ಬೆಂಗಳೂರು: ಸಿನಿಮಾಗಳಲ್ಲಿ ತೊದಲುವಿಕೆ ಸಮಸ್ಯೆಯ ಪಾತ್ರಗಳನ್ನು ದುರ್ಬಲವಾಗಿ ತೋರಿಸಿ, ಹಾಸ್ಯಕ್ಕೆ ಬಳಸುವುದು ನಿಲ್ಲಿಸಬೇಕೆಂದು ಒತ್ತಾಯಿಸಿ ಸಂವಾದ್ ಮೂಕ ಮತ್ತು ಕಿವುಡರ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಶನಿವಾರ ಹಮ್ಮಿಕೊಂಡಿದ್ದ ವಾಕಥಾನ್‌ಗೆ ನಗರ ಅಪರಾಧ ವಿಭಾಗದ ಎಐಜಿಪಿ ಅಶ್ವಿನಿ ಅವರು ಚಾಲನೆ ನೀಡಿದರು.
ಶನಿವಾರ ನಗರದ ಬಾಳೇಕುಂದ್ರಿ ವೃತ್ತದಿಂದ ಕಬ್ಬನ್‌ಉದ್ಯಾನದ ಪ್ರಸ್‌ಕ್ಲಬ್‌ವರೆಗೆ ವಾಕಥಾನ್ ನಡೆಸಿದ ವಿದ್ಯಾರ್ಥಿಗಳು, ತೊದಲುವಿಕೆಯ ಕುರಿತು ಜಾಗೃತಿ ಮೂಡಿಸುವ ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು. ಜತೆಗೆ ತಮ್ಮ ಅಭಿಯಾನಕ್ಕೆ ಆನ್‌ಲೈನ್‌ನಲ್ಲಿ ಸಹಿ ಹಾಕುವ ಮೂಲಕ ಬೆಂಬಲಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಅಭಿಯಾನದ ಕುರಿತು ಮಾಹಿತಿ ನೀಡಿದ ಶಿಕ್ಷಣ ಸಂಸ್ಥೆಯ ರಾಧಿಕಾ ಪೂವಯ್ಯ, ಸಿನಿಮಾ ಅತ್ಯಂತ ಪ್ರಭಾವಶಾಲಿ ಮಾಧ್ಯಮವಾಗಿರುವುದರಿಂದ ಜನರನ್ನು ಬಹುಬೇಗ ತಲುತ್ತದೆ. ಆದರೆ, ಇತ್ತೀಚಿಗೆ ಬಿಡುಗಡೆಯಾಗುತ್ತಿರುವ ಸಿನಿಮಾಗಳಲ್ಲಿ ತೊದಲುವಿಕೆ ಸಮಸ್ಯೆ ಇರುವ ಪಾತ್ರಗಳನ್ನು ಹೆಚ್ಚು ಹಾಸ್ಯಕ್ಕಾಗಿ ಬಳಸಿ, ಅವರು ದುರ್ಬಲರು ಎಂಬುವಂತೆ ತೋರಿಸಲಾಗುತ್ತಿರುವುದು ಸರಿಯಲ್ಲ ಎಂದು ದೂರಿದರು.
ತೊದಲುವಿಕೆಯನ್ನು ಕೆಲವೊಂದು ವಿಧಾನಗಳನ್ನು ಅನುಸರಿಸುವ ಮೂಲಕ ಸರಿಪಡಿಸಿಕೊಳ್ಳಬಹುದಾಗಿದ್ದು, ಅದು ಅಂಗವಿಕಲತೆಯಲ್ಲ. ತೊದಲುವಿಕೆ ಇರುವ ಪಾತ್ರಗಳನ್ನು ದುರ್ಬಲವಾಗಿ ಬಿಂಬಿಸುವುದರಿಂದ ನಿಜ ಜೀವನದಲ್ಲಿ ಇಂತಹ ತೊಂದರೆ ಅನುಭವಿಸುವವರು ತಮ್ಮ ಆತ್ಮಸ್ಥೈರ್ಯವನ್ನು ಕಳೆದುಕೊಳ್ಳುವ ಅಪಾಯವಿದೆ.
ಆ ಹಿನ್ನೆಲೆಯಲ್ಲಿ ತೊದಲುವಿಕೆಯನ್ನು ಹಾಸ್ಯಕ್ಕಾಗಿ ಹಾಗೂ ಅಂತಹ ಪಾತ್ರಗಳನ್ನು ದುರ್ಬಲವಾಗಿ ತೋರಿಸುವುದನ್ನು ನಿಲ್ಲಿಸುವಂತೆ ಕೇಂದ್ರ ಸಚಿವರಿಗೆ ಮನವಿ ನೀಡಲು ಅಭಿಯಾನ ಆರಂಭಿಸಿದ್ದು, ಸಾರ್ವಜನಿಕರು change.orgamvaadinstitute ನಲ್ಲಿ ಸಹಿ ಹಾಕುವ ಮೂಲಕ ಅಭಿಯಾನವನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.