Advertisement

ಮೈಸೂರು ಝೂ ರಜೆ ವಿಸ್ತರಣೆ ಬೇಡ : ಸಿಎಂ

03:45 AM Jan 07, 2017 | Team Udayavani |

ಬೆಂಗಳೂರು: ಮೈಸೂರು ಮೃಗಾಲಯದ ರಜೆಯನ್ನು ಹೆಚ್ಚು ಕಾಲ ವಿಸ್ತರಿಸುವುದು ಬೇಡ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೃಗಾಲಯದ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

Advertisement

ಮೈಸೂರಿನ ಶ್ರೀ ಜಯಚಾಮರಾಜೇಂದ್ರ ಮೃಗಾಲಯದಲ್ಲಿ ಹಕ್ಕಿ ಜ್ವರ ಭೀತಿ ಹಿನ್ನೆಲೆಯಲ್ಲಿ ಜ.4ರಿಂದ ಫೆ.2ರವರೆಗೆ ಮೃಗಾಲಯವನ್ನು ಬಂದ್‌ ಮಾಡಲಾಗಿದೆ. ಈ ಬಗ್ಗೆ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಕುರಿತು ಶುಕ್ರವಾರ ಗೃಹ ಕಚೇರಿ ಕೃಷ್ಣಾದಲ್ಲಿ ಮೃಗಾಲಯ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಿಎಂ ಸಭೆ ನಡೆಸಿದರು.

ಮೈಸೂರಿಗೆ ಆಗಮಿಸುವ ಪ್ರವಾಸಿಗರ ಪ್ರಮುಖ ಆಕರ್ಷಣೆ ಮೃಗಾಲಯ. ರಜೆ ಘೋಷಣೆಯಿಂದ ಪ್ರವಾಸೋದ್ಯಮಕ್ಕೂ ಪೆಟ್ಟು ಬೀಳುವ ಸಾಧ್ಯತೆ ಇರುತ್ತದೆ. ಹೀಗಾಗಿ ರಜೆ ಅವಧಿಯನ್ನು ಮತ್ತೆ ವಿಸ್ತರಿಸದಿರುವುದು ಸೂಕ್ತ ಎಂದು ಹೇಳಿದರು.
ರೋಗ ವ್ಯಾಪಕವಾಗಿ ಹರಡುವ ಭೀತಿ ಹಿನ್ನೆಲೆಯಲ್ಲಿ ಮೃಗಾಲಯಕ್ಕೆ ಒಂದು ತಿಂಗಳು ರಜೆ ಘೋಷಿಸಲಾಗಿದೆ.

ಮುಂಜಾಗ್ರತಾ ಕ್ರಮವಾಗಿ ಔಷಧಿ ಸಿಂಪಡಿಸುವ ಮತ್ತಿತರ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿಗೆ ವಿವರಣೆ ನೀಡಿದ ಅಧಿಕಾರಿಗಳು, ಈ ಹಿಂದೆ ರಷ್ಯಾ, ಚೀನಾ, ಆಸ್ಟ್ರೇಲಿಯಾದಲ್ಲಿ ಮತ್ತು ದೆಹಲಿಯಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿತ್ತು. ಇದೀಗ ಭುವನೇಶ್ವರ ಹಾಗೂ ಮೈಸೂರಿನಲ್ಲಿ ಪತ್ತೆಯಾಗಿದೆ. ರೋಗ ಬೇರೆ ಕಡೆಗೆ ಹಬ್ಬುವುದನ್ನು ತಡೆಯುವ ದೃಷ್ಟಿಯಿಂದ ಮೃಗಾಲಯಕ್ಕೆ ರಜೆ ಘೋಷಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಮೃಗಾಲಯದ ಮುಂಭಾಗದಲ್ಲಿ ವಾಹನಗಳ ನಿಲುಗಡೆಗೆ ಬಹುಮಹಡಿ ಕಟ್ಟಡ ನಿರ್ಮಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಸಭೆಯಲ್ಲಿ ಶಾಸಕ ಸೋಮಶೇಖರ್‌, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷರಾದ ಮಲ್ಲಿಗೆ ವೀರೇಶ್‌, ಕಾರ್ಯನಿರ್ವಾಹಕ ನಿರ್ದೇಶಕರಾದ ಕಮಲಾ, ಅರಣ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ವಿಜಯ ಭಾಸ್ಕರ್‌ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next