ಬೆಂಗಳೂರು: ಪುತ್ರಿಯ ಅನಾರೋಗ್ಯದ ಕಾರಣ ಮನೆಯಲ್ಲಿ ನಾಯಿ ಸಾಕುವುದು ಬೇಡ ಎಂದು ಹೇಳಿದ್ದಕ್ಕೆ ಜಗಳವಾಡಿದ್ದರಿಂದ ನೊಂದ ಮಹಿಳೆಯೊಬ್ಬರು ತನ್ನ ಪುತ್ರಿಯನ್ನು ಕೊಂದು, ಬಳಿಕ ತಾನೂ ಆತ್ಮ ಹತ್ಯೆ ಮಾಡಿಕೊಂಡಿರುವ ಘಟನೆ ಗೋವಿಂದಪುರ ಠಾಣೆ ವ್ಯಾಪ್ತಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಇದನ್ನೂ ಓದಿ:ಮುಂಬೈ ಇಂಡಿಯನ್ಸ್- ಪಂಜಾಬ್ ಕಿಂಗ್ಸ್ ಫ್ರಾಂಚೈಸಿಗಳಿಗೆ ಹೊಸ ಕೋಚ್ ಗಳ ನೇಮಕ
ಗೋವಿಂದಪುರ ನಿವಾಸಿ ದಿವ್ಯಾ(36) ಮೃತ ತಾಯಿ. ಅದಕ್ಕೂ ಮೊದಲು ದಿವ್ಯಾ ತನ್ನ 13 ವರ್ಷದ ಪುತ್ರಿ ರಿದ್ಯಾಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ಶ್ರೀನಿವಾಸ್, ದಿವ್ಯಾರನ್ನು ಮದುವೆಯಾಗಿದ್ದು, ದಂಪತಿಗೆ ರಿದ್ಯಾ ಎಂಬ ಮಗಳು ಇದ್ದಳು. ಈ ಮಧ್ಯೆ ರಿದ್ಯಾಗೆ ಉಸಿರಾಟದ ಸಮಸ್ಯೆ ಉಂಟಾಗಿತ್ತು. ಚಿಕಿತ್ಸೆಗೆಂದು ಆಸ್ಪತ್ರೆಗೆ ಹೋದಾಗ ಮನೆಯಲ್ಲಿ ನಾಯಿ, ಬೆಕ್ಕುಗಳು ಸಾಕುತ್ತಿದ್ದಿರಾ ಎಂದು ಪ್ರಶ್ನಿಸಿದ್ದರು. ಆಗ ನಾಯಿ ಸಾಕುತ್ತಿದ್ದೇವೆ ಎಂದು ದಿವ್ಯಾ ಹೇಳಿದ್ದಾರೆ. ನಾಯಿ ಸಾಕುವುದರಿಂದ ಉಸಿರಾಟದ ಸಮಸ್ಯೆ ಉಲ್ಬಣವಾಗುತ್ತದೆ ಎಂದು ವೈದ್ಯರು ಸಲಹೆ ನೀಡಿದ್ದರು.
ಈ ವಿಚಾರವನ್ನು ದಿವ್ಯಾ, ಶ್ರೀನಿವಾಸ್ ಮತ್ತು ಅತ್ತೆ-ಮಾವನಿಗೆ ತಿಳಿಸಿ, ನಾಯಿಯನ್ನು ಬೇರೆಯವರಿಗೆ ಕೊಡುವಂತೆ ತಿಳಿಸಿದ್ದಾರೆ. ಆದರೆ, ಶ್ರೀನಿವಾಸ್ ಉಢಾಫೆ ಮಾತನಾಡಿ, ಪುತ್ರಿ ರಿದ್ಯಾಗೆ ನಿಂದಿಸಿದ್ದಾನೆ. ಅಲ್ಲದೆ, ಅತ್ತೆ-ಮಾವ ಕೂಡ ಸರಿಯಾಗಿ ಸ್ಪಂದಿಸಿಲ್ಲ. ಜಗಳ ಮಾಡಿದ್ದಾರೆ. ಹೀಗಾಗಿ ನೊಂದ ದಿವ್ಯಾ, ಸೆ.11ರಂದು ರಾತ್ರಿ ಮನೆಯ ಕೋಣೆಯಲ್ಲಿ ಪುತ್ರಿ ರಿದ್ಯಾಳನ್ನು ಫ್ಯಾನ್‌ಗೆ ನೇಣುಬಿಗಿದುಕೊಂದು, ಬಳಿಕ ತಾನೂ ಅದೇ ಫ್ಯಾನ್‌ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮರು ದಿನಗಳ ಬೆಳಗ್ಗೆ ಶ್ರೀನಿವಾಸ್ ಕೊಠಡಿಯ ಬಾಗಿಲು ತೆಗೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಸ್ಥಳದಲ್ಲಿ ಸಿಕ್ಕ ಡೆತ್‌ನೋಟ್ ಆಧಾರದ ಮೇಲೆ ಪತಿ ಶ್ರೀನಿವಾಸ್, ಅತ್ತೆ-ಮಾವನ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ ಪ್ರಕರಣ ದಾಖಲಿಸಿ, ಶ್ರೀನಿವಾಸನನ್ನು ಬಂಧಿಸಲಾಗಿದೆ. ಅತ್ತೆ-ಮಾವನಿಗಾಗಿ ಶೋಧ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.