ಕಲಬುರಗಿ: ಕಳೆದ ಎರಡು-ಮೂರು ವರ್ಷಗಳಿಂದ ಕಬ್ಬಿನ ಬೆಲೆ ನಿಗದಿಯಲ್ಲಿ ಆಗುತ್ತಿರುವ ಅನ್ಯಾಯ ಖಂಡಿಸಿ ಈ ಬಾರಿ ಕಬ್ಬಿನ ಬೆಲೆ ನಿಗದಿ ಮಾಡುವ ತನಕ ಕಾರ್ಖಾನೆಗಳಿಗೆ ಕಬ್ಬು ಕೊಡಬೇಡಿ ಎಂದು ರೈತರಿಗೆ ಜಿಲ್ಲಾ ಕಬ್ಬು ಬೆಳೆಗಾರರ ಸಂಘ ಮನವಿ ಮಾಡಿದೆ.
ಕಳೆದ ಮೂರು ವರ್ಷಗಳಿಂದ ರೈತರಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಕಾರ್ಖಾನೆಗಳು ಹಾಗೂ ಸರಕಾರ ಸಮರ್ಪಕ ಬೆಲೆ ನೀಡುವಲ್ಲಿ ಮಿನಮೇಷ ಎಣಿಸುತ್ತಿವೆ. ಇದರಿಂದ ರೈತರಿಗೆ ಅನ್ಯಾಯವಾಗುತ್ತಿದೆ. ಪಕ್ಕದ ಮಹಾರಾಷ್ಟ್ರದಲ್ಲಿ ಕರ್ನಾಟಕಕ್ಕಿಂತಲೂ ಹೆಚ್ಚಿನ ಬೆಲೆ ನೀಡಲಾಗುತ್ತಿದೆ. ಈ ಬಾರಿ ಅಲ್ಲಿ 3100 ರೂ. ನೀಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಆದರೆ, ಕರ್ನಾಟಕದಲ್ಲಿ ಹಾಗೂ ಅದರಲ್ಲೂ ಹೈಕದಲ್ಲಿನ ನಾಲ್ಕು ಕಾರ್ಖಾನೆಗಳು ಉತ್ತಮ ಬೆಲೆ ನೀಡುವಲ್ಲಿ ರೈತರಿಗೆ ಅನ್ಯಾಯ ಮಾಡಿವೆ. ಸರಕಾರ ಇದಕ್ಕೆ ಪರೋಕ್ಷವಾಗಿ ಬೆಂಬಲಿಸುತ್ತಿದೆ ಎಂದು ಜಿಲ್ಲಾಧ್ಯಕ್ಷ ಜಗದೀಶ ಪಾಟೀಲ ರಾಜಾಪುರ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಈ ವರ್ಷ ಕಬ್ಬು ನುರಿಸುವ ಮುನ್ನವೇ ಕಬ್ಬಿನ ದರ ನಿಗದಿ ಮಾಡಿ ಕಬ್ಬು ಕಟಾವು ಮಾಡಲು ರೈತರು ಪಟ್ಟು ಹಿಡಿದಿದ್ದಾರೆ. ಇದಕ್ಕೆಲ್ಲಾ ಕಾರಣ ಕಾರ್ಖಾನೆಗಳು. ಕಳೆದ ವರ್ಷ ನಡೆಸಿದ ಕಣ್ಣಾಮುಚ್ಚಾಲೆಯಿಂದಾಗಿ ರೈತರು ಕಷ್ಟದ ದಿನಗಳನ್ನು ಎದುರಿಸಬೇಕಾಯಿತು. ಈ ಬಾರಿಯಾದರೂ ಕಬ್ಬು ನುರಿಸುವ ಮುನ್ನವೇ ದರ ನಿಗದಿ ಮಾಡಬೇಕು. ಕನಿಷ್ಠ 3ಸಾವಿರ ರೂ. ನಿಗದಿ ಮಾಡಬೇಕು. ಅಲ್ಲಿಯವರೆಗೆ ಯಾವುದೆ ಕಾರ್ಖಾನೆ ಕಬ್ಬು ನುರಿಸಬಾರದು ಎಂದು ಈಗಾಗಲೇ ಕಾರ್ಖಾನೆಗಳಿಗೆ ಮನವಿ ಮಾಡಲಾಗಿದೆ. ಕೆಲವು ಸ್ಪಂದಿಸಿವೆ, ಇನ್ನು ಕೆಲವು ಸ್ಪಂದಿಸುವ ಹಾದಿಯಲ್ಲಿವೆ.
ಆದ್ದರಿಂದ ರೈತರು ಅವಸರ ಮಾಡಬಾರದು. ಬೆಲೆ ನಿಗದಿ ಆದ ಮೇಲೆ ಕಬ್ಬು ಪೂರೈಕೆ ಮಾಡಬೇಕು ಎಂದರು. ಮಾರುಕಟ್ಟೆಯಲ್ಲಿ ಸಕ್ಕರೆ ಸಗಟು ದರ 3400 ರೂ. ಪ್ರತಿ ಕ್ವಿಂಟಾಲ್‌ಗೆ ಇದ್ದಾಗ, ಕಬ್ಬಿನ ದರ 2500 ರೂ. ನೀಡಲಾಗಿತ್ತು. ಈಗ ಸಕ್ಕರೆ ಬೆಲೆ 3900 ರೂ. ಇದೆ. ಆದ್ದರಿಂದ 3000 ರೂ. ನೀಡಬೇಕು. ಅಂದರೆ, ಹೋದ ವರ್ಷಕ್ಕಿಂತ ಈ ವರ್ಷ ಬೆಲೆಯಲ್ಲಿ 500 ರೂ. ಏರಿಕೆ ಆಗಿರುವುದರಿಂದ, ದರದಲ್ಲೂ 500 ರೂ. ಹೆಚ್ಚು ಮಾಡಬೇಕು ಎಂದರು.
ಕಳೆದ ಒಂದು ವಾರದಿಂದ ಕಬ್ಬಿನ ದರ ಹೆಚ್ಚಳ ಮಾಡುವಂತೆ ಆಗ್ರಹಿಸಿ ರಮೇಶ ಹೂಗಾರ ನೇತೃತ್ವದಲ್ಲಿ ಹವಳಗಾದ ರೇಣುಕಾ ಶುಗರ್ ಮುಂದೆ ಧರಣಿ ನಡೆಸಲಾಗುತ್ತಿದೆ. ಆದ್ದರಿಂದ ರೈತರು ಸಂಪೂರ್ಣ ದರ ನಿಗದಿಯಾಗುವವರೆ ಕಬ್ಬು ನೀಡಬಾರದು ಎಂದು ಮನವಿ ಮಾಡಿದರು. ರಾಜ್ಯ ಕಾರ್ಯದರ್ಶಿ ದತ್ತಾತ್ರೇಯ ಕುಲಕರ್ಣಿ, ಜಿಲ್ಲಾ ಕಾರ್ಯದರ್ಶಿ ಧರ್ಮರಾಜ ಸಾಹು, ಶಾಂತವೀರಪ್ಪ ಕಲಬುರಗಿ, ಶರಣಕುಮಾರ ಬಿಲ್ಲಾಡ, ನಾಗೇಂದ್ರರಾವ್ ದೇಶಮುಖ ಇದ್ದರು.