Advertisement

ದುಡಿಯುವ ಕೈಗಳಿಗೆ ಭೂಮಿ ನೀಡಲು ಮನಸಿಲ್ಲ

11:51 AM Dec 19, 2017 | Team Udayavani |

ಬೆಂಗಳೂರು: ದುಡಿಯುವ ಕೈಗಳಿಗೆ ಭೂಮಿ ಕೊಡಲು ಸರ್ಕಾರಗಳಿಗೆ ಮನಸ್ಸಿಲ್ಲ ಎಂದು ಸಾಮಾಜಿಕ ಚಿಂತಕಿ ಡಾ.ವಿಜಯಮ್ಮ ಬೇಸರ ವ್ಯಕ್ತಪಡಿಸಿದ್ದಾರೆ. ಸೋಮವಾರ ಸಂಭ್ರಮ ಸಂಸ್ಥೆ, ಅಖೀಲ ಭಾರತ ಸಮರ ಕಲೆ ಪರಿಷತ್‌, ಅಖೀಲ ಕರ್ನಾಟಕ ಜಾನಪದ ಕಲಾವಿದರ ಒಕ್ಕೂಟದ ಸಹಯೋಗದಲ್ಲಿ ನಗರದ ರವೀಂದ್ರ ಕಲಾಕ್ಷೇತ್ರದ ಸಂಸ ರಂಗಮಂದಿರಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಲೋಕ ಕಲಾ ಮಹೋತ್ಸವವನ್ನು ನಗಾರಿ ಬಡಿಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಸಂವಿಧಾನದಲ್ಲಿ ಇರುವಂತೆ ಯಾರಿಗೆ ಭೂಮಿ ಇಲ್ಲವೋ ಅವರಿಗೆ ಭೂಮಿ, ಮನೆ ಇಲ್ಲದವರಿಗೆ ಮನೆ ಕೊಡುವುದನ್ನು ಬಿಟ್ಟು ಸರ್ಕಾರಗಳು ಮತ್ತೇನು ಮಾಡುತ್ತಿವೆಯೋ ಗೊತ್ತಿಲ್ಲ. ಕಲಾವಿದರ ಕುಟುಂಬಗಳು ತುಂಬಾ ಬಡತನದಲ್ಲಿವೆ. ಜೀವನೋಪಾಯಕ್ಕಾಗಿ ಬೇರೆಯವರ ಜಮೀನಿನಲ್ಲಿ ಜೀತ ಮಾಡುವಂತ  ಅಮಾನವೀಯ ಸ್ಥಿತಿಯಲ್ಲಿದ್ದು, ಇಂತಹ ದುಡಿಯುವ ಕೈಗಳಿಗೆ ಭೂಮಿ ಕೊಡಲು ಸರ್ಕಾರಗಳು ಮನಸ್ಸು ಮಾಡಬೇಕಾದ ಅವಶ್ಯಕತೆ ಇದೆ ಎಂದರು.

ಸರ್ಕಾರಗಳು ಜಾತಿಗೊಂದು ಜಯಂತಿ ಮಾಡುತ್ತಿವೆ. ಈ ಸಂದರ್ಭದಲ್ಲಿ ಜನಪದ ಕಲಾತಂಡಗಳನ್ನು ಮೆರವಣಿಗೆಯಲ್ಲಿ ತಂದು ಕುಣಿಸಲಾಗುತ್ತಿದೆ. ಯಾರಧ್ದೋ ಮೆರವಣಿಗೆಗೆ ಈ ಕಲಾವಿದರನ್ನು ಬಳಸಿಕೊಳ್ಳುವುದಕ್ಕೆ ಮಾತ್ರ ಸೀಮಿತ ಮಾಡುತ್ತಿರುವುದು ವಿಪರ್ಯಾಸ. ಭಾರತೀಯ ಸಂಸ್ಕೃತಿ ಉಳಿದಿರುವುದು ಇಂತಹ ಕಲಾವಿದರು ಮತ್ತು ಕಲೆಗಳಿಂದ ಎಂಬುದನ್ನು ಮರೆಯಬಾರದು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಬಡ ಕಲಾವಿದರ ನೆರವಿಗೆ ಮತ್ತು ನ್ಯಾಯ ಒದಗಿಸಲು ಮುಂದಾಗಬೇಕು ಎಂದು ಮನವಿ ಮಾಡಿದರು. ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಎಂ.ಸಿದ್ದರಾಜು ಮಾತನಾಡಿ, ಕಲಾವಿದರ ನೆರವಿಗೆ ಮಾಧ್ಯಮ ಯಾವಾಗಲೂ ಸಿದ್ಧವಿದೆ. ಸರ್ಕಾರಗಳು ಸಮರ ಕಲೆಗೆ ಪ್ರತ್ಯೇಕ ಅಕಾಡೆಮಿ ಮಾಡುವ ನಿಟ್ಟಿನಲ್ಲಿ ಪ್ರಯತ್ನಗಳನ್ನ ನಡೆಸುತ್ತಿರುವ ಹಿರಿಯ ಕಲಾವಿದರಿಗೆ ಮಾಧ್ಯಮ ಕ್ಷೇತ್ರವು ಅಗತ್ಯ ನೆರವು ಒದಗಿಸಲಿದೆ ಎಂದು ಹೇಳಿದರು.

ಚಲನಚಿತ್ರ ನಿರ್ದೇಶಕ ಟಿ.ಎಸ್‌.ನಾಗಾಭರಣ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಚಲನಚಿತ್ರ ಸಾಹಸ ನಿರ್ದೇಶಕ ಹಾಸನ ರಘು, ದೆಹಲಿಯ ಎಐಎಫ್ಟಿಎ ಪರಿಷತ್‌ ಅಧ್ಯಕ್ಷ ನಿರ್ಮಲ್‌ ರತನ್‌ಲಾಲ್‌ ವೈದ್‌, ಅಖೀಲ ಕರ್ನಾಟಕ ಜಾನಪದ ಕಲಾವಿದರ ಒಕ್ಕೂಟದ ಅಧ್ಯಕ್ಷ ಜೋಗಿಲ ಸಿದ್ದರಾಜು, ಮಧ್ಯಪ್ರದೇಶದ ಮಾಂಗಿಲಾಲ್‌, ಕೇರಳದ ಅನಿಲ್‌ಕುಮಾರ್‌ ಪುತ್ಥಲ್‌, ತಮಿಳುನಾಡಿನ ಡಾ.ಟಿ.ಸುಂದರಂ ಮತ್ತಿತರರು ಉಪಸ್ಥಿತರಿದ್ದರು. 

Advertisement

ಕಲಾ ಪ್ರದರ್ಶನ: ಕಾರ್ಯಕ್ರಮದಲ್ಲಿ ಕೇರಳದ ಗಿಲ್ಸ್‌ಟನ್‌ ಪ್ರಕಾಶ್‌ ಮತ್ತು ತಂಡದಿಂದ ಕಲರಿ ಫ‌ಯಟ್‌, ಛತ್ತೀಸ್‌ಘರ್‌ನ ಚೇತನ್‌ ಯಾದವ್‌ ಅವರಿಂದ ಅಖಾಡ ಕರ್ತಂ, ಪಳನಿವೇಲು ಅವರಿಂದ ಸಿಲಂಬಾಟಂ (ಪಾಂಡಿಚೇರಿ), ಅಭಿಜಿತ್‌ ಪಾಟೋಳಿ ಅವರಿಂದ ದಂಡಪಾಟಿಯ (ಮಹಾರಾಷ್ಟ್ರ), ಸಾಹಸ ಕಲಾ ಶಿಕ್ಷಣ ಕೇಂದ್ರದಿಂದ ದೊಣ್ಣೆವರಸೆ, ಚಂದ್ರಕುಮಾರ್‌ ಮತ್ತು ತಂಡದಿಂದ ಡೊಳ್ಳು ಕುಣಿತ (ರಾಮನಗರ), ಪಾರ್ಥಸಾರಥಿ ಮತ್ತು ತಂಡದಿಂದ ಪೂಜಾ ಕುಣಿತ (ಮಂಡ್ಯ), ಆಕ್ಷನ್‌ಮೂರ್ತಿ ಮತ್ತು ತಂಡದಿಂದ ಆಕ್ರೋಬ್ಯಾಟ್‌ (ಬೆಂಗಳೂರು), ಶಿವಮಾದಯ್ಯ ಮತ್ತು ತಂಡದಿಂದ ಪೂಜಾ ಕುಣಿತ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next