Advertisement
ಖಂಡನೀಯ ವಿಚಾರವೆಂದರೆ ಏ.26ರಂದು ಘಟನೆ ನಡೆದರೂ ಪೊಲೀಸರು ಅದನ್ನು ಗಂಭೀರವಾಗಿ ಪರಿಣಿಸಿದ್ದು ಮೇ 7ರಂದು. ಪ್ರಧಾನಿ ನರೇಂದ್ರ ಮೋದಿಯವರು ಪ್ರಚಾರ ಭಾಷಣದಲ್ಲಿ ಆ ಪ್ರಕರಣವನ್ನು ಪ್ರಸ್ತಾಪ ಮಾಡಿದ್ದಾರೆ. ದೇಶದಲ್ಲಿ ಅಸಹಿಷ್ಣುತೆಯ ವಾತಾವಾರಣ ಇದೆ ಎಂದು ಆರೋಪಿಸಿ ಕೆಲ ವರ್ಷಗಳ ಹಿಂದೆ ದೇಶದಲ್ಲಿ ಪ್ರಶಸ್ತಿ ಹಿಂಪಡೆಯುವ ಚಳವಳಿ ಬಿರುಸಾಗಿದ್ದ ಘಟನೆಯನ್ನು ಉಲ್ಲೇಖೀಸಿದ್ದಾರೆ.
Related Articles
Advertisement
ಇನ್ನು ಬಹುಜನ ಸಮಾಜವಾದಿ ಪಕ್ಷದ ನಾಯಕಿ ಮಾಯಾವತಿ ಪ್ರಧಾನಿ ವಿರುದ್ಧ ಆಕ್ಷೇಪ ಮಾಡಿದ್ದಾರೆ. ದೇಶದ ವಿವಿಧ ಸ್ಥಳಗಳಲ್ಲಿ ಹಿಂದಿನ ಸಂದರ್ಭಗಳಲ್ಲಿ ದಲಿತ ಸಮುದಾಯದವರ ಮೇಲೆ ನಡೆದ ಹಲ್ಲೆ, ದೌರ್ಜನ್ಯ ಘಟನೆಗಳಿಗೆ ಹೊಣೆ ಹೊತ್ತು ಪ್ರಧಾನಿ ನರೇಂದ್ರ ಮೋದಿಯವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಇದು ರಾಜೀನಾಮೆ ಪಡೆದುಕೊಳ್ಳುವ ಅಥವಾ ನೀಡುವಂತೆ ಒತ್ತಡ ಹೇರುವ ವಿಚಾರ ಅಲ್ಲವೇ ಅಲ್ಲ. ನಿರ್ದಿಷ್ಟ ಪಕ್ಷದ ಅವಧಿಯಲ್ಲಿ ನಡೆಯುವ ಘಟನೆಗಳನ್ನು ಮಾತ್ರ ಖಂಡತುಂಡವಾಗಿ ಖಂಡಿಸಿ, ಉಳಿದ ಅವಧಿಯಲ್ಲಿ ನಡೆಯುವ ಕುಕೃತ್ಯಗಳಿಗೂ ತಮಗೂ ಸಂಬಂಧವೇ ಇಲ್ಲದಂತೆ ವರ್ತಿಸುವ ಚಿಂತನೆ ಮತ್ತು ನಿಲುವುಗಳ ಬಗ್ಗೆ ಮಾತ್ರ ಪ್ರಶ್ನಾರ್ಹ.
ಯಾರ ಅವಧಿಯಲ್ಲಿ ಯಾರಿಗೇ ಅನ್ಯಾಯವಾಗಲಿ, ಅದರ ವಿರುದ್ಧ ಕಾನೂನಿನ ಅನ್ವಯ ಕ್ರಮ ಕೈಗೊಳ್ಳಲೇ ಬೇಕು. ಈ ನಿಟ್ಟಿನಲ್ಲಿ ಯಾವುದೇ ರೀತಿಯಲ್ಲಿ ರಾಜಕೀಯ ಸಲ್ಲದು. ಒಂದು ವೇಳೆ ಆ ರೀತಿಯಾಗಿ ನಡೆಯುತ್ತಿದೆ ಎಂದಾದರೆ ಅದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲೇಬೇಕು. ರಾಜಕೀಯವಾಗಿ ಅಳ್ವಾರ್ ಪ್ರಕರಣವನ್ನು ಬಳಸಿಕೊಂಡು ಪಕ್ಷಗಳಿಗೆ ಹೆಚ್ಚಿನ ಮತಗಳು ಸಿಗಬಹುದು ಮತ್ತು ಲಾಭವಾಗಬಹುದು. ಆದರೆ ಆ ಕುಟುಂಬಕ್ಕೆ ಏನಾದರೂ ಪರಿಹಾರವೋ, ಅನುಕೂಲವೋ ಆಯಿತೋ ಎಂದು ಪ್ರಶ್ನೆ ಮಾಡಿದರೆ ಯಾರಿಂದಲೂ ಉತ್ತರ ಬರುವುದಿಲ್ಲ. ಹೀಗಾಗಿ, ಇಂಥ ಘಟನೆಗಳ ವಿರುದ್ಧ ಪಕ್ಷ-ಬೇಧ ಮರೆತು ಮಾತನಾಡುವುದೇ ಮಾನವೀಯತೆ.
ಅಳ್ವಾರ್‌ನಲ್ಲಿ ನಡೆದ ಘಟನೆಗಳು ನಡೆದು ಅದು ಮಾಧ್ಯಮಗಳ ಮೂಲಕ ಪ್ರಚಾರ ಪಡೆದುಕೊಂಡು ವಿವಾದ ಪಡೆಯುವ ಸಂಬಂಧಿತ ಇಲಾಖೆಗಳು ಕ್ರಮ ಕೈಗೊಳ್ಳಬಹುದಿತ್ತು. ಇದು ರಾಜಸ್ಥಾನದಲ್ಲಿನ ಕತೆ ಮಾತ್ರವಲ್ಲ, ಇತ್ತೀಚೆಗೆ ರಾಯಚೂರಿನಲ್ಲಿ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವಿನ ಪ್ರಕರಣವೂ ಅಷ್ಟೆ. ಸಂಬಂಧಿತ ಕಾಲೇಜಿನ ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದ ಬಳಿಕವಷ್ಟೇ ರಾಜ್ಯ ಸರ್ಕಾರ ಪ್ರಕರಣವನ್ನು ಸಿಐಡಿಗೆ ತನಿಖೆಗಾಗಿ ಒಪ್ಪಿಸಿತು. ಹೀಗಾಗಿ ಮುಂದಿನ ದಿನಗಳಲ್ಲಿಯಾದರೂ, ತನಿಖೆ ನಡೆಸುವ ಹೊಣೆ ಹೊತ್ತುಕೊಳ್ಳುವ ಸಂಸ್ಥೆಗಳು ಪ್ರಕರಣದ ಗಂಭೀರತೆ ಅರಿತು ನಡೆದುಕೊಳ್ಳಬೇಕು. ಸಂಘಟನೆಗಳೂ ಅಷ್ಟೇ ಹೊಣೆಯರಿತು ನಿರ್ದಿಷ್ಟ ಘಟನೆ, ಪ್ರಕರಣಗಳಿಗೆ ಮಾತ್ರ ಧ್ವನಿಯೆತ್ತಿದರೆ ವಿವಾದವಾಗಿ ಮಾರ್ಪಾಡಾಗುತ್ತದೆ. ಅದರಿಂದಾಗಿ ನೊಂದವರಿಗೆ ಪರಿಹಾರ, ನೆಮ್ಮದಿ ಸಿಗುವ ಬದಲು ಅನನುಕೂಲವೇ ಆಗುತ್ತದೆ. ಈ ನಿಟ್ಟಿನಲ್ಲಿ ಎಲ್ಲರೂ, ಹೊಣೆಯರಿತು ವರ್ತಿಸಿದರೆ ಚೆನ್ನ.