ತಿ.ನರಸೀಪುರ: ಯಾವುದೇ ರೀತಿಯ ದೌರ್ಜನ್ಯ ನಡೆದ ವೇಳೆ ಅದನ್ನು ಮುಚ್ಚಿಡದೇ ತಮ್ಮ ಆಪ್ತರೊಂದಿಗೆ ಹಂಚಿಕೊಂಡಾಗ ಮಾತ್ರ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅರುಂಧತಿ ವಿದ್ಯಾರ್ಥಿಗಳಿಗೆ ಸಲಹೆ ಮಾಡಿದರು.
ಮೈಸೂರಿನ ಆರ್‌ಎಲ್‌ಎಚ್‌ಪಿ- ಚೈಲ್ಡ್ ಲೈನ್ -1098 ವತಿಯಿಂದ ತಾಲೂಕಿನ ಕೊಡಗಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ತೆರೆದ ಮನೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅನೇಕ ಕಡೆ ಮಕ್ಕಳ ಮೇಲೆ ದೌರ್ಜನ್ಯಗಳು ನಡೆದಾಗ ಭಯ ಪಟ್ಟು ಹೇಳುವುದಿಲ್ಲ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳು ಮಕ್ಕಳಿಗೆ ಗೊತ್ತಿರುವಂತಹ ವ್ಯಕ್ತಿಗಳಿಂದಲೇ ನಡೆಯುತ್ತಿರುವುದು ವಿಷಾದನೀಯ.
ಪ್ರಸ್ತುತ ಪೋಕ್ಸೊ ಕಾಯ್ದೆ ಇದೆ. ಯಾವುದೇ ಅನುಚಿತ ಘಟನೆಗಳು ನಡೆದಾಗ ಪೋಷಕರು, ಶಿಕ್ಷಕರು, ಆಪ್ತರ ಜತೆ ತಿಳಿಸಿದಾಗ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬಹುದು. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ-2012 ಇದ್ದು ಮಕ್ಕಳು ಇದರ ವಿರುದ್ಧ ಧ್ವನಿ ಎತ್ತಬೇಕು ಆಗ ಮಾತ್ರ ನಿಯಂತ್ರಣ ಸಾಧ್ಯ ಎಂದರು.
18 ವರ್ಷದೊಳಗಿನವರನ್ನು ಮಕ್ಕಳು ಎನ್ನಲಾಗುತ್ತಿದ್ದು ಇವರಿಗೆ ಬದುಕಲು, ರಕ್ಷಣೆ ಪಡೆಯಲು, ವಿಕಾಸ ಹೊಂದಲು ಹಾಗೂ ಭಾಗವಹಿಸುವ ನಾಲ್ಕು ಹಕ್ಕು ಗಳಿವೆ. ಅವುಗಳ ಉಲ್ಲಂಘನೆಯಾಗಬಾರದು.
ಸಾಮಾಜಿಕ ಪಿಡುಗುಗಳಲ್ಲಿ ಒಂದಾದ ಬಾಲ್ಯ ವಿವಾಹ. ಇಂದಿಗೂ ಜೀವಂತವಾಗಿದ್ದು, ನಮ್ಮಲ್ಲಿ ಅತಿ ಹೆಚ್ಚು ಬಾಲ್ಯವಿವಾಹಗಳು ಜರುಗುತ್ತಿರುವುದು ದುರದೃಷ್ಟವೇ ಸರಿ. 18 ವರ್ಷದ ಒಳಗಿನ ಬಾಲಕಿಗೆ, 21 ವರ್ಷದ ಒಳಗಿನ ಪುರುಷನಿಗೆ ವಿವಾಹ ಮಾಡಿದಲ್ಲಿ ಅದನ್ನು ಬಾಲ್ಯವಿವಾಹ ಎಂದು ಕರೆಯುತ್ತಾರೆ. ಬಾಲ್ಯ ವಿವಾಹ ನಿಷೇಧ ಕಾಯ್ದೆ 2016 ರ ಪ್ರಕಾರ ಇದು ಅಸಿಂಧುವಾಗುತ್ತದೆ. ಬಾಲ್ಯವಿವಾಹ ಮಾಡಿದಲ್ಲಿ ಕನಿಷ್ಠ ಒಂದು ವರ್ಷದಿಂದ ಎರಡು ವರ್ಷದವರೆಗೆ ಜೈಲು ಶಿಕ್ಷೆ
ಮತ್ತು ಒಂದು ಲಕ್ಷ ರೂ ದಂಡ ಇರುತ್ತದೆ.
ಮಕ್ಕಳಿಗೆ ಮಾಹಿತಿ ದೊರೆತಲ್ಲಿ ಕೂಡಲೇ ಉಚಿತ ಸಹಾಯವಣಿ ಚೈಲ್ಡ್ ಲೈನ್- 1098 ಗೆ ಕರೆ ಮಾಡುವಂತೆ ಸಲಹೆ ಮಾಡಿದರು. ಚೈಲ್ಡ್ ಲೈನ್ ಸಂಯೋಜಕ ಶಶಿಕುಮಾರ್, ಮಕ್ಕಳ ರಕ್ಷಣಾ ಘಟಕದ ಪಿಒ ಅಪೇಕ್ಷಿತ, ಶಾಲೆಯ ಮುಖ್ಯ ಶಿಕ್ಷಕ ಜಗದೀಶ್, ಮಕ್ಕಳ ಪ್ರತಿನಿಧಿಯಾಗಿ ಕುಸುಮಾ, ಶಿಕ್ಷಣ ಇಲಾಖೆ ಸಿಆರ್ ಪಿ.ಚಂದ್ರಶೇಖರ, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ತಿಲಕ್ ರಾಜ್ , ಅಂಗನವಾಡಿ ಕಾರ್ಯಕರ್ತೆ ಲೋಕೇಶ್ವರಿ, ಶಾಲೆಯ ಶಿಕ್ಷಕರು ಮತ್ತು ಮಕ್ಕಳು ಇದ್ದರು.