ಜಗಳೂರು: ಬ್ಯಾಂಕ್ ಅಧಿಕಾರಿಗಳು ರೈತರಿಂದ ಬಲವಂತವಾಗಿ ಸಾಲ ವಸೂಲಿ ಮಾಡುತ್ತಿದ್ದಾರೆಂದು ಆರೋಪಿಸಿ ರೈತ ಸಂಘದ ನೇತೃತ್ವದಲ್ಲಿ ಪಟ್ಟಣದಲ್ಲಿ ಪ್ರತಿಭಟನೆ ನಡೆಯಿತು.
ಇಲ್ಲಿನ ಪ್ರವಾಸಿ ಮಂದಿರದಿಂದ ಎಸ್‌ಬಿಎಂ ಬ್ಯಾಂಕ್‌ವರೆಗೆ ತಾಲೂಕು ರೈತರ ಸಂಘ (ಹುಚ್ಚವ್ವನಹಳ್ಳಿ ಮಂಜುನಾಥ ಬಣ) ನೇತೃತ್ವದಲ್ಲಿ ಗುರುವಾರ ಪ್ರತಿಭಟನಾ ಮೆರವಣಿಗೆ ನಡೆಸಿದ ರೈತರು, ಅಧಿಕಾರಿಗಳ ವಿರುದ್ಧ ಆಕ್ರೋಶ
ವ್ಯಕ್ತಪಡಿಸಿದರು.
ಪಟ್ಟಣದ ಎಸ್‌ಬಿಐ ಬ್ಯಾಂಕ್‌ಗೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರು, ರೈತರು ಅಡವಿಟ್ಟ ಬಂಗಾರದ ಒಡವೆ ಮತ್ತು ವಾಹನಗಳನ್ನು ಜಪ್ತಿ ಮಾಡುತ್ತಿರುವುದನ್ನು ನಿಲ್ಲಿಸಬೇಕೆಂದು ಬ್ಯಾಂಕ್ ಅಧಿಕಾರಿಗಳನ್ನು ಒತ್ತಾಯಿಸಿ ಬ್ಯಾಂಕ್ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.
ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಿರಂಜೀವಿ ಮಾತನಾಡಿ, ತಾಲೂಕಿನ ವಿವಿಧ ಬ್ಯಾಂಕ್‌ಗಳು ಬಲವಂತದ ಸಾಲ ವಸೂಲಿ ಮಾಡುವ ಉದ್ದೇಶದಿಂದ ರೈತರಿಗೆ ನೋಟಿಸ್ ಜಾರಿ ಮಾಡುತ್ತಿದ್ದಾರೆ. ಕೃಷಿ ಚಟುವಟಿಕೆಗಳಿಗಾಗಿ
ಒತ್ತೆ ಇಟ್ಟ ಒಡವೆಗಳನ್ನು ಹರಾಜು ಹಾಕಲು ಸೆ. 12 ರಂದು ದಿನಾಂಕ ನಿಗದಿಯಾಗಿದೆ. ಇದು ರೈತರ ವಿರೋಧಿ ನೀತಿಯಾಗಿದೆ ಎಂದು ದೂರಿದರು. ಹಲವೆಡೆ ಟ್ರಾಕ್ಟರ್‌ಗಳನ್ನು ಜಪ್ತಿ ಮಾಡಿದ್ದಾರೆ.
ಬಲವಂತ ಸಾಲ ವಸೂಲಿಯನ್ನು ಶೀಘ್ರವೇ ನಿಲ್ಲಿಸಬೇಕು ಎಂದು ಒತ್ತಾಯಿಸಿದರು. ಹಸಿರು ಸೇನೆಯ ಅಧ್ಯಕ್ಷ ಗಡಿಮಾಕುಂಟೆ ಬಸವರಾಜಪ್ಪ, ಮುಖಂಡರಾದ ರಾಜಪ್ಪ, ಚೌಡಪ್ಪ, ದುರುಗಪ್ಪ, ಬಾಲರಾಜ್, ಗುರುಸಿದ್ದಪ್ಪ, ಹಾಲೇಶ್, ಮಹಾತ್ಮ, ಬಸಣ್ಣ, ಲೋಕೇಶ್, ತಿಮ್ಮಾರೆಡ್ಡಿ, ತಿಪ್ಪೇಸ್ವಾಮಿ, ಮಂಜಣ್ಣ ಇತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.