ಗೋಕಾಕ: ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಅನುಕರಣೆ ಮಾಡದೇ ಭಾರತೀಯ ಸಂಸ್ಕೃತಿಯಂತೆ ಸಮಾಜಮುಖೀ ಕಾರ್ಯಗಳನ್ನು ಮಾಡುವ ಮೂಲಕ ಜನ್ಮದಿನ ಆಚರಿಸಿದರೆ ಅರ್ಥಪೂರ್ಣವಾಗಿರುತ್ತದೆ ಎಂದು ತಾಲೂಕಾ ಆರೋಗ್ಯಾಧಿಕಾರಿ ಡಾ| ಆರ್.ಎಸ್. ಬೆಣಚಿನಮರಡಿ ಹೇಳಿದರು.
ನಗರದ ಅಮ್ಮಾಜಿ ನೃತ್ಯ ಶಾಲೆಯಲ್ಲಿ ಸಿರಿಗನ್ನಡ ಮಹಿಳಾ ವೇದಿಕೆಯ ತಾಲೂಕಾ ಘಟಕ ವತಿಯಿಂದ ಡಾ|ಅಶೋಕ ಜೀರಗ್ಯಾಳ 58ನೇ ಜನ್ಮದಿನ ನಿಮಿತ್ತ ಹಮ್ಮಿಕೊಂಡ ದಾಸ ಸಾಹಿತ್ಯ ಭಜನಾ ಸ್ಪರ್ಧೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಇಂದು ನಾವೆಲ್ಲ ಕಲಾ ಪೋಷಕರಾಗಿ ಕಲೆ ಹಾಗೂ ಕಲಾವಿದರನ್ನು ಉಳಿಸಿ ಬೆಳೆಸಬೇಕಾಗಿದೆ. ಡಾ| ಜೀರಗ್ಯಾಳ ಅವರು ತಮ್ಮ ವೈದ್ಯಕೀಯ ಸೇವೆಯೊಂದಿಗೆ ತಮ್ಮ ಪತ್ನಿ ಅಮ್ಮಾಜಿ ನೃತ್ಯ ಶಾಲೆಯ ಮುಖ್ಯಸ್ಥೆ ರಜನಿ ಜೀರಗ್ಯಾಳ ಅವರಿಗೆ ಪ್ರೋತ್ಸಾಹ ನೀಡುತ್ತಿರುವುದರಿಂದ ನಗರದಲ್ಲಿಯ ಪ್ರತಿಭೆಗಳು ಇಂದು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಗೋಕಾವಿಯ ಕೀರ್ತಿಯನ್ನು ಹೆಚ್ಚಿಸುತ್ತಿದ್ದಾರೆ ಎಂದರು.
ಸಿರಿಗನ್ನಡ ಮಹಿಳಾ ವೇದಿಕೆಯ ರಾಜ್ಯ ಉಪಾಧ್ಯಕ್ಷೆ ರಜನಿ ಜೀರಗ್ಯಾಳ ಮಾತನಾಡಿ, ಗೋಕಾಕ ನಗರ ಸಾಂಸ್ಕೃತಿಕವಾಗಿ ಹೆಮ್ಮರವಾಗಿ ಬೆಳೆಯುತ್ತಿದ್ದು, ಅದನ್ನು ಇನ್ನೂ ಹೆಚ್ಚು ಶ್ರೀಮಂತಗೊಳಿಸಿ ಮೈಸೂರಿನಂತೆ ವಿಶ್ವ ವಿಖ್ಯಾತಗೊಳಿಸಲು ಇಲ್ಲಿಯ ಕಲೆ, ಸಾಹಿತ್ಯ, ಕಲಾವಿದರಿಗೆ ಪ್ರೋತಾಹ ನೀಡಲು ಪ್ರಯತ್ನಿಸೋಣ ಎಂದರು.
ಇದೇ ಸಂದರ್ಭದಲ್ಲಿ ದಾಸ ಸಾಹಿತ್ಯ ಭಜನಾ ಸ್ಪರ್ಧೆಯಲ್ಲಿ ವಿಜೇತರಿಗೆ ಗಣ್ಯರು ಬಹುಮಾನ ವಿತರಿಸಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಕಲಾವಿದರು ಹಾಗೂ ಸಾಹಿತಿಗಳನ್ನು ಸತ್ಕರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಡಾ| ಅಶೋಕ ಜೀರಗ್ಯಾಳ, ಡಾ| ಸಿ.ಕೆ.ನಾವಲಗಿ, ಪ್ರೋ, ಚಂದ್ರಶೇಖರ ಅಕ್ಕಿ, ಸಾಹಿತಿ ಮಹಾಲಿಂಗ ಮಂಗಿ, ಜಯಾನಂದ ಮಾದರ, ಸಂಗೀತಾ ಬನ್ನೂರ, ವೈಶಾಲಿ ಭರಭರಿ, ಈಶ್ವರಚಂದ್ರ ಬೆಟಗೇರಿ, ವೀರೇಂದ್ರ ಪತಕಿ, ಜಿ.ಕೆ. ಕಾಡೇಶಕುಮಾರ, ಈಶ್ವರ ಮಮದಾಪೂರ, ಅಪ್ಪುರಾಜ ಗೋರಕನ್ನವರ ಸೇರಿದಂತೆ ಅನೇಕರು ಇದ್ದರು.