Advertisement

ವಿಧಾನಸಭೆಗೆ ಘಟಬಂಧನ್‌ ಬೇಡ

11:43 AM Jul 24, 2017 | Team Udayavani |

ಬೆಂಗಳೂರು: ಮುಂದಿನ ಲೋಕಸಭಾ ಚುನಾವಣೆಗೆ ರಾಷ್ಟ್ರೀಯ ಮಟ್ಟದಲ್ಲಿ ಜಾತ್ಯತೀತ ಪಕ್ಷಗಳು ಒಂದಾಗುವ ಅಗತ್ಯತೆ ಇದೆ. ಆದರೆ, ಕರ್ನಾಟಕ ವಿಧಾನಸಭಾ ಚುನಾವಣೆಗೆ ಇದು ಅನ್ವಯಿಸುವುದಿಲ್ಲ. ಏಕೆಂದರೆ, ಕರ್ನಾಟಕದಲ್ಲಿ ಕಾಂಗ್ರೆಸ್‌ ಬಲಿಷ್ಠವಾಗಿದ್ದು, ಸ್ಪಷ್ಟ ಬಹುಮತ ಪಡೆಯಲಿದೆ ಎಂದು ರಾಜ್ಯಸಭಾ ಸದಸ್ಯ ಜೈರಾಮ್‌ ರಮೇಶ್‌ ಹೇಳಿದರು.

Advertisement

ನಗರದ ಜಿಕೆವಿಕೆ ಆವರಣದಲ್ಲಿ ನಡೆಯುತ್ತಿರುವ ಡಾ.ಬಿ.ಆರ್‌.ಅಂಬೇಡ್ಕರ್‌ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಭಾನುವಾರ ವಿಚಾರ ಮಂಡಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾ ಘಟಬಂಧನ್‌ ಐತಿಹಾಸಿಕ ಮತ್ತು ರಾಜಕೀಯ ಅಗತ್ಯ. ಮಮತಾ ಬ್ಯಾನರ್ಜಿ ಅವರು ಈಗಾಗಲೇ ಮಹಾ ಘಟಬಂಧನ್‌ಗೆ ಕರೆ ನೀಡಿದ್ದಾರೆ. ಬಿಹಾರದಲ್ಲಿ ಜಾರಿಯಲ್ಲಿದೆ. 2019ರ ಚುನಾವಣೆಗೆ ರಾಷ್ಟ್ರೀಯ ಮಟ್ಟದಲ್ಲಿ ಜಾತ್ಯತೀತ ಶಕ್ತಿ ಒಂದಾಗುವ ಅಗತ್ಯವಿದೆ ಎಂದರು.

ಆದರೆ, ಕರ್ನಾಟಕದಲ್ಲಿ ಸಮರ್ಥವಾದ ಮುಖ್ಯಮಂತ್ರಿ ಜತೆಗೆ ಕೆಪಿಸಿಸಿಗೆ ಫ‌ುಲ್‌ಟೈಮ್‌ ಅಧ್ಯಕ್ಷರಿದ್ದಾರೆ ಹಾಗೂ ರಾಜ್ಯ ಉಸ್ತುವಾರಿ ವಹಿಸಿಕೊಂಡಿರುವ ವೇಣುಗೋಪಾಲ್‌ ಚುರುಕಿನಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. 2018ರಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್‌ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬರಲಿದೆ. ಹೀಗಾಗಿ ಕರ್ನಾಟಕದಲ್ಲಿ ಮಹಾ ಘಟಬಂಧನ್‌ ಅಗತ್ಯವಿಲ್ಲ. ಆದರೆ, ಬೇರೆ ರಾಜ್ಯದಲ್ಲಿ ಅಲ್ಲಿನ ಪರಿಸ್ಥಿತಿ ನೋಡಿ ಹೊಂದಾಣಿಕೆ ಮಾಡಿಕೊಳ್ಳಲಿದ್ದೇವೆ ಎಂದರು.

ಗಾಂಧೀಜಿ ಅವರನ್ನು ಹೈಜಾಕ್‌ ಮಾಡಿದಂತೆ ಇಂದು ಆರ್‌ಎಸ್‌ಎಸ್‌ ಮತ್ತು ಮೋದಿಯವರು ಅಂಬೇಡ್ಕರ್‌ ಅವರನ್ನು ಹೈಜಾಕ್‌ ಮಾಡುತ್ತಿದ್ದಾರೆ. ಸಂಸತ್‌ನಲ್ಲಿ ಚರ್ಚೆಗೆ ಅವಕಾಶವೇ ನೀಡುತ್ತಿಲ್ಲ. ಒಟ್ಟಿನಲ್ಲಿ ಕೇಂದ್ರ ಸರ್ಕಾರ ಬೂಟಾಟಿಕೆಯ ರಾಜಕಾರಣ ನಡೆಸುತ್ತಿದೆ. ಸಂವಿಧಾನದ ಬಗ್ಗೆ ಅವರಿಗೆ ನಂಬಿಕೆಯಿಲ್ಲ.

ಸಂವಿಧಾನಿಕ ಸಂಸ್ಥೆಯನ್ನು ನಿಧಾನವಾಗಿ ನಿರ್ನಾಮ ಮಾಡಲು ಹೊರಟ್ಟಿದ್ದಾರೆ. ಮೋದಿ ಸರ್ಕಾರ ಕಳೆದ ಮೂರು ವರ್ಷದಲ್ಲಿ ತಂದಿರುವ ಎಲ್ಲಾ ಮಸೂದೆಯೂ ಹಣಕ್ಕೆ ಪ್ರೇರಣೆ ನಿಡುವಂತದ್ದಾಗಿದೆ ಎಂದು ಟೀಕಿಸಿದರು. ಇದೇ ವೇಳೆ ನಾಡಧ್ವಜಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಲು ಅವರು ನಿರಾಕರಿಸಿದರು. 

Advertisement

ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ ಭಾರತರತ್ನ, ಪದ್ಮ ಭೂಷಣ, ಪದ್ಮ ವಿಭೂಷಣ ಇತ್ಯಾದಿ ಪ್ರಶಸ್ತಿ ನೀಡುವ ಅಗತ್ಯವಿಲ್ಲ. ನಾನು ಒಂದು ದಿನದ ಮಟ್ಟಿಗೆ ಪ್ರಧಾನಿಯಾದರೆ ಇದನ್ನೆಲ್ಲ ರದ್ದು ಮಾಡುತ್ತೇನೆ. ಸಂಗೀತ ವಿದ್ವಾಂಸರಿಗೆ, ಕ್ರೀಡಾಪಟುಗಳಿಗೆ, ಸಾಮಾಜಿಕ ಹೋರಾಟಗಾರರಿಗೆ ಈ ಪ್ರಶಸ್ತಿ ಕೊಟ್ಟರೆ ಓಕೆ. ಆದರೆ ರಾಜಕಾರಣಿಗಳಿಗೆ ಏಕೆ ?
-ಜೈರಾಮ್‌ ರಮೇಶ್‌, ರಾಜ್ಯಸಭಾ ಸದಸ್ಯ

ಸಾಮಾಜಿಕ-ಆರ್ಥಿಕ ಅಸಮಾನತೆಯ ಸ್ವರೂಪ ಬದಲು 
ಬೆಂಗಳೂರು:
ದೇಶದ ಮೂಲಭೂತ ಸಮಸ್ಯೆಯಾಗಿರುವ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆ ಈಗಲೂ ಮುಂದುವರಿದಿದ್ದು, ಸ್ವರೂಪ ಬದಲಾಗಿದೆ ಎಂದು ರಾಜ್ಯಸಭಾ ಸದಸ್ಯ ಜೈರಾಮ್‌ ರಮೇಶ್‌ ಹೇಳಿದರು. ಡಾ.ಬಿ.ಆರ್‌.ಅಂಬೇಡ್ಕರ್‌ ಅಂತಾರಾಷ್ಟ್ರೀಯ ಸಮ್ಮೇಳನದ ವಿಚಾರ ಗೋಷ್ಠಿಯಲ್ಲಿ ಮಾತನಾಡಿದರು.

ಭಾರತವು ವಿಶ್ವದಲ್ಲೆಡೆ ಪ್ರಾಮುಖ್ಯತೆ ಪಡೆಯುತ್ತಿದೆ. ಆದರೆ, ನಮ್ಮ ಮೂಲಭೂತ ಸಮಸ್ಯೆಯಾದ ಸಾಮಾಜಿಕ ಹಾಗೂ ಆರ್ಥಿಕ ಅಸಮಾನತೆ ಇಂದಿಗೂ ಕಡಿಮೆಯಾಗಿಲ್ಲ. ಬದಲಾಗಿ ರಾಜಕೀಯ ರೂಪದಲ್ಲಿ ಕ್ರೋಡೀಕರಣಗೊಳ್ಳುತ್ತಿದೆ ಎಂದು ತಿಳಿಸಿದರು. ಸಾಮಾಕ ಹೋರಾಟಗಾರರಾದ ಅರುಣ್‌ ರಾಯ್‌ ಹಾಗೂ ಕೆವಿನ್‌ ಬ್ರೌನ್‌ ವಿಚಾರ ಮಂಡಿಸಿದರು. ಕಲ್ಪನಾ ಕನ್ನಂಬಿರನ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next