Advertisement

ಸಿನಿಮಾ ಪ್ರದರ್ಶನಕ್ಕೆ ತಡೆ ತರಬೇಡಿ, ಮಾತುಕತೆಯ ಮೂಲಕ ಬಗೆಹರಿಸೋಣ

10:58 AM Dec 31, 2017 | Team Udayavani |

ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣುತ್ತಿರುವ ಯಾವುದೇ ಸಿನಿಮಾಗಳಿಗೆ ತಡೆ ತರಬೇಡಿ, ಏನಾದರೂ ಸಮಸ್ಯೆ ಇದ್ದರೆ ಅದನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳೋಣ. ಯಾವುದಾದರೂ ಚಿತ್ರದಲ್ಲಿ ಲೋಪವಿದೆ ಎಂದು ಯಾರಾದರೂ ನ್ಯಾಯಾಲಯದ ಮೆಟ್ಟಿಲೇರಿದರೆ, ಪರಿಣತರ ಸಮಿತಿ ಆ ಚಿತ್ರ ವೀಕ್ಷಿಸಿ ನಂತರ ಮುಂದಿನ ಕ್ರಮ ಕೈಗೊಳ್ಳುವಂತಹ ವ್ಯವಸ್ಥೆಯನ್ನು ಮಾಡಬೇಕು ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ನ್ಯಾಯಾಲಯ ಹಾಗೂ ವಕೀಲರ ಸಂಘವನ್ನು ಮನವಿ ಮಾಡಿದ್ದಾರೆ.

Advertisement

ವಕೀಲರಿಗೆ ಅವಮಾನವಾಗುವಂತಹ ಸಂಭಾಷಣೆ ಇದೆ ಎಂದು ವಕೀಲರೊಬ್ಬರು “ಅಂಜನಿಪುತ್ರ’ ಚಿತ್ರಕ್ಕೆ ತಡೆ ತಂದು, ಚಿತ್ರ ಪ್ರದರ್ಶನ ಒಂದು ದಿನದ ಮಟ್ಟಿಗೆ ರದ್ದಾಗಿತ್ತು. ಈಗ ಮತ್ತೆ ಎಂದಿನಂತೆ ಚಿತ್ರ ಪ್ರದರ್ಶನ ಪ್ರಾರಂಭವಾಗಿದೆ. ಈ ಕುರಿತಾಗಿ ಮಾತನಾಡಿದ ಸಾ.ರಾ.ಗೋವಿಂದು, ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ ಸಿನಿಮಾಕ್ಕೆ ತಡೆ ತಂದರೆ ಆ ಚಿತ್ರದ ನಿರ್ಮಾಪಕನಿಗೆ ಸಾಕಷ್ಟು ನಷ್ಟವಾಗುತ್ತದೆ. ಅದರ ಬದಲು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬೇಕು. ವಾಣಿಜ್ಯ ಮಂಡಳಿ ಯಾವುದೇ ಸಮಸ್ಯೆ ಇದ್ದರೂ ಅದನ್ನು ಬಗೆಹರಿಸಲು ಸಿದ್ಧ.

ನಾನು ವಕೀಲರ ಸಂಘ ಹಾಗೂ ನ್ಯಾಯಾಲಯದಲ್ಲಿ ಮನವಿ ಮಾಡುತ್ತೇನೆ, ಯಾವುದೇ ಸಿನಿಮಾಕ್ಕೂ ತಡೆ ತರುವ ಮೊದಲು ಚಿತ್ರವನ್ನು ಎಕ್ಸಪರ್ಟ್‌ ಸಮಿತಿ ನೋಡಲಿ. ಆ ನಂತರ ಮುಂದಿನ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡುತ್ತೇನೆ. ಈ ಕುರಿತು ಮುಂದಿನ ದಿನಗಳಲ್ಲಿ ವಕೀಲರ ಸಂಘಕ್ಕೆ ಮಂಡಳಿಯಿಂದ ಪತ್ರ ಮುಖೇನ ಮನವಿ ಕೂಡಾ ಮಾಡುತ್ತೇನೆ. ನಮಗೆ ನ್ಯಾಯಾಲಯದ ಬಗ್ಗೆ ಅಪಾರ ಗೌರವವಿದೆ.

ಆದರೆ, “ಅಂಜನಿಪುತ್ರ’ದಲ್ಲಿನ ಸಂಭಾಷಣೆಯನ್ನು ಕಟ್‌ ಮಾಡಿ, ಮತ್ತೆ ಸೆನ್ಸಾರ್‌ ಮಾಡಿಸುವಲ್ಲಿ ತಡವಾಗಿದೆಯೇ ಹೊರತು, ಯಾರು ಕೂಡಾ ನ್ಯಾಯಾಲಯದ ಆಜ್ನೆಯನ್ನು ಧಿಕ್ಕರಿಸಿಲ್ಲ. ಮುಂದಿನ ದಿನಗಳಲ್ಲಿ ಸಿನಿಮಾಗಳ ಕಾನೂನು ತೊಡಕನ್ನು ಆದಷ್ಟು ಮಾತುಕತೆಯ ಮೂಲಕ ಬಗೆಹರಿಸಲು ಪ್ರಯತ್ನಿಸಬೇಕೆಂದು ಅವರು ಮನವಿ ಮಾಡಿದರು. ಚಿತ್ರದ ನಿರ್ಮಾಪಕ ಎಂ.ಎನ್‌.ಕುಮಾರ್‌ಗೆ ಒಂದು ದಿನ ಸಿನಿಮಾ ನಿಂತಿದ್ದರಿಂದ ಸಾಕಷ್ಟು ನಷ್ಟವಾಗಿದ್ದು ಸುಳ್ಳಲ್ಲ. ಆದರೆ, ಎಷ್ಟು ನಷ್ಟವಾಗಿದೆ ಎಂಬುದನ್ನು ಅವರು ಹೇಳಲು ಸಿದ್ಧರಿಲ್ಲ.

“ಸಿನಿಮಾದಿಂದ ಒಂದಷ್ಟು ನಷ್ಟವಾಗಿರೋದು ನಿಜ. ಆದರೆ, ಮುಂದಿನ ದಿನಗಳಲ್ಲಿ ಅಭಿಮಾನಿಗಳು ಆ ನಷ್ಟವನ್ನು ಭರಿಸಿಕೊಡುತ್ತಾರೆಂಬ ವಿಶ್ವಾಸವಿದೆ. ಒಂದು ದಿನ ಶೋ ನಿಂತಿದೆ. ಆದರೆ ಚಿತ್ರಮಂದಿರದ ಮಾಲೀಕರು ಬೇರೆ ಸಿನಿಮಾ ಹಾಕಿಲ್ಲ. ಒಂದು ಚಿತ್ರಮಂದಿರ ಕೂಡಾ ಕಡಿಮೆಯಾಗಿಲ್ಲ. 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನ ಕಾಣುತ್ತಿದೆ. ವಕೀಲರು ಅವರಿಗಾದ ಬೇಸರದ ಬಗ್ಗೆ ಕೇಳಿದ್ದು ತಪ್ಪಲ್ಲ. ಆದರೆ, ಕೇಳಲು ಬಂದ ರೀತಿ ಸರಿ ಇರಲಿಲ್ಲ ಅನಿಸಿಲ್ಲ. ನೇರವಾಗಿ ಕೇಳಿದರೆ ನಾವೇ ಕಟ್‌ ಮಾಡೋಕೆ ರೆಡಿ ಇದ್ದೇವು.

Advertisement

ನನಗೆ ಬೇವು-ಬೆಲ್ಲ ಸ್ವಲ್ಪ ಬೇಗನೇ ಬಂದಿದೆ’ ಎನ್ನುವ ಅವರಿಗೆ ಕಷ್ಟದ ಸಮಯದಲ್ಲಿ ಬೆಂಬಲಕ್ಕೆ ಬಾರದ ಚಿತ್ರರಂಗದ ಮಂದಿಯ ಬಗ್ಗೆ ಬೇಸರವಿದೆ. “ನಾನು ಅನೇಕರ ಕಷ್ಟಕ್ಕೆ ಸ್ಪಂಧಿಸಿದ್ದೇವೆ. ಅದು ನನ್ನ ಕರ್ತವ್ಯ. ಬೇರೆಯವರು ಬೆಂಬಲಕ್ಕೆ ಬರೋದು ಅವರ ಇಚ್ಛೆ’ ಎನ್ನುತ್ತಾರೆ. ಪುನೀತ್‌ ರಾಜಕುಮಾರ್‌ ಅವರಿಗೆ ಅಭಿಮಾನಿಗಳು ಈ ಸಿನಿಮಾವನ್ನು ಹಬ್ಬದ ರೀತಿ ಸಂಭ್ರಮಿಸಿದ ಬಗ್ಗೆ ಖುಷಿ ಇದೆ. “ಸಮಸ್ಯೆ ಬಗೆಹರಿದಿದೆ. ಮತ್ತೆ ಸಿನಿಮಾ ಆರಂಭವಾಗಿದೆ. ಬಂದು ನೋಡಿ’ ಎಂದರು. ನಿರ್ದೇಶಕ ಹರ್ಷ ಸಿನಿಮಾದ ಸಮಸ್ಯೆ ಬಗೆಹರಿದಿರುವ ಬಗ್ಗೆ ನಿರಾಳರಾಗಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next