ಅತಿಯಾದರೇ ಅಮೃತ ವಿಷ. ಜಗತ್ತಿನಲ್ಲಿ ಅನೇಕ ವಿಷಯಗಳ ಮೇಲೆ ಪ್ರಭಾವ ಬೀರುವ ಸಣ್ಣ ಮಾತಿದು. ಜೀವನ ಎಂದಿಗೂ ಸಮತೋಲನ ದೊಂದಿಗೆ ಓಡುತ್ತಿರುತ್ತವೆ. ಆಹಾರ, ನಿದ್ದೆ, ಕೆಲಸ ಕುಟುಂಬ ಮೊದಲಾದ ವಿಷಯಗಳನ್ನು ನಿಯಂತ್ರಿಸಲು ಸಾಧ್ಯವಾಗದೇ ಇದ್ದಾಗ ಒತ್ತಡ ಮನಸ್ಸಿನೊಳಗೆ ಪ್ರವೇಶ ಮಾಡಿಬಿಡುತ್ತವೆ. ಈ ವಿಷಯ ನಮ್ಮ ದೇಹಕ್ಕೂ ಅನ್ವಯವಾಗುತ್ತದೆ. ವರ್ಕ್‌ಔಟ್ ಮತ್ತು ಚೇತರಿಕೆ ನಡುವೆ ಸಮತೋಲನ ಕಾಯ್ದುಕೊಂಡು ಒತ್ತಡಕ್ಕೆ ಕಾರಣವಾಗದಂತೆ ಮಾಡುವುದು ಮುಖ್ಯವಾಗಿದೆ. ಆರೋಗ್ಯ ಮತ್ತು ಫಿಟ್‌ನೆಸ್ ಕಾಯ್ದುಕೊಳ್ಳಲು ಯಾವುದೋ ಒಂದು ದೈಹಿಕ ಚಟುವಟಿಕೆಯನ್ನು ಅಭ್ಯಾಸ ಮಾಡಿಕೊಳ್ಳುತ್ತೇವೆ. ಈ ಗುರಿ ತಲುಪುವ ಸಲುವಾಗಿ ಮೈಮೇಲೆ ಒತ್ತಡವನ್ನು ಹೇರಿಕೊಳ್ಳುತ್ತೇವೆ. ಈ ಒತ್ತಡದ ವರ್ಕ್‌ಔಟ್‌ದಿಂದ ದೇಹಕ್ಕೆ ಯಾವುದೇ ಲಾಭವಾಗುವುದಿಲ್ಲ. ಹೀಗಾಗಿ ಒತ್ತಡ ರಹಿತ ವರ್ಕ್‌ಔಟ್ ಅತಿ ಮುಖ್ಯ.
ವ್ಯಾಯಾಮದ ತತ್ವಗಳಲ್ಲಿ ಒಂದು ಅಳವಡಿಸುವಿಕೆ. ನಿರ್ದಿಷ್ಟ ಹಂತದ ತರಬೇತಿಯ ಅನಂತರ ಚೇತರಿಸಿಕೊಳ್ಳಲು ಸಾಕಷ್ಟು ಸಮಯ ನೀಡಲಾರಂಭಿಸಿದರೇ ಮಾತ್ರ ಅಳವಡಿಸುವಿಕೆ ಕೆಲಸ ಮಾಡುತ್ತದೆ. ವ್ಯಾಯಾಮದಿಂದ ದೇಹ ಮುರಿದರೆ, ವಿಶ್ರಾಂತಿಯಿಂದ ದೇಹ ಬಲಿಷ್ಠವಾಗುತ್ತದೆ.
ವ್ಯಾಯಾಮದೊಂದಿಗೆ ಚೇತರಿಕೆಯೂ ಮುಖ್ಯ
ಫಿಟ್‌ನೆಸ್ ಕಾಯ್ದುಕೊಳ್ಳಲು ಪ್ರತಿನಿತ್ಯ ವ್ಯಾಯಾಮ, ಜಾಗಿಂಗ್, ರನ್ನಿಂಗ್ ಮೊದಲಾದವುಗಳನ್ನು ಅಭ್ಯಾಸ ಮಾಡಿಕೊಂಡಿರುವವರು ಚೇತರಿಕೆಗೂ ಸಮಯ ನೀಡಬೇಕು. ಒಂದು ವೇಳೆ ಸೈಕ್ಲಿಂಗ್ ನಡೆಸುತ್ತಿದ್ದರೇ ಸೈಕ್ಲಿಂಗ್ ಬಳಿಕ ಎಷ್ಟು ವಿಶ್ರಾಂತಿ ಅಗತ್ಯವಿದೆ ಎಂಬುದನ್ನು ಅರಿತಿರಬೇಕು. 3 ವಾರಗಳ ಕಾಲ ಶಕ್ತಿ ವೃದ್ಧಿಸಿಕೊಳ್ಳಲು ಕಷ್ಟಪಟ್ಟು ವರ್ಕ್ ಔಟ್ ಮಾಡುತ್ತಿದ್ದರೆ ಒಂದು ವಾರದ ಚೇತರಿಕೆ ಅದಕ್ಕೆ ಅಗತ್ಯವಿದೆ. ಫಿಟ್‌ನೆಸ್ ಕಾಯ್ದುಕೊಳ್ಳಲು ಒತ್ತಡವನ್ನು ಮೈಗೆಳೆದುಕೊಂಡರೆ ಮಾಡುವ ಕೆಲಸ ಪ್ರಯೋಜನಕ್ಕೆ ಬಾರದು. ಒತ್ತಡ ಮನಸ್ಸು ಮಾತ್ರವಲ್ಲದೇ ದೇಹವನ್ನು ಹಾಳುಗೆಡುವುತ್ತದೆ.
ಮುಟ್ಟು ನಿಲ್ಲುವ ಕಾಲ ದಲ್ಲಿ ಸ್ನಾಯು ಮತ್ತು ಮೂಳೆ ಗಳನ್ನು ಬಲವಾಗಿಟ್ಟು ಕೊಳ್ಳಲು ಮಧ್ಯವಯಸ್ಕ ಮಹಿಳೆಯರು ವಿಶೇಷವಾಗಿ ಪ್ರತಿರೋಧ ವ್ಯಾಯಾಮಗಳನ್ನು ಮಾಡುವ ಅಗತ್ಯವಿದೆ. ಆದರ್ಶ ವ್ಯಾಯಾಮ ಯೋಜನೆಯೂ 2-3 ಸೆಶನ್‌ಗಳ ಪ್ರತಿರೋಧ ತರಬೇತಿ ಮತ್ತು 3-4 ಸೆಶನ್‌ಗಳ ಹೃದಯರಕ್ತನಾಳಕ್ಕೆ ಸಂಬಂಧಿಸಿದ ತರಬೇತಿಗಳಿಂದ ಕೂಡಿರಬೇಕು. ಇವೆಲ್ಲವನ್ನು 30-60 ನಿಮಿಷಗಳ ಕಾಲ ಅಭ್ಯಸಿಸಬೇಕು. ಅನಂತರ ಫ್ಲೆಕ್ಸಿಬಲಿಟಿ ಮತ್ತು ಚಲನಶೀಲ ಚಟುವಟಿಕೆಗಳು ಕೂಡ ವರ್ಕ್‌ಔಟ್ ಯೋಜನೆಯಲ್ಲಿರುಬೇಕು. 3-4 ವಾರಗಳ ವ್ಯಾಯಾಮಗಳ ಬಳಿಕ ಒಂದು ವಾರ ಚೇತರಿಕೆಗಾಗಿ ಮೀಸಲಿಡಬೇಕು. ತರಬೇತಿಗೆ ತಕ್ಕಂತೆ ಚೇತರಿಕೆಯ ಯೋಜನೆಯನ್ನು ಹಾಕಿಕೊಳ್ಳಿ.
ಫಿಟ್ ಆಗಿರುವುದು ಎಲ್ಲರಿಗೂ ಇಷ್ಟ. ದೇಹದ ತೂಕ ಹೆಚ್ಚದಂತೆ ಸಮತೋಲಿತ ತೂಕ ಇಟ್ಟುಕೊಳ್ಳುವುದನ್ನು ಹೆಚ್ಚಿನವರು ಇಷ್ಟಪಡುತ್ತಾರೆ. ಇದಕ್ಕಾಗಿ ವರ್ಕ್‌ಔಟ್, ವ್ಯಾಯಾಮ ಮೊದಲಾದ ತರಬೇತಿಗಳಿಗೆ ಮೊರೆ ಹೋಗುತ್ತಾರೆ. ಇದರೊಂದಿಗೆ ಒತ್ತಡವನ್ನು ಮೈಗೆಳೆದುಕೊಳ್ಳುವ ಅಭ್ಯಾಸ ಹೆಚ್ಚಿನವರಿಗಿದೆ. ಒತ್ತಡದಲ್ಲಿ ದೇಹವನ್ನು ದಂಡಿಸಲು ಹೊರಟರೇ ಅದರಿಂದ ಯಾವುದೇ ಪ್ರಯೋಜನವಿಲ್ಲ. ನಿರ್ದಿಷ್ಟ ಗುರಿಯನ್ನು ತಲುಪಲು ಸಾಧ್ಯವಾಗಲಿಲ್ಲ ಎಂದು ಒತ್ತಡಕ್ಕೊಳಗಾಗದೇ ಮಾಡಿದ ವ್ಯಾಯಾಮದ ಬಳಿಕ ಒಂದಷ್ಟು ಚೇತರಿಕೆಗೂ ಆದ್ಯತೆ ನೀಡಿದರೇ ಉತ್ತಮ.