ಬೆಂಗಳೂರು: ಗೋವಾ ಸರ್ಕಾರ ಮಹದಾಯಿ ನೀರಿನ ಬಳಕೆ ವಿಚಾರದಲ್ಲಿ ನ್ಯಾಯಾಧಿಕರಣಕ್ಕೆ ಸುಳ್ಳು ಮಾಹಿತಿ ನೀಡಬಾರದು ಎಂದು ಮಾಜಿ ಶಾಸಕ ಎನ್.ಎಚ್. ಕೋನರಡ್ಡಿ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆ.8 ರಂದು ಮಹದಾಯಿ ನ್ಯಾಯಾಧಿಕರಣದ ತೀರ್ಪು ಬರುವ ಸಾಧ್ಯತೆಯಿದೆ.
ತೀರ್ಪು ಕರ್ನಾಟಕದ ಪರವಾಗಿ ಬರುವ ಸಾಧ್ಯತೆ ಇರುವುದರಿಂದ ಗೋವಾ ಈ ರೀತಿ ಕ್ಯಾತೆ ತೆಗೆದಿದೆ ಎಂದು ಆರೋಪಿಸಿದ್ದಾರೆ.
ಗೋವಾ ಭಾಗದಲ್ಲಿ ಸಾಕಷ್ಟು ಮಳೆಯಾಗುತ್ತಿದ್ದು, ಸಾಕಷ್ಟು ನೀರು ಸಮುದ್ರಕ್ಕೆ ಹರಿದು ಹೋಗುತ್ತಿದೆ. ನಮಗೆ ಕುಡಿಯುವ ನೀರಿನ ಯೋಜನೆಗೆ ವಿರೋಧ ಮಾಡುತ್ತಿದ್ದಾರೆ. ಮಹದಾಯಿ ನದಿಗೆ ಗೋಡೆ ಕಟ್ಟಿರುವುದರಿಂದ ಅದನ್ನು ಒಡೆದರೆ ಮಾತ್ರ ನೀರು ಬರುತ್ತದೆ. ಆದರೆ, ನಾವು ನೀರು ಬಳಸಿಕೊಳ್ಳುತ್ತಿದ್ದೇವೆ ಎಂದು ಗೋವಾ ಅನಗತ್ಯ ಆರೋಪ ಮಾಡುತ್ತಿದೆ ಎಂದು ಕೋನರಡ್ಡಿ ಹೇಳಿದರು.
ಕುಡಿಯುವ ನೀರಿನ ವಿಚಾರದಲ್ಲಿ ಪ್ರಧಾನಿ ಮೋದಿ ಮಧ್ಯಸ್ಥಿಕೆ ವಹಿಸಿ ತೀರ್ಮಾನತೆಗೆದುಕೊಳ್ಳಬಹುದು. ಆದರೆ, ಮೋದಿಯವರು ಆ ಕೆಲಸ ಮಾಡಲಿಲ್ಲ. ಚುನಾವಣಾ ಸಂದರ್ಭದಲ್ಲಿ ಮಾತುಕತೆ ನಡೆಸುವುದಾಗಿ ಭರವಸೆ ನೀಡಿ ಮಹದಾಯಿ ವ್ಯಾಪ್ತಿಯ 13 ಕ್ಷೇತ್ರಗಳಲ್ಲಿ ಬಿಜೆಪಿ ಜಯಗಳಿಸಿತು. ಆದರೆ, ಏನೂ ಮಾಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.