Advertisement

ಆರೋಗ್ಯ ಕಾರ್ಡ್‌ಗೆ 10 ರೂ.ಗಿಂತ ಹೆಚ್ಚು ಕೊಡಬೇಡಿ

03:05 PM Apr 30, 2019 | Suhan S |

ಮಂಡ್ಯ: ಆರೋಗ್ಯ ಕರ್ನಾಟಕ ಕಾರ್ಡ್‌ನ್ನು ನಕಲು ಮಾಡಿ ಪ್ರತಿ ಕಾರ್ಡ್‌ಗೆ 200 ರೂ. ಹಣ ವಸೂಲಿ ಮಾಡಿ ಜನರನ್ನು ವಂಚಿಸುತ್ತಿದ್ದ ಪ್ರಕರಣ ಬಯಲಿಗೆ ಬಂದ ಬೆನ್ನಲ್ಲೇ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಎಚ್ಚೆತ್ತುಕೊಂಡಿದೆ. ಪ್ರತಿ ಆರೋಗ್ಯ ಕಾರ್ಡ್‌ಗೆ ಕನಿಷ್ಠ 10 ರೂ.ಗಳಿಂದ 35 ರೂ. ಮಾತ್ರ ದರ ನಿಗದಿಪಡಿಸಿದ್ದು, ಆರೋಗ್ಯ ಕಾರ್ಡ್‌ನ್ನು ಬಿಳಿ ಹಾಳೆಯಲ್ಲಿ ಮುದ್ರಿಸಿಕೊಟ್ಟರೆ 10 ರೂ., ಎಬಿಎಆರ್‌ಕೆ ಕಾರ್ಡ್‌ ನೀಡಿದರೆ 35 ರೂ. ಇದನ್ನು ಹೊರತುಪಡಿಸಿ 200 ರೂ.ವರೆಗೆ ಆರೋಗ್ಯ ಕಾರ್ಡ್‌ಗೆ ದರ ನಿಗದಿಪಡಿಸಿಲ್ಲ ಎನ್ನುವುದನ್ನು ಖಚಿತಪಡಿಸಿದೆ.

Advertisement

ಮಂಡ್ಯ ತಾಲೂಕಿನ ಕಮ್ಮನಾಯಕನಹಳ್ಳಿಯಲ್ಲಿ ಖಾಸಗಿ ಏಜೆನ್ಸಿ ಹೆಸರಿನಲ್ಲಿ ನಕಲಿ ಆರೋಗ್ಯ ನೀಡುತ್ತಿರುವ ಪ್ರಕರಣ ಉದಯವಾಣಿ ಪತ್ರಿಕೆಯ ಏ.29ರ ಸಂಚಿಕೆಯಲ್ಲಿ ಪ್ರಕಟವಾಗಿತ್ತು. ವರದಿ ಪ್ರಕಟವಾದ ಬೆನ್ನಲ್ಲೇ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಎಚ್ಚೆತ್ತುಕೊಂಡು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ. ಅದರಲ್ಲಿ ಆರೋಗ್ಯ ಕಾರ್ಡ್‌ನ ದರವನ್ನು ಸ್ಪಷ್ಟವಾಗಿ ನಮೂದಿಸಿದೆ. ಅಲ್ಲದೆ, ಸರ್ಕಾರಿ ಆಸ್ಪತ್ರೆ ಹಾಗೂ ಜಿಲ್ಲಾಧಿಕಾರಿ ಅನುಮತಿ ನೀಡಿರುವ 57 ಏಜೆನ್ಸಿ ಹೊರತುಪಡಿಸಿ ಯಾರಿಗೂ ಕಾರ್ಡ್‌ ಮಾಡಿಕೊಡಲು ಅನುಮತಿ ನೀಡಿರುವುದಿಲ್ಲ. ಗ್ರಾಮಗಳಿಗೆ ತೆರಳಿ ಆರೋಗ್ಯ ಕಾರ್ಡ್‌ ನೀಡುವುದಕ್ಕಾಗಲೀ, ಪ್ರತಿ ಕಾರ್ಡ್‌ಗೆ 200 ರೂ. ದರ ಪಡೆಯುವುದಕ್ಕೂ ಅನುಮತಿ ನೀಡಿಲ್ಲ ಎನ್ನುವುದನ್ನು ಖಚಿತ ಪಡಿಸಿದೆ.

57 ಏಜೆನ್ಸಿಗಳಿಗೆ ಅನುಮತಿ: ಜನಸಾಮಾನ್ಯರಿಗೆ ಸುಲಭವಾಗಿ ಆರೋಗ್ಯಕಾರ್ಡ್‌ ದೊರಕಿಸಿಕೊಡುವ ಉದ್ದೇಶದಿಂದ ಜಿಲ್ಲಾದ್ಯಂತ 57 ಖಾಸಗಿ ಏಜೆನ್ಸಿಗಳಿಗೆ ಜಿಲ್ಲಾಧಿಕಾರಿ ಅನುಮತಿ ನೀಡಿದ್ದಾರೆ. ಈ ಏಜೆನ್ಸಿಗಳು ಗ್ರಾಮಗಳಿಗೆ ತೆರಳದೆ ನಿಗದಿತ ಸ್ಥಳದಲ್ಲಿದ್ದುಕೊಂಡು ಜನರಿಗೆ ಆರೋಗ್ಯ ಕಾರ್ಡ್‌ ಮಾಡಿಕೊಡುವಂತೆ ಸೂಚಿಸಲಾಗಿದೆ.

ನಕಲಿ ಆರೋಗ್ಯಕಾರ್ಡ್‌ ಹೆಸರಿನಲ್ಲಿ ಜನರಿಗೆ ಆಗುತ್ತಿರುವ ವಂಚನೆಯನ್ನು ತಡೆಯಲು ಹಾಗೂ ಆರೋಗ್ಯ ಕಾರ್ಡ್‌ ಸುಲಭವಾಗಿ ಎಲ್ಲರಿಗೂ ದೊರೆಯುವಂತೆ ಮಾಡುವುದೇ ಇದರ ಹಿಂದಿನ ಮೂಲ ಉದ್ದೇಶವಾಗಿದ್ದು, ಜನಸಾಮಾನ್ಯರು ಆರೋಗ್ಯಕಾರ್ಡ್‌ಗಾಗಿ ಅಧಿಕ ಹಣ ಕೊಟ್ಟು ಮೋಸಹೋಗದೆ ನಿಗದಿತ ಏಜೆನ್ಸಿಗಳು, ಸಮುದಾಯ ಆರೋಗ್ಯ ಕೇಂದ್ರಗಳು, ತಾಲೂಕು ಆಸ್ಪತ್ರೆ ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲೇ ದಾಖಲೆ ಒದಗಿಸಿ ಆರೋಗ್ಯ ಕಾರ್ಡ್‌ ಪಡೆಯುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಹೆಚ್.ಪಿ. ಮಂಚೇಗೌಡ ತಿಳಿಸಿದರು.

ಜಿಲ್ಲೆಯ ಕೃಷ್ಣರಾಜಪೇಟೆ-13, ಮದ್ದೂರು-8, ಮವಳ್ಳಿ- 6, ಮಂಡ್ಯ-16, ನಾಗಮಂಗಲ-10, ಪಾಂಡವಪುರ-2 ಹಾಗೂ ಶ್ರೀರಂಗಪಟ್ಟಣ ತಾಲೂಕಿಗೆ 2 ಖಾಸಗಿ ಏಜೆನ್ಸಿಗಳಿಗೆ ಅನುಮತಿ ನೀಡಲಾಗಿದೆ.

Advertisement

ಮೇ 15ರೊಳಗೆ ಆರಂಭ: ಆಯುಷ್ಮಾನ್‌ ಭಾರತ್‌ ಕರ್ನಾ ಟಕ ಯೋಜನೆಯಡಿ ಎಬಿಎಆರ್‌ ಕೆ ಕಾರ್ಡ್‌ನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಪ್ರಾಥಮಿಕ ಹಂತದಲ್ಲಿ ಮಂಡ್ಯ ಹಾಗೂ ಮದ್ದೂರು ಸಾರ್ವಜನಿಕ ಆಸ್ಪತ್ರೆಗಳಲ್ಲಿ 10 ರೂ. ಶುಲ್ಕದೊಂದಿಗೆ ಬಿಳಿ ಹಾಳೆಯ ಮೇಲೆ 35 ರೂ. ಶುಲ್ಕದೊಂದಿಗೆ ಎಬಿಎಆರ್‌ಕೆ ಪಿವಿಸಿ ಕಾರ್ಡ್‌ ನೀಡಿ ನೋಂದಣಿ ಮಾಡಲಾಗುತ್ತಿದೆ. ಮೇ 15ರೊಳಗೆ ಎಲ್ಲಾ ತಾಲೂಕು ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ನೋಂದಣಿ ಕಾರ್ಯ ಆರಂಭಿಸಲಾಗುವುದು.

ಸರ್ಕಾರಿ ಸ್ವಾಮ್ಯದ 57 ಸೇವಾ ಕೇಂದ್ರ: ಇದಲ್ಲದೆ ಸರ್ಕಾರಿ ಸ್ವಾಮ್ಯದ 57 ಸೇವಾ ಸಿಂಧು ಕೇಂದ್ರಗಳ ಮೂಲಕವೂ ಆರೋಗ್ಯಕಾರ್ಡ್‌ ಪಡೆಯಬಹುದು. ಕಾರ್ಡ್‌ ಪಡೆಯಲು ನೀಡುವ ದರದಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲ. ಯಾವುದೇ ಕೇಂದ್ರದಲ್ಲಿ ನಿಗದಿತ ಶುಲ್ಕಕ್ಕಿಂತ ಹೆಚ್ಚು ಹಣ ಪಡೆದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿ, ಎಬಿಎಆರ್‌ಕೆ ನೋಡಲ್ ಅಧಿಕಾರಿ, ಜಿಲ್ಲಾ ಕಾರ್ಯಕ್ರಮ ಸಂಯೋಜಕರು, ಉಚಿತ ಆರೋಗ್ಯ ಸಹಾಯವಾಣಿ-104 ಅಥವಾ 1800-425-8330 ನಂಬರ್‌ಗೆ ಕರೆ ಮಾಡಿ ದೂರು ಸಲ್ಲಿಸಬಹುದು.

ಆತಂಕ ಬೇಡ: ಕಾರ್ಡ್‌ ನೋಂದಣಿ ನಿರಂತರವಾಗಿದ್ದು, ಜನಸಾಮಾನ್ಯರು ಆತಂಕಪಡುವ ಅಗತ್ಯವಿಲ್ಲ. ಬಿಪಿಎಲ್ ಹಾಗೂ ಎಪಿಎಲ್ ಕಾರ್ಡ್‌ ಹೊಂದಿರುವ ರೋಗಿಗಳು ಎಬಿಎಆರ್‌ಕೆ ಕಾರ್ಡ್‌ ಇಲ್ಲದಿದ್ದರೂ ಚಿಕಿತ್ಸೆ ಪಡೆಯಬಹುದಾಗಿದೆ. ಈ ಯೋಜನೆಯಡಿ 17 ಸರ್ಕಾರಿ ಆಸ್ಪತ್ರೆಗಳು ಹಾಗೂ 10 ಖಾಸಗಿ ಆಸ್ಪತ್ರೆಗಳು ನೋಂದಾಯಿಸಿವೆ.

ಸರ್ಕಾರಿ ಆಸ್ಪತ್ರೆಗಳು ಹಾಗೂ ನಿಗದಿತ ಏಜೆನ್ಸಿಗಳನ್ನು ಹೊರತುಪಡಿಸಿ ಗ್ರಾಮಗಳಿಗೆ ಬಂದು ಜನರ ಬಳಿ ಆರೋಗ್ಯ ಕಾರ್ಡ್‌ ಮಾಡುವುದಕ್ಕೆ ಯಾರಿಗೂ ಅನುಮತಿ ನೀಡಿರುವುದಿಲ್ಲ. ಪ್ರತಿ ಕಾರ್ಡ್‌ಗೆ ಗರಿಷ್ಠ ದರವೇ 35 ರೂ. ಒಂದು ಕಾರ್ಡ್‌ಗೆ 200 ರೂ. ಪಡೆಯುವುದಕ್ಕೆ ಯಾರಿಗೂ ಅವಕಾಶವಿಲ್ಲ. ಜನರು ಆರೋಗ್ಯ ಕಾರ್ಡ್‌ಗೆ ಹೆಚ್ಚಿನ ಹಣ ನೀಡುವ ಬದಲು ಜಿಲ್ಲಾಧಿಕಾರಿ ಅನುಮತಿ ನೀಡಿರುವ ಏಜೆನ್ಸಿಗಳು ಹಾಗೂ ಆಸ್ಪತ್ರೆಗಳಲ್ಲೇ ಪಡೆಯುವಂತೆ ಡಿಹೆಚ್ಒ ಮಂಚೇಗೌಡ ತಿಳಿಸಿದ್ದಾರೆ.

ಕಮ್ಮನಾಯಕನಹಳ್ಳಿಯಲ್ಲಿ ಜಾಗೃತಿ:

ಪ್ರತಿ ಕಾರ್ಡ್‌ಗೆ 200 ರೂ. ದರ ನಿಗದಿಪಡಿಸಿ ನಕಲಿ ಆರೋಗ್ಯ ಕಾರ್ಡ್‌ ವಿತರಣೆಗೆ ಯತ್ನಿಸಿದ್ದ ಕಮ್ಮನಾಯಕನಹಳ್ಳಿ ಗ್ರಾಮದಲ್ಲಿ ಸೋಮವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ಸಿಬ್ಬಂದಿ ತೆರಳಿ ಜನರಲ್ಲಿ ಜಾಗೃತಿ ಮೂಡಿಸಿದರು.

ಆರೋಗ್ಯಕಾರ್ಡ್‌ಗಾಗಿ ಜನರು ಹೆಚ್ಚು ಹಣ ಕೊಟ್ಟು ಮೋಸ ಹೋಗಬಾರದು. ಮಧ್ಯವರ್ತಿಗಳನ್ನೂ ಅವಲಂಬಿಸಬಾರದು. ಸರ್ಕಾರಿ ಆಸ್ಪತ್ರೆಗಳು ಹಾಗೂ ಜಿಲ್ಲಾಧಿಕಾರಿ ಅನುಮತಿ ನೀಡಿರುವ ಏಜೆನ್ಸಿಗಳ ಬಳಿಯೇ ಆರೋಗ್ಯ ಕಾರ್ಡ್‌ ಮಾಡಿಸುವಂತೆ ಜನರಿಗೆ ತಿಳಿಸಿಕೊಟ್ಟರು.

ಭಾನುವಾರ ಆರೋಗ್ಯ ಕಾರ್ಡ್‌ ಮಾಡಿಕೊಡುವುದಾಗಿ ಬಂದಿದ್ದವರು ಯಾರು, ಯಾವ ಕಾರ್ಡ್‌ ನೀಡಿದ್ದಾರೆ ಎಂಬೆಲ್ಲಾ ಮಾಹಿತಿ ಪಡೆದುಕೊಂಡರಲ್ಲದೆ ಅಸಲಿ ಹಾಗೂ ನಕಲಿ ಕಾರ್ಡ್‌ಗಳಿಗೆ ಇರುವ ವ್ಯತ್ಯಾಸವನ್ನು ತೋರಿಸಿದರು. ಜಿಲ್ಲಾದ್ಯಂತ ಹಲವೆಡೆ ಆರೋಗ್ಯ ಕಾರ್ಡ್‌ ನೀಡುವ ನೆಪದಲ್ಲಿ ಜನರನ್ನು ವಂಚಿಸಲಾಗುತ್ತಿದೆ. ಇದರ ಬಗ್ಗೆ ಜನರು ಜಾಗೃತಗೊಳ್ಳಬೇಕು ಎಂದು ತಿಳಿವಳಿಕೆ ನೀಡಿದರು.

ಹಲವು ಊರುಗಳಲ್ಲಿ ಹಣ ವಸೂಲಿ:

ಕಮ್ಮನಾಯಕನಹಳ್ಳಿಗೆ ಬರುವ ಮುನ್ನವೇ ನಕಲಿ ಆರೋಗ್ಯ ಕಾರ್ಡ್‌ ವಿತರಿಸುವ ತಂಡ ಮಂಡ್ಯ ತಾಲೂಕಿನ ತಗ್ಗಹಳ್ಳಿ, ಪುರ, ಮಂಗಲ ಗ್ರಾಮಗಳಲ್ಲೂ ಆರೋಗ್ಯ ಕಾರ್ಡ್‌ ನೀಡುವ ನೆಪದಲ್ಲಿ ಜನರಿಂದ 200 ರೂ. ಹಣ ವಸೂಲಿ ಮಾಡಿ ನಕಲಿ ಕಾರ್ಡ್‌ಗಳನ್ನು ನೀಡಿದೆ. ಕಮ್ಮನಾಯಕನಹಳ್ಳಿ ಗ್ರಾಮದಲ್ಲೂ ಹಲವರು ದುಪ್ಪಟ್ಟು ಹಣ ಕೊಟ್ಟು ನಕಲಿ ಕಾರ್ಡ್‌ ಪಡೆದುಕೊಂಡಿರುವುದು ಗೊತ್ತಾಗಿದೆ.
Advertisement

Udayavani is now on Telegram. Click here to join our channel and stay updated with the latest news.

Next