Advertisement
ಎದುರಿನವರ ಬದುಕು ಎಷ್ಟು ಮಹತ್ವಪೂರ್ಣವಾದಧ್ದೋ ನಿಮ್ಮ ಬದುಕೂ ಅಷ್ಟೇ ಮಹತ್ವವಾದದ್ದು. ಭವಿಷ್ಯದಲ್ಲಿ ನಾವು ಜಡ ವ್ಯಕ್ತಿಗಳಾಗಬಾರದೆಂದರೆ, ಪಶ್ಚಾತ್ತಾಪದ ಕೂಪದಲ್ಲಿ ಬಿದ್ದು ಕೊರಗಬಾರದೆಂದರೆ, ಸಮಾಜದ ಮೇಲೆ ಮುನಿಸಿಕೊಳ್ಳಬಾರದು ಎಂದರೆ, ಈಗಿನಿಂದಲೇ ಒಳ್ಳೆಯ ಸ್ವಾರ್ಥಿಗಳಾಗಲು ಕಲಿಯಬೇಕು. ಒಳ್ಳೆಯ ಸ್ವಾರ್ಥವು ನಮ್ಮನ್ನು ಆಧ್ಯಾತ್ಮಿಕವಾಗಿಯೂ ಪ್ರೌಢತೆಯೆಡೆಗೆ ಕೊಂಡೊಯ್ಯುತ್ತದೆ.
Related Articles
Advertisement
ಈ ನಿಸ್ವಾರ್ಥದಾಟದಲ್ಲಿ ನಮ್ಮನ್ನು ನಾವು ಎಷ್ಟು ತೊಡಗಿಸಿ ಕೊಳ್ಳುತ್ತೇವೆ, ಎಂಥ ಪಟುಗಳಾಗಿಬಿಡುತ್ತೇವೆ ಎಂದರೆ, ನಮ್ಮ ಬದುಕಿನ ಪುಟಗಳ ತುಂಬೆಲ್ಲ, ನಮ್ಮನ್ನು ಹಿಂಡಿಹಿಪ್ಪೆ ಮಾಡುವ ಜನರನ್ನು ತುಂಬಿಸಿಕೊಂಡುಬಿಡುತ್ತೇವೆ. ನಮ್ಮ ನಿಜವಾದ ಟ್ಯಾಲೆಂಟ್ ಅನ್ನು ಕಡೆಗಣಿಸುವ ಉದ್ಯೋಗದಲ್ಲೇ ಮುಂದುವರಿಯುತ್ತೇವೆ, ನಮ್ಮನ್ನು ವಂಚಿಸುವ, ದುರ್ಬಳಕೆ ಮಾಡಿಕೊಳ್ಳುವ ಸಂಬಂಧಗಳಲ್ಲಿ, ವಲಯಗಳಲ್ಲಿ ದೀರ್ಘಾವಧಿ ಸಮಯವನ್ನು ಕಳೆದುಬಿಡುತ್ತೇವೆ.
ಏನಾಗಿಹೋಯಿತು ಎಂದು ಅರಿವಾಗುವಷ್ಟರಲ್ಲೇ ನಮ್ಮ ಅತ್ಯಮೂಲ್ಯ ವರ್ಷಗಳು ಕಳೆದುಹೋಗಿರುತ್ತವೆ. ನಾವು ಮಾಡಿದ ತ್ಯಾಗಗಳಿಗೆ ಯಾರೂ ಆಭಾರಿಯಾಗಿಲ್ಲ, ನಮ್ಮ ಸೋಕಾಲ್ಡ್ ಒಳ್ಳೆಯ ಕೆಲಸಗಳಿಗೆ ಫಲವೇನೂ ಸಿಗುವುದಿಲ್ಲ ಎನ್ನುವುದು ಅರ್ಥವಾಗುತ್ತದೆ. ನಾವು ಇಷ್ಟು ವರ್ಷಗಳಿಂದ ಶರಣಾಗತಿಯನ್ನು “ನಿಸ್ವಾರ್ಥ ಮತ್ತು ಕರುಣೆ’ ಎಂದು ತಪ್ಪಾಗಿ ಭಾವಿಸಿದ್ದಕ್ಕಾಗಿ ನಮ್ಮ ಮೇಲೆ ನಾವೇ ಮುನಿಸಿಕೊಳ್ಳುತ್ತೇವೆ.
ಒಳ್ಳೆಯ ಸ್ವಾರ್ಥಿಗಳಾಗಿ: ನಮ್ಮ ಸುಪ್ತಪ್ರಜ್ಞೆಯಲ್ಲಿ ಹುದುಗಿಹೋಗಿ ರುವ ಸ್ವಾರ್ಥವನ್ನು ಮರುಶೋಧಿಸುವುದು ನಮ್ಮ ಆದ್ಯತೆಯಾಗಬೇಕು. ನಮಗೆ ಸ್ವಾರ್ಥ ಎನ್ನುವ ಪದವೇ ಹೆದರಿಕೆ ಹುಟ್ಟಿಸುತ್ತದೆ. ಏಕೆಂದರೆ, ನಮಗ್ಯಾರಿಗೂ ಒಳ್ಳೆಯ ಸ್ವಾರ್ಥ ಮತ್ತು ಕೆಟ್ಟ ಸ್ವಾರ್ಥದ ನಡುವಿನ ವ್ಯತ್ಯಾಸವನ್ನು ಯಾರೂ ಕಲಿಸಿಯೇ ಇರುವುದಿಲ್ಲ. ಹಿಂದೆಯೂ ನಾನು ಈ ಬಗ್ಗೆ ಬರೆದಿದ್ದೇನೆ. ನಮಗೆ ನಾವು ಬಿಡುವು ಕೊಟ್ಟುಕೊಳ್ಳುವುದು, ವೈಯಕ್ತಿಕ ಸಮಯವನ್ನು ನಿರೀಕ್ಷಿಸುವುದು, ಒಬ್ಬರೇ ಪ್ರವಾಸ ಮಾಡುವುದು, ನಮಗಾಗಿ ಖರ್ಚು ಮಾಡಿಕೊಳ್ಳುವುದು ತಪ್ಪಲ್ಲವೇ ಅಲ್ಲ. ಅನೇಕ ಕುಟುಂಬಗಳಲ್ಲಿ ಒಂದು ಸಮಾನ ವಿಷಯವನ್ನು ಗಮನಿಸಿದ್ದೀರಾ? ಮನೆಯ ಯಜಮಾನ ಎನಿಸಿಕೊಳ್ಳುವ ಗಂಡಸು ಮಡದಿ, ಮಕ್ಕಳು ಕೇಳಿದ್ದನ್ನೆಲ್ಲ ತಂದುಕೊಡುವುದರಲ್ಲಿ ಎಷ್ಟು ನಿರತನಾಗಿರುತ್ತಾನೆ ಎಂದರೆ, ತಾನು ಮಾತ್ರ ಅವೇ ಒಂದೆರಡು ಜತೆ ಬಟ್ಟೆಯನ್ನೇ ಧರಿಸುತ್ತಿರುತ್ತಾನೆ. ತನಗಾಗಿ ತಾನು ಏನನ್ನೂ ಮಾಡಿಕೊಳ್ಳುವುದಿಲ್ಲ.
ಹೊಸ ಬಟ್ಟೆ ಖರೀದಿಸುವುದು ಅಗತ್ಯವಿಲ್ಲ ಎಂದೇ ಭಾವಿಸುತ್ತಾನೆ. ಖರೀದಿಸಿದರೂ ಅವನಲ್ಲಿ ಅದೇನೋ ಗಿಲ್ಟ್ ಕಾಡುತ್ತಿರುತ್ತದೆ. ತನ್ನ ಮಕ್ಕಳಿಗೆ ಸಾವಿರಾರು ರೂಪಾಯಿಯ ಬಟ್ಟೆ ಕೊಡಿಸಲು ಖುಷಿ ಪಡುವ ಈ ವ್ಯಕ್ತಿ ತನಗೆ ಮಾತ್ರ ಚೂರೇ ಚೂರು ಕಾಸ್ಟಿ ಎನಿಸುವ ಬಟ್ಟೆ ಖರೀದಿಸಲೂ ಹಿಂಜರಿಯುವುದು ಏಕೆ? ಆತ ಅರ್ಥಮಾಡಿಕೊಳ್ಳಬೇಕಿರುವುದೇನೆಂದರೆ, ಹೆಂಡತಿಗೆ ಹೊಸ ಬಟ್ಟೆ ಕೊಡಿಸಿದರೆ ಆಕೆಗೆ ಎಷ್ಟು ಖುಷಿಯಾಗುತ್ತದೋ ಅಷ್ಟೇ ಖುಷಿ ತಾನು ಹೊಸ ಬಟ್ಟೆ ಧರಿಸಿದಾಗಲೂ ಆಗುತ್ತದೆ ಎನ್ನುವುದು. ಇದರರ್ಥವಿಷ್ಟೆ, ಒಳ್ಳೆಯ ಸ್ವಾರ್ಥವು ನಮ್ಮನ್ನು ಉತ್ತಮರನ್ನಾಗಿಸಿ, ನಮ್ಮ ಪ್ರೀತಿಪಾತ್ರರಿಗೂ ಸಂತಸ ಹರಡುತ್ತದೆ. ನಿಮ್ಮ ಮೇಲೆ ನೀವು ಹೂಡಿಕೆ ಮಾಡಿದಷ್ಟೂ, ಅದು ಆತ್ಮವಿಶ್ವಾಸ, ಆನಂದದ ರೂಪದಲ್ಲಿ ಬಡ್ಡಿಯಾಗಿ ಹೊರಹೊಮ್ಮುತ್ತದೆ.
ಬಿಡುವು ಮಾಡಿಕೊಳ್ಳಿ: ಒಳ್ಳೆಯ ಸ್ವಾರ್ಥಿಗಳಾಗಿ. ಪ್ರತಿ ದಿನವೂ ನಿಮಗಾಗಿ ಬಿಡುವು ಮಾಡಿಕೊಳ್ಳಿ. ಒಳ್ಳೆಯ ಆಹಾರ ಸೇವಿಸಿ, ವ್ಯಾಯಾಮ ಮಾಡಿ, ಆತ್ಮಾವಲೋಕನಕ್ಕಾಗಿ ಸಮಯ ಮೀಸಲಿಡಿ. ಮನೆಯಲ್ಲಿ ಗದ್ದಲವೆನಿಸಿದರೆ, ಒಂದೆರಡು ದಿನ ಒಬ್ಬರೇ ಪ್ರಶಾಂತ ಸ್ಥಳಕ್ಕೆ ಹೋಗಿ ಬನ್ನಿ. ನಮ್ಮ ಬದುಕಿನಲ್ಲಿ ನಿತ್ಯವೂ ಎಷ್ಟೆಲ್ಲ ಸಂಗತಿಗಳು ಘಟಿಸುತ್ತಿರುತ್ತವೆಂದರೆ, ಅವನ್ನು ಜರಡಿ ಹಿಡಿದು, ಸಿಪ್ಪೆಯನ್ನೆಲ್ಲ ಹೊರಗೆಸೆಯುವುದಕ್ಕೆ ನಮಗೆ ಮೌನ/ಶಾಂತತೆಯ ಅಗತ್ಯವಿರುತ್ತದೆ. ಹಾಗಾಗಿ ನಮ್ಮ ಆಂತರಿಕ ಬೇಡಿಕೆಗಳಿಗೆ ಕಿವಿಯಾಗಿ, ಅವನ್ನು ಪೂರೈಸುವುದು ಅತ್ಯಗತ್ಯ ಮತ್ತು ಮಹೋನ್ನತ ಕೆಲಸ.
ಎದುರಿನವರ ಬದುಕು ಎಷ್ಟು ಮಹತ್ವಪೂರ್ಣವಾದಧ್ದೋ ನಿಮ್ಮ ಬದುಕೂ ಅಷ್ಟೇ ಮಹತ್ವವಾದದ್ದು. ಭವಿಷ್ಯದಲ್ಲಿ ನಾವು ಜಡ ವ್ಯಕ್ತಿಗಳಾಗಬಾರದೆಂದರೆ, ಪಶ್ಚಾತ್ತಾಪದ ಕೂಪದಲ್ಲಿ ಬಿದ್ದು ಕೊರಗಬಾರದೆಂದರೆ, ಸಮಾಜದ ಮೇಲೆ ಮುನಿಸಿಕೊಳ್ಳಬಾರದು ಎಂದರೆ, ಈಗಿನಿಂದಲೇ ಒಳ್ಳೆಯ ಸ್ವಾರ್ಥಿಗಳಾಗಲು ಕಲಿಯಬೇಕು. ಒಳ್ಳೆಯ ಸ್ವಾರ್ಥವು ನಮ್ಮನ್ನು ಆಧ್ಯಾತ್ಮಿಕವಾಗಿಯೂ ಪ್ರೌಢತೆಯೆಡೆಗೆ ಕೊಂಡೊಯ್ಯುತ್ತದೆ.
ಆಧ್ಯಾತ್ಮಿಕ ಪ್ರೌಢತೆ ಎಂದಾಗಲೆಲ್ಲ ನನಗೆ ಹಿಂದೂ ತತ್ವಜ್ಞಾನ ನೆನಪಾಗುತ್ತದೆ. ಹಿಂದೂಗಳ ಬದುಕು, ನಾಲ್ಕು ಭಾಗಗಳಲ್ಲಿ ವಿಂಗಡಿತವಾಗಿದೆ. ಬ್ರಹ್ಮಚರ್ಯೆ, ಗೃಹಸ್ಥ, ವಾನಪ್ರಸ್ಥ ಮತ್ತು ಸನ್ಯಾಸ. ಪ್ರತಿಯೊಂದು ಹಂತಕ್ಕೂ ಅದರದ್ದೇ ಆದ ಜವಾಬ್ದಾರಿಗಳಿವೆ. ಅದರಲ್ಲೂ ನಾಲ್ಕನೇ ಹಂತವು ಬಹಳ ಕುತೂಹಲಕಾರಿಯಾದದ್ದು. ಈ ಹಂತದಲ್ಲಿ ವ್ಯಕ್ತಿ ಸಾಂಸಾರಿಕ ಮತ್ತು ವ್ಯಾವಹಾರಿಕ ಬದುಕಿನಿಂದ ದೂರವಾಗಿ ತನ್ನ ಮಾನಸಿಕ ಮತ್ತು ಆಧ್ಯಾತ್ಮಿಕ ಉನ್ನತೀಕರಣದತ್ತ ಹೆಜ್ಜೆ ಹಾಕುತ್ತಾನೆ. ನಾನು ಮೇಲೆ ಹೇಳಿದ ಒಳ್ಳೆಯ ಸ್ವಾರ್ಥಕ್ಕೂ, ಈಗ ಹೇಳುತ್ತಿರುವ ಸನ್ಯಾಸತ್ವದ ಹಾದಿಗೂ ವ್ಯತ್ಯಾಸವಿದ್ದೇ ಇದೆ. ಹೊಸ ಬಟ್ಟೆ ಖರೀದಿಸುವುದು ಒಳ್ಳೆಯ ಸ್ವಾರ್ಥ. ಆದರೆ ಸನ್ಯಾಸತ್ವ ಬಟ್ಟೆಗೆ ಮಹತ್ವ ಕೊಡುವುದಿಲ್ಲ, ವಸ್ತುಗಳಿಗೆ ಅಲ್ಲಿ ಕೊನೆಯ ಸ್ಥಾನ. ಆದರೆ ಇವೆರಡರ ನಡುವೆ ಸಾಮ್ಯತೆ ಒಂದಿದೆ. ಅದೇ, “ನಮ್ಮತ್ತ ಧ್ಯಾನ ಕೇಂದ್ರೀಕರಿಸಿಕೊಳ್ಳುವುದು’.
ನಮ್ಮ ಮೇಲೆ ಗಮನ ಕೇಂದ್ರೀಕರಿಸಿದಾಗ, ನಮ್ಮ ಜೀವನ ಶೈಲಿಯಲ್ಲೂ ಬೃಹತ್ ಬದಲಾವಣೆಯೇ ಆಗುತ್ತದೆ. ಆಗ ಹಠಾತ್ತಾಗಿ ನಮ್ಮ ಸುತ್ತಲಿರುವವರಿಗೆ ನಾವು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದೇವೆ, ಅವರನ್ನು ಕಡೆಗಣಿಸುತ್ತಿದ್ದೇವೆ ಅಥವಾ ಮುನಿಸಿಕೊಂಡಿದ್ದೇವೆ ಎಂಬ ಭಾವನೆ ಕಾಡಲಾರಂಭಿಸಬಹುದು. ನಾವು ಮೈಗಳ್ಳರಾಗಿಲ್ಲ, ಯಾರನ್ನೂ ಕಡೆಗಣಿಸುತ್ತಿಲ್ಲ, ಯಾರ ಮೇಲೂ ಮುನಿಸಿಕೊಂಡಿಲ್ಲ, ಜವಾಬ್ದಾರಿ ಯಿಂದಲೂ ನುಣುಚಿಕೊಳ್ಳುತ್ತಿಲ್ಲ, ಬದಲಾಗಿ, ನಮ್ಮ ಬಗ್ಗೆ ನಾವು ಕಾಳಜಿ ವಹಿಸುತ್ತಿದ್ದೇವೆ ಎಂಬುದನ್ನು ಸುತ್ತಲಿರುವವರಿಗೆ ಅರ್ಥಮಾಡಿಸಬೇಕು. ಈ ಜೀವನ ಇರುವುದೇ ಇತರರ ಸೇವೆಗಾಗಿ ಎಂಬ ಮಾತು ಎಷ್ಟು ಒಳ್ಳೆಯದೋ ಅದನ್ನು ಅತಿಯಾದ ಹಂತಕ್ಕೆ ಒಯ್ಯುವುದು ಅಷ್ಟೇ ತಪ್ಪು ನಡೆ. ಇತರರೇ ನಿಮ್ಮ ಜೀವನದ ಕೇಂದ್ರಬಿಂದುವಾಗದಿರಲಿ.ಇಡೀ ಲೇಖನವನ್ನು ಎರಡೇ ಪದಗಳಲ್ಲಿ ಮತ್ತೂಮ್ಮೆ ಹೇಳುತ್ತೇನೆ ಕೇಳಿ: “ಒಳ್ಳೆಯ ಸ್ವಾರ್ಥಿಗಳಾಗಿ!’
(ಲೇಖಕರು ಬ್ರಿಟನ್ ಮೂಲದ ಯುವ ತತ್ವಜ್ಞಾನಿ, ಲೇಖಕ) -ಅಲೆನ್ ಡೆ ಬಾಟನ್