Advertisement

ಅವಸರದಿಂದ ಕೆಲಸ ಮಾಡಿ ಕೆಡಿಸದಿರಿ

09:54 AM Jun 20, 2018 | Team Udayavani |

ದಾವಣಗೆರೆ: ಗಾಜಿನಮನೆ ನಿರ್ಮಾಣದಲ್ಲಿ ಆಗಿರುವ ಲೋಪದೋಷ ಸರಿಪಡಿಸಿ ಪ್ರವಾಸಿಗರನ್ನ ಆಕರ್ಷಿಸುವಂತೆ ಮಾಡಬೇಕು ಎಂದು ದಾವಣಗೆರೆ ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಎಸ್‌.ಎ. ರವೀಂದ್ರನಾಥ್‌ ಭೂಸೇನಾ ನಿಗಮದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Advertisement

ಮಂಗಳವಾರ ಗಾಜಿನಮನೆಗೆ ದಿಢೀರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಈಚೆಗೆ ಗ್ಲಾಸ್‌ ಹೌಸ್‌ನ ಗಾಜು ಒಡೆದು ಬಿದ್ದಿವೆ. ಯಾವುದೇ ಅನಾಹುತ ಸಂಭವಿಸಿಲ್ಲ. ಮುಂಜಾಗ್ರತೆಯಾಗಿ ಸಡಿಲಗೊಂಡಿರುವ ಗಾಜುಗಳನ್ನು ತೆರವುಗೊಳಿಸಿ, ಹೊಸದಾಗಿ ಗಾಜುಗಳನ್ನು ಭದ್ರವಾಗಿ ಅಳವಡಿಸಬೇಕು. ಯಾವುದೇ ಕಾರಣಕ್ಕೂ ಗಾಜಿನ ಮನೆಯ ಗಾಜುಗಳು ಕಳಚಿ ಬೀಳದಂತೆ ಅಳವಡಿಸಲು ಕ್ರಮ ಕೈಗೊಳ್ಳಬೇಕು ಎಂದರು.

ಗಾಜಿನಮನೆಯ ನ್ಯೂನತೆ ಸರಿಪಡಿಸಿ, ಸಾರ್ವಜನಿಕರನ್ನ ಆಕರ್ಷಿಸುವಂತೆ ಮಾಡಬೇಕು ಎಂದಾಗ, ಅಧಿಕಾರಿಗಳು ಇನ್ನೂ 15 ದಿನಗಳಲ್ಲಿ ಎಲ್ಲವನ್ನೂ ಸರಿಪಡಿಸುವುದಾಗಿ ಹೇಳಿದರು. ಅವಸರ ಅವಸರವಾಗಿ ತರಾತುರಿಯಲ್ಲಿ ಕೆಲಸ
ಮಾಡಿ, ಕೆಡಿಸಬೇಡಿ, ಕೆಲಸ ನಿಧಾನವಾಗಿ ಆದರೂ ಪರವಾಗಿಲ್ಲ. ಗುಣಮಟ್ಟದ ಕೆಲಸ ಮಾಡಬೇಕು. ಗಾಜುಗಳನ್ನು ಭದ್ರವಾಗಿ ಅಳವಡಿಸಿ ಮುಂದೆ ಯಾವುದೇ ಅನಾಹುತ ಸಂಭವಿಸದಂತೆ ಎಚ್ಚರ ವಹಿಸಬೇಕು ಎಂದು ಸೂಚಿಸಿದರು.

ಗಾಜಿನಮನೆಯ ಕಂಟ್ರೋಲ್‌ರೂಂ, ಸಂಗೀತ ಕಾರಂಜಿ ಹಾಗೂ ಸುತ್ತಮುತ್ತಲ ಪ್ರದೇಶ ವೀಕ್ಷಿಸಿ ಸುಸಜ್ಜಿತವಾಗಿ ಗ್ಲಾಸ್‌ಹೌಸ್‌ ನಿರ್ಮಾಣ ಆಗಿದೆ ಎಂದು ಶಾಸಕರು ಇದೇ ಸಂದರ್ಭದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು.

ಬಿಜೆಪಿ ಮುಖಂಡರಾದ ಶಿವರಾಜ ಪಾಟೀಲ, ಎಲ್‌.ಎನ್‌. ಕಲ್ಲೇಶ್‌, ರಾಂಪುರ ನರೇಂದ್ರ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಟಿ.ಆರ್‌. ವೇದಮೂರ್ತಿ, ತಹಶೀಲ್ದಾರ್‌ ಜಿ. ಸಂತೋಷ್‌ ಕುಮಾರ್‌, ತಾಲೂಕು ಪಂಚಾಯತಿ ಕಾರ್ಯ ನಿರ್ವಾಹಕಾಧಿಕಾರಿ ಎಲ್‌.ಎಸ್‌. ಪ್ರಭುದೇವ್‌, ಭೂ ಸೇನಾ ನಿಗಮದ ಅಧಿಕಾರಿಗಳು ಇದ್ದರು.

Advertisement

ಜಿಲ್ಲಾ ಚಿಗಟೇರಿ ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ರವೀಂದ್ರನಾಥ್‌, ಆಸ್ಪತ್ರೆ ಕಟ್ಟಡ ಶಿಥಿಲವಾಗಿದೆ. ಸಂಬಂಧಿತರು ಕಟ್ಟಡ ಸಂರಕ್ಷಣೆಗೆ ಹೆಚ್ಚಿನ ಗಮನ ನೀಡಬೇಕು. ಸ್ವತ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಆಗಬೇಕಾಗಿರುವ ಅಭಿವೃದ್ದಿ ಕಾರ್ಯಕ್ಕೆ ಅನುದಾನ ಬಳಕೆ ಮಾಡಿಕೊಳ್ಳಿ ಎಂದು ಸೂಚನೆ ನೀಡಿದರು.

ಪ್ರಧಾನಿಮಂತ್ರಿಗಳ ಮಹತ್ವಾಕಾಂಕ್ಷಿಯ ಜೆನರಿಕ್‌ ಔಷಧಿ ಮಳಿಗೆಯಿಂದ ಜನರಿಗೆ ಅನುಕೂಲ ಆಗುತ್ತದೆ. ಜೆನರಿಕ್‌ ಔಷಧಿ ಮಳಿಗೆಯಲ್ಲಿ ಕೆಲ ಔಷಧಿ ದೊರೆಯುವುದಿಲ್ಲ ಎಂಬ ದೂರು ಕೇಳಿ ಬರುತ್ತಿವೆ. ಆ ಬಗ್ಗೆ ಗಮನ ಹರಿಸಬೇಕು. ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡಬೇಕು. ರೋಗಿಗಳಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನಿಗಾ
ವಹಿಸಬೇಕು ಎಂದು ಸೂಚಿಸಿದರು.

ಆಸ್ಪತ್ರೆ ಅಧೀಕ್ಷಕಿ ಡಾ| ಎಚ್‌.ಡಿ. ನೀಲಾಂಬಿಕೆ, ನಿವಾಸಿ ವೈದ್ಯಾಧಿಕಾರಿ ಡಾ| ಎಚ್‌.ಎಸ್‌. ರಾಘವೇಂದ್ರಸ್ವಾಮಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next