Advertisement

ನೀರಿನ ಸಮಸ್ಯೆಗೆ ಆಸ್ಪದ ಕೊಡಬೇಡಿ

11:52 AM Jan 18, 2019 | |

ಯಾದಗಿರಿ: ಮಳೆ ಅಭಾವದ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಸರಬರಾಜಿಗಾಗಿ ಜಿಲ್ಲೆಗೆ ಮಂಜೂರಾದ ವಿಶೇಷ ಅನುದಾನವನ್ನು ಸದ್ಬಳಕೆ ಮಾಡುವಂತೆ ಪ್ರವಾಸೋದ್ಯಮ ಇಲಾಖೆ ಸರ್ಕಾರದ ಕಾರ್ಯದರ್ಶಿಗಳು ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅನಿಲಕುಮಾರ ಟಿ.ಕೆ. ಸೂಚಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮಳೆ ಅಭಾವ ಇದೆ. ಬೇಸಿಗೆಯಲ್ಲಿ ಕುಡಿಯುವ ನೀರಿನ ತೊಂದರೆ ಎದುರಾಗಬಹುದು. ಹಾಗಾಗಿ, ಅಧಿಕಾರಿಗಳು ಜಿಲ್ಲೆಯ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ನಿರ್ದೇಶಿಸಿದರು.

ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್‌ ಮಾತನಾಡಿ, ಟಾಸ್ಕ್ ಫೋರ್ಸ್‌- 1ಕ್ಕೆ ಒಂದು ಕೋಟಿ ರೂಪಾಯಿ ಮಂಜೂರಾಗಿತ್ತು. ಇದರಲ್ಲಿ ಕೈಗೊಂಡ 107 ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದು, 93.83 ಲಕ್ಷ ರೂ. ಖರ್ಚಾಗಿದೆ. ಟಾಸ್ಕ್ ಫೋರ್ಸ್‌-2ಕ್ಕೆ 1.50 ಕೋಟಿ ಮಂಜೂರಾಗಿದ್ದು, 183 ಕಾಮಗಾರಿಗಳನ್ನು ಕೈಗೊಳ್ಳಲಾಗಿತ್ತು. ಇವುಗಳಲ್ಲಿ 167 ಕಾಮಗಾರಿ ಪೂರ್ಣಗೊಂಡಿದ್ದು, 16 ಕಾಮಗಾರಿ ಪ್ರಗತಿಯಲ್ಲಿವೆ. ಟಾಸ್ಕ್ಫೋರ್ಸ್‌-3ಕ್ಕೆ 1.50 ಕೋಟಿ ರೂ. ಮಂಜೂರಾಗಿದ್ದು, ಕ್ರಿಯಾ ಯೋಜನೆ ತಯಾರಿಸಬೇಕಿದೆ. ಇನ್ನು ಎನ್‌.ಸಿ.ಆರ್‌.ಎಫ್‌ ಗೆ ಮಂಜೂರಾದ 60 ಲಕ್ಷ ರೂ. ಅನುದಾನದಲ್ಲಿ 219 ಕಾಮಗಾರಿಗಳ ಕ್ರಿಯಾಯೋಜನೆ ಸಿದ್ಧವಾಗಿದೆ ಎಂದು ಮಾಹಿತಿ ನೀಡಿದರು.

ಜಿಪಂ ಸಿಇಒ ಕವಿತಾ ಎಸ್‌. ಮನ್ನಿಕೇರಿ ಮಾತನಾಡಿ, ಪ್ರಸಕ್ತ ಬೇಸಿಗೆಯಲ್ಲಿ ಜಿಲ್ಲೆಯ 49 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗಬಹುದು ಎಂದು ಗುರುತಿಸಲಾಗಿದೆ. ಈಗಾಗಲೇ 12 ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಸುರಪುರ ತಾಲೂಕಿನ ಎಂ. ಬೊಮ್ಮನಳ್ಳಿ ಹಾಗೂ ಯಕ್ತಾಪುರ ಗ್ರಾಮಗಳಲ್ಲಿ ಖಾಸಗಿ ಬೋರ್‌ವೆಲ್‌ಗ‌ಳ ಮೂಲಕ ನೀರು ಪೂರೈಸಲಾಗುತ್ತಿದೆ. ಅಲ್ಲದೆ, ಕುಡಿಯುವ ನೀರಿನ ಸಮಸ್ಯೆಗೆ ತಕ್ಷಣ ಸ್ಪಂದಿಸಲು ವಾಟ್ಸ್‌ಆಪ್‌ ಗ್ರೂಪ್‌ ತಯಾರಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯ ಹಿಂಗಾರು ಹಂಗಾಮಿನಲ್ಲಿ ಶೇ. 81ರಷ್ಟು ಮಳೆ ಕೊರತೆ ಇದೆ. ಇದರಿಂದ ಜೋಳ, ಕಡಲೆ, ಶೇಂಗಾ ಬೆಳೆಗಳು ಬಾಡುತ್ತಿವೆ. ಕೃಷಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳಿಂದ ಜಂಟಿ ಸಮೀಕ್ಷೆ ಕಾರ್ಯ ಪೂರ್ಣಗೊಂಡಿದೆ. ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆಯಡಿ ಜಿಲ್ಲೆಯಲ್ಲಿ 3,333 ರೈತರು ಬೆಳೆ ವಿಮೆ ಮಾಡಿಸಿದ್ದಾರೆ ಎಂದು ಜಂಟಿ ಕೃಷಿ ನಿರ್ದೇಶಕರು ಈ ಸಂದರ್ಭದಲ್ಲಿ ವಿವರಿಸಿದರು.

Advertisement

2016-17ನೇ ಸಾಲಿನಿಂದ 2017-18ರ ವರೆಗೆ ತೊಗರಿ, ಹೆಸರು ಹಾಗೂ ಕಡಲೆ ಕಾಳನ್ನು ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಿದ ಎಲ್ಲಾ ರೈತರಿಗೆ ಹಣ ಪಾವತಿಯಾದ ಬಗ್ಗೆ ಮಾಹಿತಿ ಪಡೆದ ಟಿ.ಕೆ. ಅನಿಲಕುಮಾರ ಅವರು, ಪ್ರಸಕ್ತ ಸಾಲಿನಲ್ಲಿ ಹೆಸರು ಕಾಳು ಖರೀದಿಯಲ್ಲಿ ಸಂದಾಯವಾಗಬೇಕಿದ್ದ 1,178 ರೈತರ ಖಾತೆಗೆ ಶೀಘ್ರ ಹಣ ಪಾವತಿ ಮಾಡುವಂತೆ ನಿರ್ದೇಶಿಸಿದರು.

ರಾಜ್ಯ ಸರ್ಕಾರ ಘೋಷಿಸಿದ ವಾಣಿಜ್ಯ ಬ್ಯಾಂಕ್‌ಗಳ ಸಾಲ ಮನ್ನಾ ವ್ಯಾಪ್ತಿಯಲ್ಲಿ ಜಿಲ್ಲೆಯ 93,110 ರೈತರು ಬರುತ್ತಾರೆ. ಇದುವರೆಗೆ 66,038 ರೈತರಿಂದ ದಾಖಲೆ ಸಂಗ್ರಹಿಸಲಾಗಿದೆ. ಉಳಿದ ರೈತರ ದಾಖಲೆಗಳನ್ನು ತ್ವರಿತಗತಿಯಲ್ಲಿ ಸಂಗ್ರಹಿಸಿ, ಸಾಲ ಮನ್ನಾ ಯೋಜನೆಯಿಂದ ಅರ್ಹ ಯಾವುದೇ ರೈತರು ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದು ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕ ಆರ್‌. ಗೋಪಾಲ ಅವರಿಗೆ ಸೂಚಿಸಿದರು.

ಅಪರ ಜಿಲ್ಲಾಧಿಕಾರಿ ಪ್ರಕಾಶ್‌ ಜಿ. ರಜಪೂತ, ಪ್ರಾದೇಶಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್‌.ಎಸ್‌. ರವಿಶಂಕರ್‌, ಜಿಲ್ಲಾ ಪಂಚಾಯತ್‌ ಉಪ ಕಾರ್ಯದರ್ಶಿ ವಸಂತ ವಿ. ಕುಲಕರ್ಣಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಜಿಲ್ಲೆಯಲ್ಲಿ ಎಫ್‌.ಎ.ಕ್ಯೂ ಗುಣಮಟ್ಟದ ತೊಗರಿ ಖರೀದಿಗೆ 32 ಖರೀದಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಪ್ರತಿ ಕ್ವಿಂಟಲ್‌ಗೆ ಕೇಂದ್ರ ಸರ್ಕಾರದ ಬೆಂಬಲೆ ಬೆಲೆ 5675 ರೂ. ಹಾಗೂ ರಾಜ್ಯ ಸರ್ಕಾರದ ಪ್ರೋತ್ಸಾಹ ಧನ 425 ರೂ. ಗಳಂತೆ ಒಟ್ಟು 6,100 ರೂ. ನಿಗದಿಪಡಿಸಲಾಗಿದೆ. ರೈತರ ನೋಂದಣಿಗೆ ಜ. 19ರ ವರೆಗೆ ಅವಕಾಶ ಇದ್ದು, ಈಗಾಗಲೇ 16,157 ರೈತರು ಖರೀದಿ ಕೇಂದ್ರಗಳಲ್ಲಿ ಹೆಸರು ನೋಂದಾಯಿಸಿದ್ದಾರೆ.
• ಭೀಮರಾಯ, ಕೃಷಿ ಮಾರುಕಟ್ಟೆ ಸಮಿತಿ ಸಹಾಯಕ ನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next