Advertisement

ಸರ್ಕಾರಿ ಮಾತ್ರೆ ನುಂಗಲು ಹಿಂಜರಿಕೆ ಬೇಡ

02:24 PM Sep 29, 2018 | |

ವಾಡಿ: ವಿವಿಧ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆ ಮೂಲಕ ಅಭಿಯಾನ ರೂಪದಲ್ಲಿ ಸರಕಾರ ವಿತರಿಸುವ ಯಾವುದೇ ಮಾತ್ರೆಗಳನ್ನು ನುಂಗಲು ಸಾರ್ವಜನಿಕರು ಹಿಂಜರಿಯಬಾರದು ಎಂದು ತಾಲೂಕು ವೈದ್ಯಾಧಿಕಾರಿ ಸುರೇಶ ಮೇಕಿನ್‌ ಹೇಳಿದರು. 

Advertisement

ಪುರಸಭೆ ವತಿಯಿಂದ ಶುಕ್ರವಾರ ಪಟ್ಟಣದಲ್ಲಿ ಏರ್ಪಡಿಸಲಾಗಿದ್ದ ಆರೋಗ್ಯ ಅರಿವು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸೊಳ್ಳೆಗಳ ಕಚ್ಚುವಿಕೆಯಿಂದ ಹರಡುವ ಸಾಂಕ್ರಾಮಿಕ ರೋಗಗಳಾದ ಮಲೇರಿಯಾ, ಡೆಂಘೀ ಹಾಗೂ ಆನೆಕಾಲು ರೋಗಗಳು ಹರಡದಂತೆ ತಡೆಯಲು ಮುಂಜಾಗೃತಾ ಕ್ರಮವಾಗಿ ಆರೋಗ್ಯ ಇಲಾಖೆ ವತಿಯಿಂದ ಮಾತ್ರೆ ವಿತರಣೆ ಅಭಿಯಾನ
ಹಾಕಿಕೊಳ್ಳಲಾಗುತ್ತಿದೆ. ಶಾಲೆಗಳಲ್ಲಿ ಮಕ್ಕಳಿಗೆ ಮತ್ತು ಮನೆಗಳಿಗೆ ತೆರಳಿ ರೋಗನಿರೋಧಕ ಮಾತ್ರೆಗಳನ್ನು ನೀಡಲಾಗುತ್ತದೆ. ಮಾತ್ರೆಗಳ ಸೇವನೆಯಿಂದ ಅಡ್ಡಪರಿಣಾಮ ಉಂಟಾಗುತ್ತದೆ ಎಂಬ ತಪ್ಪು ಭಾವನೆ ಜನರಲ್ಲಿದೆ. ಇದು ರೋಗಗಳ ನಿಯಂತ್ರಣಕ್ಕೆ ಅಡ್ಡಿಯಾಗುತ್ತಿದೆ. ಜನರಲ್ಲಿನ ಅಪನಂಬಿಕೆ ಹೊಡೆದೋಡಿಸಲು ಜನಪ್ರತಿನಿಧಿಗಳು, ಹಿರಿಯ ಮುಖಂಡರು ಮತ್ತು ಸಂಘ ಸಂಸ್ಥೆಗಳ ಕಾರ್ಯಕರ್ತರು ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಬೇಕು ಎಂದರು.

ವ್ಯಾಪಕ ಜಾಗೃತಿ ಅಭಿಯಾನದ ಮೂಲಕವೇ ರಾಜ್ಯದಲ್ಲಿ ಪೋಲಿಯೋ ರೋಗವನ್ನು ಸಂಪೂರ್ಣ ನಿಯಂತ್ರಣಕ್ಕೆ ತರಲಾಗಿದೆ. ಈಗ ಇಂದ್ರಧನುಷ್‌ ಎನ್ನುವ ಅಭಿಯಾನವನ್ನು ಜನರ ಆರೋಗ್ಯ ಕಾಳಜಿಯೊಂದಿಗೆ ಆರಂಭಿಸಲಾಗಿದೆ. ಆನೆಕಾಲು ರೋಗ ಕಲಬುರಗಿ ಜಿಲ್ಲೆಯಲ್ಲಿ ಕಾಣಿಸಿಕೊಂಡಿದೆ.
 
ವಾಡಿ ಪಟ್ಟಣದಲ್ಲಿ ರೋಗ ಶಂಕಿತರ ರಕ್ತ ಪರೀಕ್ಷೆ ಮಾಡಲಾಗಿದ್ದು, ಮೂರು ಜನರಿಗೆ ಆನೆಕಾಲು ರೋಗದ ಸೋಂಕು ತಗುಲಿದೆ. ರೋಗ ನಿರೋಧಕ ಮಾತ್ರೆಗಳನ್ನು ನೀಡಲು ಮನೆಗೆ ಹೋದರೂ ಕೆಲವರು ತೆಗೆದುಕೊಳ್ಳಲು ನಿರಾಕರಿಸಿದ್ದಾರೆ ಎಂದು ಕಳವಳ ವಕ್ತಪಡಿಸಿದರು.

ಸೊಳ್ಳೆ ಕಚ್ಚಿದ 10 ವರ್ಷಗಳ ನಂತರ ಕಾಲು ಮತ್ತು ಕೈಗಳು ಊದಿಕೊಳ್ಳುತ್ತವೆ. ಆಗ ರೋಗ ನಿಯಂತ್ರಣ ಅಸಾಧ್ಯವಾಗುತ್ತದೆ. ಮಾತ್ರೆಗಳನ್ನು ನುಂಗಿದರೆ ಆನೆಕಾಲು ರೋಗ ಹರಡದಂತೆ ತಡೆದು ಆರೋಗ್ಯವಂತರಾಗಿ ಬದುಕಬಹುದು ಎಂದರು.
ಪುರಸಭೆ ಸದಸ್ಯ ದೇವಿಂದ್ರ ಕರದಳ್ಳಿ ಮಾತನಾಡಿ, ಅಸ್ವತ್ಛತೆ ಎಲ್ಲಿರುತ್ತದೋ ಅಲ್ಲಿ ರೋಗಾಣುಗಳಿರುತ್ತವೆ. ಅದು ನಮ್ಮ ಅನಾರೋಗ್ಯಕ್ಕೆ ಕಾರಣವಾಗುತ್ತದೆ.

ಪುರಸಭೆ ಪೌರಕಾರ್ಮಿಕರು ಪಟ್ಟಣದ ಸ್ವತ್ಛತೆಗೆ ಶ್ರಮಿಸುತ್ತಿದ್ದಾರೆ. ಹಿಂದಿಗಿಂತಲೂ ಇಂದು ವಾಡಿ ಪಟ್ಟಣ ಸ್ವತ್ಛತೆಯಲ್ಲಿ ಮುಂದಿದೆ. ಮನೆ ಮನೆಯಿಂದ ಕಸ ಸಂಗ್ರಹ ಕಾರ್ಯ ಶುರುವಾದ್ದರಿಂದ ಅಸ್ವತ್ಛತೆ ನಿಯಂತ್ರಣದಲ್ಲಿದೆ ಎಂದು ಹೇಳಿದರು.

Advertisement

ಪುರಸಭೆ ಅಧ್ಯಕ್ಷೆ ಮೈನಾಬಾಯಿ ರಾಠೊಡ ಅಧ್ಯಕ್ಷತೆ ವಹಿಸಿದ್ದರು. ಸಮುದಾಯ ಆರೋಗ್ಯ ಕೇಂದ್ರದ ವೈದ್ಯೆ ಡಾ| ಅಮೃತಾ, ಪುರಸಭೆ ಸದಸ್ಯರಾದ ಶರಣು ನಾಟೀಕಾರ, ಶೋಭಾ ಪವಾರ, ಅನಿತಾ ರಾಠೊಡ, ಜಿಲ್ಲಾ ಸಮೀಕ್ಷಣಾಧಿಕಾರಿ ಅನೀಲ ತಾಳಿಕೋಟಿ, ಪುರಸಭೆ ಸಮುದಾಯ ಸಂಘಟನಾಧಿಕಾರಿ ಕಾಶೀನಾಥ ಧನ್ನಿ, ಕಂದಾಯ ಅಧಿಕಾರಿ ಎಂ.ಪಂಕಜಾ, ಹಿರಿಯ ಆರೋಗ್ಯ ನಿರೀಕ್ಷಕ
ಶರಣಪ್ಪ ಮಡಿವಾಳ, ಈಶ್ವರ ಅಂಬೇಕರ, ವಿಶ್ವನಾಥ ಭಾಗೋಡಿ, ವಿಠ್ಠಲ ಸಿಂಗ್‌, ಶಿಕ್ಷಕ ರಮೇಶ ಮಾಶಾಳ, ವಿಶ್ವಾರಾಧ್ಯ ಪಾಲ್ಗೊಂಡಿದ್ದರು.

ಮಲ್ಲಿಕಾರ್ಜುನ ಹಡಪದ ನಿರೂಪಿಸಿ, ವಂದಿಸಿದರು. ನಂತರ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾ ನಡೆಯಿತೆ.

Advertisement

Udayavani is now on Telegram. Click here to join our channel and stay updated with the latest news.

Next