ್ತಡವನ್ನು ಭರಿಸಬೇಕಾಗಿ ಬರುತ್ತದೆ. ಇದರಿಂದ ಸಮಾಧಾನ ನಾಶವಾಗಿ ರಗಳೆ, ಕಿರಿಕಿರಿ ಆಗುತ್ತದೆ. ಯಾವುದೋ ಹಿತವೆನಿಸದ ಹಾಗೆ ಪ್ರಕ್ಷುಬ್ದತೆ ಜೊತೆಯಾಗುತ್ತದೆ. ಏರಿದ ರಕ್ತ ಪರಿಚಲನಾ ಪ್ರವಾಹ ನಿದ್ದೆಗೆ ಕೂಡಾ ಸಂಚಕಾರ ತರುತ್ತದೆ. ಇದೇನು ಇರಬಾರದು ಅಂದರೆ, ಮನೆಯಲ್ಲಿ ಅನಾವಶ್ಯಕವಾದ ಸದ್ದು ಇಲ್ಲದಂತಾಗಬೇಕು. ನಿಶ್ಯಬ್ದವೇ ಮನಸ್ಸನ್ನು ಸಹಜ ಸ್ಥಿತಿಗೆ ತರಲು ಮಿದುಳನ್ನು ಉತ್ತೇಜಿಸುತ್ತದೆ. 

Advertisement

   ಕೆಲವರು ಮನೆಯಲ್ಲಿ ಕೂಗಾಡುತ್ತಿರುತ್ತಾರೆ. ಅವರ ಬಳಿ ಮಾತನಾಡಿದರೂ ಕೇಳಿಸಿಕೊಳ್ಳಲಾರರು. ಅವರ ಮಾತುಗಳಿಗೆ ಪ್ರತಿಯಾಗಿ ಎದುರಿಗಿರುವವನು ಮಾತನಾಡಬಾರದು ಅಷ್ಟೇ, ಅಕಸ್ಮಾತ್‌ ಮಾತನಾಡಿದರೆ ಕೈಯಲ್ಲಿರುವುದನ್ನೇ ಎಸೆದು ಮಾತನ್ನು ಸ್ತಬ್ಧಗೊಳಿಸುತ್ತಾರೆ. ಇದೊಂದು ಹುಚ್ಚಿನ ತರಹವೇ. ಆದರೆ ಕೋಣೆಯಲ್ಲಿ ಕೂಡ ಹಾಕಿಡುವಷ್ಟು ಹುಚ್ಚಲ್ಲ. ಇಂಥವರ ಬಳಿ ಮಾತನಾಡಬೇಡಿ. ಮಾತನಾಡಿದರೂ ಪ್ರಯೋಜನವಾಗದು. ಮನೆಯಲ್ಲಿಯೂ ಸದ್ದಿಗಾಗಿನ ಕಾರಣಗಳೇನೇ ಇದ್ದರೂ, ಇಂಥ ಸದ್ದನ್ನು ನಿಯಂತ್ರಿಸುವ ಸಲುವಾಗಿ ನಿಮ್ಮ ಪ್ರಯತ್ನ ಇರಲಿ. ಸಂಯಮವನ್ನು ಸೋಲು ಎಂಬುದಾಗಿ ಸ್ವೀಕರಿಸಬೇಡಿ. ಬೇಡವಾಗಿರದ ಪ್ರತಿ ಧ್ವನಿಯನ್ನು ನಿಯಂತ್ರಿಸಲು, ನಮ್ಮ ಧ್ವನಿಯನ್ನೇ ಪ್ರತಿಬಂಧಿಸಬೇಕು. ದೇವಸ್ಥಾನದಲ್ಲಿ ಒಂದು ಗಂಟೆಯ ಸದ್ದೇ ಹಿತವೆನಿಸುತ್ತದೆ. ಏಕೆಂದರೆ ನಿಶ್ಯಬ್ದತೆಯನ್ನು ನಿಯಂತ್ರಿಸಲು ಈ ಸದ್ದು ಬೇಕು.

ಆದರೆ ಮನೆಯಲ್ಲಿ ದೇವಸ್ಥಾನದಲ್ಲಿನ ಶಾಂತಿ ಎಂದೂ ನೆಲೆಸದು. ದೇವಸ್ಥಾನದಲ್ಲೂ ಭಾರೀ ಶಬ್ದ ಹೊರಡಿಸುವ ಶಂಖ, ಜಾಗಟೆ, ನಗಾರಿಗಳು ನಿಮ್ಮನ್ನು ದೇವರ ಎದುರೂ ಅಶಾಂತಿಯಲ್ಲಿಡುವ ಸಂದರ್ಭ ನಿರ್ಮಿಸಿ ಬಿಡುತ್ತವೆ. ನಿಮ್ಮನ್ನು ನಿಜಕ್ಕೂ ಸಂತೋಷದಲ್ಲಿಡುವುದು ಸಧ್ದೋ, ಶಾಂತಿಯೋ ಎಂಬುದು ಒಮ್ಮೆಮ್ಮೆ ಒಗಟಾಗುತ್ತದೆ. ಆದರೆ ಶಾಂತಿಯನ್ನು ವರ್ಧಿಸಿ, ಸಕಾರಾತ್ಮಕವಾಗಿಸುವ ಶಬ್ದ ಹೊರಹೊಮ್ಮಲಿ. ಮಂದ್ರದಲ್ಲಿನ ಹಾಡು, ಏರು ಧ್ವನಿಯ ಆರೋಹಣವೂ ಮನವನ್ನು ಹುರುಪಿನಲ್ಲಿಡುತ್ತದೆ.  ಆದರೆ ಧ್ವನಿಯ ತರಂಗಗಳೇ ಬೇರೆ. ಸದ್ದೇ ಬೇರೆ. 

   ರಕ್ತದೊತ್ತಡವನ್ನು ಏರಿಸುವ  ಸದ್ದು ಖಂಡಿತ ಮನೆಯಲ್ಲಿ ಇರಬಾರದು. ಭೋರ್ಗರೆವ ಕದಲಿನೆದುರು ದಿನ ವಿಡೀ ನಿಂತು ಅವರ ರುದ್ರ ಭಯಂಕರ ಅಟ್ಟಹಾಸದ ಸದ್ದು ಕೇಳಿಸಿಕೊಂಡರೂ ಮನಸ್ಸು ಆಹ್ಲಾದಕರವಾಗಿಯೇ ಇರುತ್ತದೆ. ಆದರೆ ಅಹಂಕಾರದ ಸದ್ದು, ಸ್ವಾರ್ಥದ ಸದ್ದು, ಮದ, ಮತ್ಸರ, ತಾನು ಎಂದು ಬೀಗುವಲ್ಲಿನ ಸದ್ದುಗಳು ಅಪಶೃತಿ ಎಬ್ಬಿಸುತ್ತವೆ. ಇದಕ್ಕೆ ಕಾರಣರಾದವರನ್ನು ಉಪಾಯದಿಂದ ನಿಯಂತ್ರಿಸಿ. ಮಕ್ಕಳು ಓದುವಾಗಿನ ಚೂಪಾಗಿ ಚುಚ್ಚುವ ಮೌನವೇ ಒಂದು ಕರ್ಕಶ ಸದ್ದಾಗಿಬಿಡುವ ಅಪಾಯವಿರುತ್ತದೆ. ಇಂಥ ಮೌನವೂ ಬೇಕಾಗಿಲ್ಲ. ಹಿನ್ನೆಲೆಯೆಲ್ಲಿನ ಲಘು ಸಂಗೀತ, ಕೆಲ ದೇವರ ಸ್ತೋತ್ರಾವಳಿ, ಭಜನ್‌ಗಳು ಮಕ್ಕಳ ಮನಸ್ಸನ್ನು ಓದಲು ಉತ್ತೇಜನದತ್ತ ಮುಖ ಮಾಡಿಸಬಲ್ಲವು. 

  ಬಾವಿ ತೋಡುವ ಬೋರು, ಜೋರಾದ ಗಡಿಯಾರದ ಸದ್ದು, ಕಿರುಚುವ ಕುಕ್ಕರ್‌,  ಒದರುತ್ತಲೇ ಇರುವ ಟಿ.ವಿ, ರೇಡಿಯೋಗಳು, ಅಡುಗೆ ಮನೆಯ ಮಿಕ್ಸರ್‌, ಮಕ್ರೋವೋವನ್‌ ಚೀತ್ಕಾರಗಳು ನಿಮ್ಮ ನೆಮ್ಮದಿಗೆ ತೊಂದರೆ ಕೊಡಲೆಂದೇ ಇರುವಂಥವು. ಮೃದು ಮಾತು ಅದು ಮಾತಲ್ಲ ಸಂಗೀತ. ದು ಮಧುರ ವೀಣಾವಾದನದಂತೆ. ಕೊಳಲಿನ ಅಲೆಯಂತೆ, ನದಿಯ ಹರಿವಿನ ಜುಳು ಜುಳು ಶಬ್ದದಂತೆ.  

Advertisement

 ಒಟ್ಟಿನಲ್ಲಿ ಮೌನವನ್ನೂ, ಸದ್ದನ್ನೂ ಮನೆಯಲ್ಲಿ ಜಾಣತನದಿಂದ ನಿಯಂತ್ರಿಸಿದಿರಾದರೆ ಚೈತನ್ಯದ ಸೆಲೆ ಮೈಮನದಲ್ಲಿ ಪ್ರವಹಿಸುವುದು ಖಂಡಿತ. ಚೈತನ್ಯವು ಮನಸ್ಸಿನ ಸೊತ್ತಾಗಬೇಕು. ಹೀಗಾದಾಗ ಮಾತ್ರ ಮನಸ್ಸು ದೇಹದ, ಅಂಗಾಂಗಗಳ ಕಾಳಜಿಯನ್ನು ಆಗ ತನ್ನಷ್ಟಕ್ಕೆ ತಾನು ನಿರ್ವಹಿಸಿ, ರೋಗಗಳನ್ನು, ವೃದ್ದಾಪ್ಯವನ್ನು ನಿಯಂತ್ರಿಸುತ್ತಿರುತ್ತದೆ. 

– ಅನಂತಶಾಸ್ತ್ರಿ

Advertisement

Udayavani is now on Telegram. Click here to join our channel and stay updated with the latest news.

Next