ಮುಂದಿನ ಪೀಳಿಗೆಗೆ ಆಚಾರ ವಿಚಾರಗಳ ಮಹತ್ವ ತಿಳಿಸಬೇಕು ಎಂದು ಆರ್ಯ ಆಕ್ಷೋಭ್ಯ ಮಠದ ಪೀಠಾಧಿಪತಿ ಶ್ರೀ ರಘುವಿಜಯ ತೀರ್ಥರು ಹೇಳಿದರು. ನಗರದ ಯಾದವ ಭವನದಲ್ಲಿ ಅಖೀಲ ಭಾರತ ಬ್ರಾಹ್ಮಣ ಮಹಾಸಭಾ ಜಿಲ್ಲಾ ಸಮಿತಿಯಿಂದ ಹಮ್ಮಿಕೊಂಡಿದ್ದ ವಿಪ್ರ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ವಿಪ್ರ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಬ್ರಾಹ್ಮಣ ಸಮಾಜದವರು ಧರ್ಮಾಚರಣೆ ವಿಚಾರದಲ್ಲಿ ತೋರುತ್ತಿರುವ ತಾತ್ಸಾರ ಮನೋಭಾವ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಇತಿಹಾಸ ಅವಲೋಕಿಸಿದಾಗ
ಧರ್ಮಾಚರಣೆ ಜೊತೆ ಜೊತೆಗೆ ಉನ್ನತ ಅಧಿಕಾರವನ್ನು ಅನುಭವಿಸಿದಂಥ ಬ್ರಾಹ್ಮಣ ಸಮಾಜವು ಇಂದು ಕೇವಲ
ಒಂದು ಜಾತಿಯಾಗಿ ಗುರುತಿಸಿಕೊಳ್ಳುತ್ತಿರುವುದು ಸರಿಯಲ್ಲ. ಎಂಥ ಸಂದರ್ಭದಲ್ಲೂ ಧರ್ಮ ತೊರೆಯಬಾರದು ಎಂದರು. ಬ್ರಾಹ್ಮಣರಿಗೆ ಸಮಾಜದಲ್ಲಿ ವಿಶೇಷ ಗೌರವದ ಸ್ಥಾನಮಾನವಿದೆ. ಆಚರಣೆಗಳು, ಕಟ್ಟುಪಾಡುಗಳನ್ನು
ಚಾಚೂ ತಪ್ಪದೆ ನಿರ್ವಹಿಸುವ ಮೂಲಕ ಇತರೆ ಸಮಾಜಕ್ಕೆ ಮಾದರಿ ಎನಿಸಿಕೊಂಡದ್ದು ಬ್ರಾಹ್ಮಣ ಸಮಾಜ. ಇಂಥ
ಗೌರವ ಕಾಪಾಡಿಕೊಂಡು ಹೋಗಬೇಕಾದ ಮಹತ್ತರ ಹೊಣೆ ನಮ್ಮೆಲ್ಲರ ಮೇಲಿದೆ ಎಂದರು. ನಗರಸಭೆ ಉಪಾಧ್ಯಕ್ಷ ಜಯಣ್ಣ ಮಾತನಾಡಿ, ಇಂಥ ಕಾರ್ಯಕ್ರಮಗಳಿಂದ ಬಡ ಮಕ್ಕಳಿಗೆ ಓದುವ ಉತ್ಸಾಹ ಇಮ್ಮಡಿಗೊಳ್ಳಲಿದೆ ಎಂದರು.
ಸಮಾರಂಭದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಗಣ್ಯರು ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಬಾಲಕೃಷ್ಣ ದೋಟಿಹಾಳ, ಜಿ. ರಮಾಕಾಂತ, ಶ್ರೀನಿಧಿ ಕುಲಕರ್ಣಿ ಅವರನ್ನು ಸನ್ಮಾನಿಸಲಾಯಿತು. ದೇವದುರ್ಗ ತಾಲೂಕಿನ ಖಾನಾಪುರ ಗ್ರಾಮದ ಡಿ.ಹನುಮಂತರಾವ್ ವಕೀಲ್ ಅವರಿಗೆ ಪ್ರಸಕ್ತ ಸಾಲಿನ ವಿಪ್ರಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬ್ರಾಹ್ಮಣ ಮಹಾಸಭಾ ಉಪಾಧ್ಯಕ್ಷ ಎಚ್.ಎನ್. ಹಿರಿಯಣ್ಣ ಮಾತನಾಡಿದರು, ಶೇಷಾದ್ರಿ ಕುಲಕರ್ಣಿ ವಿಶೇಷ ಉಪನ್ಯಾಸ ನೀಡಿದರು. ಮಹಾಸಭಾದ ವಲಯ ಉಪಾಧ್ಯಕ್ಷ ನರಸಿಂಗರಾವ್ ದೇಶಪಾಂಡೆ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಮಿತಿ ಉಪಾಧ್ಯಕ್ಷ ಬಿ.ವಿ.ಮಂಜುನಾಥ, ಸದಸ್ಯರಾದ ತಾರಾನಾಥ, ಜಿಲ್ಲಾಧ್ಯಕ್ಷ ಆನಂದ ತೀರ್ಥ ಫಡ್ನಿಸ್, ಕಾರ್ಯದರ್ಶಿ ಪ್ರಾಣೇಶ ಮುತಾಲಿಕ್, ಸಮಾಜದ
ಮುಖಂಡರಾದ ಜಗನ್ನಾಥ ಕುಲಕರ್ಣಿ, ಗಿರೀಶ ಕನಕವೀಡು, ಡಾ| ಪ್ರಮೋದ ಕಟ್ಟಿ, ಶಾಮರಾವ್ ಹೇಮನೂರು, ಮುದ್ದು ರಂಗರಾವ್ ಮುತಾಲಿಕ್ ಸೇರಿ ಇತರರು ಪಾಲ್ಗೊಂಡಿದ್ದರು.
Advertisement